ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿದ ವ್ಯಕ್ತಿ ಸ್ಥಳದಲ್ಲಿ ಇರಲಿಲ್ಲ. ಆತನ ಟ್ರ್ಯಾಕ್ಟರ್ ಸಹ ಇರಲಿಲ್ಲ. ಆ ವ್ಯಕ್ತಿಗೆ ಕರೆಸಿಕೊಂಡು ಒತ್ತಾಯ ಪೂರ್ವಕವಾಗಿ ಜಾತಿ ನಿಂದನೆ ಕೇಸ್ ದಾಖಲು ಮಾಡಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಆರೋಪಿಸಿದ್ದಾರೆ.

- ದೂರುದಾರನಲ್ಲಿ ಟ್ರ್ಯಾಕ್ಟರ್ ಇಲ್ಲ, ಸ್ಥಳದಲ್ಲೇ ಇರಲಿಲ್ಲ: ಆರೋಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿದ ವ್ಯಕ್ತಿ ಸ್ಥಳದಲ್ಲಿ ಇರಲಿಲ್ಲ. ಆತನ ಟ್ರ್ಯಾಕ್ಟರ್ ಸಹ ಇರಲಿಲ್ಲ. ಆ ವ್ಯಕ್ತಿಗೆ ಕರೆಸಿಕೊಂಡು ಒತ್ತಾಯ ಪೂರ್ವಕವಾಗಿ ಜಾತಿ ನಿಂದನೆ ಕೇಸ್ ದಾಖಲು ಮಾಡಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಆರೋಪಿಸಿದರು.

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಶುಕ್ರವಾರ ಹರಿಹರ ಶಾಸಕ ಬಿ.ಪಿ.ಹರೀಶ ವಿರುದ್ಧ ದಾಖಲಿಸಿರುವ ಸುಳ್ಳು ಜಾತಿ ನಿಂದನೆ ಕೇಸ್ ವಿರುದ್ಧ ತಮ್ಮ ನೇತೃತ್ವದ ಹೋರಾಟ ಕುರಿತ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಡಜ್ಜಿಯಲ್ಲಿ ಅಕ್ರಮ ಮಣ್ಣು ಸಾಗಾಟ ಸ್ಥಳಕ್ಕೆ ಹೋಗಿದ್ದ ಶಾಸಕ ಹರೀಶ ಅಲ್ಲಿಂದ ಜಿಪಂ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಸಚಿವರ ದೌರ್ಜನ್ಯ, ಭ್ರಷ್ಟಾಚಾರದ ಬಗ್ಗೆ ಪ್ರತಿಭಟಿಸಿದ್ದಕ್ಕೆ ಸುಳ್ಳು ಕೇಸ್ ಹಾಕಿಸಿದ್ದಾರೆ. ಇಲ್ಲಿ ಜಿಲ್ಲಾಡಳಿತ ಸಂಪೂರ್ಣ ದುರುಪಯೋಗವಾಗುತ್ತಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಬಗ್ಗೆ ಪರಿಶೀಲಿಸಿದ ನಂತರವೇ ಅಟ್ರಾಸಿಟಿ ಕೇಸ್ ದಾಖಲಿಸಬೇಕು ಎಂದು ತಾಕೀತು ಮಾಡಿದರು.

ಯಾರೋ ಹೇಳಿದರೂ ಅಂತಾ ಅಟ್ರಾಸಿಟಿ ಕೇಸ್ ಹಾಕುವುದು ಒಳ್ಳೆಯ ವೃತ್ತಿಯಂತೂ ಅಲ್ಲ. ಈಗಾಗಲೇ ನಾವು ಮುಖಂಡರು, ಕಾರ್ಯಕರ್ತರು ಸಭೆ ಸೇರಿ, ಮಾತನಾಡಿದ್ದೇವೆ. ಶೀಘ್ರವೇ ಬಿಜೆಪಿ ಜಿಲ್ಲಾಧ್ಯಕ್ಷರು ಸಭೆ ಕರೆಯುತ್ತಾರೆ. ಎಲ್ಲಿ ಧರಣಿ, ಯಾವ ರೀತಿಯ ಹೋರಾಟ ನಡೆಸಬೇಕೆಂಬ ಬಗ್ಗೆಯೂ 3-4 ದಿನಗಳಲ್ಲೇ ನಾವೆಲ್ಲರೂ ಸೇರಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಿದ್ದೇಶ್ವರ್‌ ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಜಗಳೂರು ಮಾಜಿ ಶಾಸಕ ಎಚ್.ಪಿ.ರಾಜೇಶ, ದೂಡಾ ಮಾಜಿ ಅಧ್ಯಕ್ಷರಾದ ಯಶವಂತ ರಾವ್ ಜಾ‍ಧವ್, ಎಸ್.ಎಂ.ವೀರೇಶ ಹನಗವಾಡಿ, ಅಣಬೇರು ಜೀವನಮೂರ್ತಿ, ಅನಿಲಕುಮಾರ ನಾಯ್ಕ, ಬಿ.ಎಸ್.ಜಗದೀಶ, ಎನ್‌.ಎಂ. ಮುರುಗೇಶ್‌, ನಂಜನಗೌಡ, ಐರಣಿ ಅಣ್ಣೇಶ್‌, ಅನಿಲ್‌ ನಾಯ್ಕ ಇದ್ದರು.

- - -

(ಬಾಕ್ಸ್‌)

* ನಾನಾಗಲೀ, ನಮ್ಮ ಕುಟುಂಬವಾಗಲೀ ಸ್ಪರ್ಧಿಸಲ್ಲ ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಗೆ ನಾನಾಗಲೀ, ನನ್ನ ಕುಟುಂಬದವರಾಗಲೀ ಸ್ಪರ್ಧಿಸುವುದಿಲ್ಲ. ಆದರೆ, ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದೇವೆ. ಯಾರೇ ಅಭ್ಯರ್ಥಿಯಾದರೂ ತನು, ಮನ, ಧನದಿಂದ ಬೆಂಬಲಿಸಿ, ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ.ಸಿದ್ದೇಶ್ವರ ಸ್ಪಷ್ಟಪಡಿಸಿದರು.

ನಾವೇ ಚುನಾವಣೆಗೆ ನಿಂತರೆ ಕಾರ್ಯಕರ್ತರು ಎಲ್ಲಿ ಹೋಗಬೇಕು? ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಗೆಲ್ಲುವುದೇ ದೊಡ್ಡ ಫೈಟ್. ಅಹಿಂದ ವರ್ಗಕ್ಕೆ ಟಿಕೆಟ್ ನೀಡುವ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆ ಮಾಡಿದ್ದು, ಅಭ್ಯರ್ಥಿ ಆಯ್ಕೆ ಬಗ್ಗೆ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ತಿಳಿಸಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತ ಗೆಲ್ಲಬೇಕು. ಅದರ ಕಡೆಗೆ ಹೆಚ್ಚು ಗಮನ ಹರಿಸುತ್ತೇವೆ. ಶೀಘ್ರವೇ ರಾಜ್ಯ ನಾಯಕರು ದಾವಣಗೆರೆಗೆ ಬರಲಿದ್ದು, ಸಭೆ ಮಾಡುತ್ತೇವೆ. ನನ್ನ ಚುನಾವಣೆ ಸಮಯದಲ್ಲಿ ಭ್ರಷ್ಟಾಚಾರ ಮಾಡಿದ್ದಾಗಿ ಅಪಪ್ರಚಾರ ಮಾಡಿದ್ದರು. ನಾನು ಭ್ರಷ್ಟಾಚಾರ ಮಾಡಿದ್ದರೆ ರಾಜಕೀಯವನ್ನೇ ಬಿಟ್ಟು ಬಿಡುತ್ತೇನೆ ಎಂದು ಹೇಳಿದರು.

- - -

* ಶಾ, ನಡ್ಡಾ, ನಿತಿನ್ ಭೇಟಿಯಾಗಿ ಮಾತಾಡ್ತೀನಿ

- ಚುನಾವಣೆ ಸ್ಪರ್ಧೆಯಿಂದ ನಿವೃತ್ತಿ ಅಷ್ಟೇ, ರಾಜಕೀಯದಿಂದಲ್ಲ: ಸಿದ್ದೇಶ್ವರ ದಾವಣಗೆರೆ: ದಾವಣಗೆರೆ ಬಿಜೆಪಿಯಲ್ಲಿ ಬಣ ಬಡಿದಾಟ ಇಲ್ಲವೇ ಇಲ್ಲ. ನಾವು ಬಡಿದಾಡಿಯೇ ಇಲ್ಲ. ಎಲ್ಲಾ ನಿವಾರಣೆಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ. ಸಿದ್ದೇಶ್ವರ ಹೇಳಿದರು.

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಬಿಜೆಪಿಯಲ್ಲಿದ್ದ ಗೊಂದಲವೆಲ್ಲಾ ನಿವಾರಣೆಯಾಗಿದೆ. ರಾಜ್ಯದಲ್ಲೂ ಎರಡು ಬಣ ಇದೆ ಅನ್ನುತ್ತೀರಿ. ಇಲ್ಲಿಯೂ ಎರಡು ಬಣ ಅನ್ನುತ್ತೀರಿ. ಸಣ್ಣಪುಟ್ಟ ವ್ಯತ್ಯಾಸ ಇರುತ್ತದೆ. ಅವೆಲ್ಲವನ್ನೂ ಸರಿ ಮಾಡಿಕೊಂಡಿದ್ದೇವೆ ಎಂದರು.

ಕಾಡಜ್ಜಿ ಕೃಷಿ ಇಲಾಖೆ ಜಮೀನು ಲೂಟಿ ಸ್ಥಳಕ್ಕೆ ಭೇಟಿ ನೀಡಿದ್ದ ಹರಿಹರ ಶಾಸಕ ಬಿ.ಪಿ.ಹರೀಶ ಪ್ರಕರಣದ ಬಗ್ಗೆ ಗೊತ್ತಿಲ್ಲವೆಂದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯರು ಪತ್ರಿಕೆ, ಟೀವಿ ನೋಡಿಲ್ಲ ಎನಿಸುತ್ತದೆ. ಯಾರದ್ದೋ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

ಹಿರಿಯರಾಗಿ ಪಕ್ಷದ ನಾಯಕರಿಗೆ ಬುದ್ಧಿವಾದ ಹೇಳುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದೇಶ್ವರ, ಈಗ ಕಾಲ ಪಕ್ವವಾಗಿದೆ. ಬುದ್ಧಿವಾದ ಖಂಡಿತಾ ಹೇಳುತ್ತೇನೆ. ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರ ಬಗ್ಗೆ ನಾನು ಏನಾದರ ಹೇಳಿದ್ದೀನಾ? ಅಮಿತ್ ಶಾ, ಜೆ.ಪಿ.ನಡ್ಡಾ, ನಿತಿನ್‌ ಅವರನ್ನು ನಾವು ಭೇಟಿಯಾಗುತ್ತೇವೆ. ಆನಂತರವಷ್ಟೇ ನೀವು ಕೇಳಿರುವ 2028 ರವರೆಗೆ ರಾಜ್ಯಾಧ್ಯಕ್ಷರು ಮುಂದುವರಿಯುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದು ಹೇಳಿದರು.

ಬಳ್ಳಾರಿ ಪ್ರತಿಭಟನೆಯಲ್ಲಿ ಭಾಗಿ:

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅಷ್ಟೇ ಅಲ್ಲ, ಯಾರು ಯಾರು ಪಕ್ಷಕ್ಕೆ ಬರುತ್ತಾರೋ ಆ ಎಲ್ಲರನ್ನೂ ಸೇರಿಸಿಕೊಳ್ಳುತ್ತೇವೆ. ಪಕ್ಷದಡಿಯಲ್ಲಿ ಶಿಸ್ತಾಗಿ ಕೆಲಸ ಮಾಡುವವರನ್ನು ಸೇರಿಸಿಕೊಳ್ಳುತ್ತೇವೆ. ನಾನು 2028ಕ್ಕೂ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ. ನನ್ನ ಆರೋಗ್ಯದಲ್ಲಿ ಒಂದಿಷ್ಟು ವ್ಯತ್ಯಾಸ ಆಗಿದ್ದರಿಂದ ಲೋಕಸಭೆ ಚುನಾವಣೆ ವೇಳೆ ಓಡಾಡಲು ಆಗಿರಲಿಲ್ಲ. ಪಕ್ಷವು ಏಳೆಂಟು ಸಲ ನನ್ನ ಕುಟುಂಬಕ್ಕೆ ಟಿಕೆಟ್ ನೀಡಿದೆ. ನಾನು ರಾಜಕೀಯದಿಂದ ನಿವೃತ್ತಿ ಆಗುವುದಿಲ್ಲ. ಚುನಾವಣೆ ಸ್ಪರ್ಧೆಯಿಂದ ಮಾತ್ರ ನಿವೃತ್ತಿ ಪಡೆದಿದ್ದೇನಷ್ಟೇ. ನಾಳೆ ಬಳ್ಳಾರಿಯಲ್ಲಿ ನಡೆಯುವ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಜಿ.ಎಂ.ಸಿದ್ದೇಶ್ವರ ತಿಳಿಸಿದರು.

- - -

-16ಕೆಡಿವಿಜಿ6, 7, 8:

ದಾವಣಗೆರೆ ಜಿಎಂಐತಿ ಅತಿಥಿ ಗೃಹದಲ್ಲಿ ಶುಕ್ರವಾರ ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ.ಸಿದ್ದೇಶ್ವರ ನೇತೃತ್ವದ ಮುಖಂಡರು, ಕಾರ್ಯಕರ್ತರ ಸಭೆ.