ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork |  
Published : Nov 26, 2025, 02:15 AM IST
25ಎಸ್.ಎನ್.ಡಿ02ವಿಜಯನಗರ ಹಾಗೂ ಬಳ್ಳಾರಿ ಪ್ಯಾಕ್ಸ್ ನೌಕರರ ಕ್ಷೇಮಾಭಿವೃದ್ಧಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ನೌಕರರು ಸೋಮವಾರ ಬಳ್ಳಾರಿಯಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ್ತು ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲಾ ಪ್ಯಾಕ್ಸ್ ನೌಕರರ ಕ್ಷೇಮಾಭಿವೃದ್ಧಿ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿದರು.

ಸಂಡೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ್ತು ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲಾ ಪ್ಯಾಕ್ಸ್ ನೌಕರರ ಕ್ಷೇಮಾಭಿವೃದ್ಧಿ ಒಕ್ಕೂಟದ ಮುಖಂಡರು ಸೋಮವಾರ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳು ಹಾಗೂ ಸಹಕಾರಿ ಸಂಘಗಳ ಉಪ ನಿಬಂಧಕರು ಮತ್ತು ಸಹಾಯಕ ನಿಬಂಧಕರ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.

ಮನವಿ ಪತ್ರ ಸಲ್ಲಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕರೆಗೌಡ, ಸರ್ಕಾರದ ಶೂನ್ಯ ಬಡ್ಡಿದರದ ಯೋಜನೆಯಲ್ಲಿ ಸಹಕಾರ ಸಂಘಗಳಿಗೆ ವಸೂಲಾತಿ ಆಧಾರದ ಮೇಲೆ ನೀಡುವ ಬಡ್ಡಿ ಮಾರ್ಜಿನ್ ಅನ್ನು ಶೇ. 3ಕ್ಕೆ ಹೆಚ್ಚಿಸಬೇಕು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಕನಿಷ್ಠ ವೇತನ ಹಾಗೂ ಸೇವಾ ಸೌಲಭ್ಯಗಳನ್ನು ನೀಡಬೇಕು. ಬಹುತೇಕ ಸಹಕಾರ ಸಂಘಗಳ ಕಚೇರಿ ಕಟ್ಟಡಗಳು ಹಳೆಯದಾಗಿರುವುದರಿಂದ, ನೂತನ ಕಚೇರಿಗಳನ್ನು ನಿರ್ಮಾಣ ಮಾಡಲು ಅನುದಾನ ನೀಡಬೇಕು ಎಂದರು.

ರಾಜ್ಯ ಸರ್ಕಾರದ 2018ನೇ ಸಾಲಿನ ಸಾಲಾಮನ್ನಾ ಯೋಜನೆಯಲ್ಲಿ ಅರ್ಹತೆಯ ಪಟ್ಟಿಯಲ್ಲಿರುವ ರೈತರ ಸಾಲಾಮನ್ನಾ ಮೊತ್ತ ಬಿಡುಗಡೆ ಮಾಡಬೇಕು. ಯಶಸ್ವಿನಿ ಯೋಜನೆಯಲ್ಲಿನ ಸಂಘಗಳಿಗೆ ಪ್ರೋತ್ಸಾಹ ಧನವನ್ನು ಪ್ರತಿ ಕುಟುಂಬಕ್ಕೆ ₹100ಕ್ಕೆ ನಿಗದಿಗೊಳಿಸಬೇಕು. ಕೆಸಿಸಿ ಸಾಲಗಳ ವಿತರಣೆಯನ್ನು ಸರಳೀಕರಣಗಳಿಸಿ, ಸಂಪೂರ್ಣ ಆನ್‌ಲೈನ್ ವ್ಯವಸ್ಥೆ ಮಾಡಬೇಕು ಎಂಬುವು ನಮ್ಮ ಪ್ರಮುಖ ಬೇಡಿಕೆಗಳಾಗಿದ್ದು, ಅವುಗಳ ಈಡೇರಿಕೆಗೆ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ದ್ಯಾಮನಗೌಡರ ಬಸವರಾಜ, ಖಜಾಂಚಿ ಕಟ್ಟೆ ಯರಿಸ್ವಾಮಿ, ಸಂಡೂರು ತಾಲೂಕು ಘಟಕದ ಅಧ್ಯಕ್ಷ ಕೆ.ಶಿವಲಿಂಗಪ್ಪ, ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರೀಶ ವಿರುದ್ಧ ಸುಳ್ಳು ಕೇಸ್: ಶೀಘ್ರ ಹೋರಾಟ- ಸಿದ್ದೇಶ್ವರ
ಸಮರ್ಪಣ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಚಾಲನೆ