ರೈತರ, ಕೃಷಿ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Jul 20, 2024, 12:49 AM IST
19ಕೆಪಿಆರ್‌ಸಿಆರ್‌ 03:  | Kannada Prabha

ಸಾರಾಂಶ

ರಾಯಚೂರಿನ ಡಿಸಿ ಕಚೇರಿ ಸಮೀಪದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಎಲ್ಲಾ ಬೆಳೆಗಳಿಗೂ ಸಿ2+50% ದರದಲ್ಲಿ ಕಾಯ್ದೆ ಬದ್ಧ ಕನಿಷ್ಠ ಬೆಂಬಲ ಬೆಲೆ ಮತ್ತು ಸಂಪೂರ್ಣ ಉತ್ಪನ್ನದ ಸಂಗ್ರಹಣೆ ಖಾತರಿ ನೀಡಬೇಕು. ರೈತರು ಮತ್ತು ಕೃಷಿ ಕಾರ್ಮಿಕರನ್ನು ಸಾಲದ ಶೂಲದಿಂದ, ಆತ್ಮಹತ್ಯೆಗಳಿಂದ ಹಾಗೂ ಸಂಕಷ್ಟ ವಲಸೆಯಿಂದ ರಕ್ಷಿಸಲು ಸಮಗ್ರ ಸಾಲ ಮನ್ನಾ ಮಾಡುವುದು ಸೇರಿ ರೈತರ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಉಭಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೊಶ ವ್ಯಕ್ತಪಡಿಸಿ, ಸಂಸದ ಜಿ. ಕುಮಾರ್ ನಾಯಕ್ ಪಿಎಗೆ ಮನವಿ ಸಲ್ಲಿಸಿದರು. ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣ ಮತ್ತು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‌ಗಳ ಪ್ರಸ್ತಾಪ ಕೈಬಿಡುಬೇಕು, ರಸಗೊಬ್ಬರ, ಬೀಜ, ಕ್ರಿಮಿ, ಕಳೆನಾಶಕಗಳು. ವಿದ್ಯುತ್, ನೀರಾವರಿ ಯಂತ್ರೋಪಕರಣಗಳ ಬಿಡಿ ಭಾಗಗಳು, ಟ್ಯಾಕ್ಟರ್‌ನಂತ ಕೃಷಿ ಒಳಸುರಿಗಳ ಮೇಲೆ ಜಿಎಸ್‌ಟಿ ಹಾಕಬಾರದು ಎಂದು ಆಕ್ಷೇಪಿಸಿದರು.

ಎಲ್ಲ ಕೃಷಿ ಮತ್ತು ಪಶುಸಂಗೋಪನೆ ವ್ಯವಸ್ಥೆಗೂ ಸಾರ್ವಜನಿಕ ವಲಯದಲ್ಲಿ ಸಂಪೂರ್ಣ ವಿಮೆ ಸೌಲಭ್ಯ ಕಲ್ಪಿಸಬೇಕು. ಕಾರ್ಪೋರೇಟ್ ಪರವಾದ ಪಿಎಂಎಫ್‌ಬಿವೈ ಯೋಜನೆಯನ್ನು ರದ್ದುಪಡಿಸಬೇಕು. ಆಹಾರ ಉತ್ಪಾದನೆ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ಹಕ್ಕನ್ನು ಮಾನ್ಯ ಮಾಡಬೇಕು ಹಾಗೂ 60 ವರ್ಷ ವಯಸ್ಸಿನ ನಂತರ ತಿಂಗಳಿಗೆ 10 ಸಾವಿರ ನೀಡಬೇಕು. ಭೂ ಸ್ವಾಧೀನ ಪರಿಹಾರ ಮತ್ತು ಪುನರ್ವಸತಿ ಕಾಯ್ದೆ (ಎಲ್‌ಎಆರ್‌ಆರ್ ಆಕ್ಟ್) 2013ನ್ನು ಅದರ ಎರಡು ವರ್ಷಕ್ಕೊಮ್ಮೆ ಸರ್ಕಲ್ ದರ ಪರಿಷ್ಕರಣೆ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂಬುವುದು ಸೇರಿ ಇನ್ನೂ ಅನೇಕ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಕೆ.ಜಿ ವೀರೇಶ, ಖಾಜಾ ಅಸ್ಲಂ ಅಹಮ್ಮದ್, ಪ್ರಭಾಕರ ಪಾಟೀಲ್ ಇಂಗಳದಾಳ, ಜಿಂದಪ್ಪ ವಡ್ಲೂರು, ಮಾರೆಪ್ಪ ಹರವಿ, ರಂಗನಾಥ ಮಾಸ್ಟರ್, ಶ್ರೀನಿವಾಸ ಕಲವಲದೊಡ್ಡಿ. ಸಿ.ಎಚ್ ರವಿಕುಮಾರ, ಮಲ್ಲನಗೌಡ, ಆಂಜನೇಯ ಕುರುಬದೊಡ್ಡಿ, ಡಿ.ಎಸ್ ಶರಣಬಸವ, ಕರಿಯಪ್ಪ ಅಚ್ಚೊಳ್ಳಿ, ಅಶೋಕ ನೀಲಗಲ್, ಸಾಜೀದ್ ಹುಸೇನ್, ಈ.ರಂಗನಗೌಡ, ಶಿವರಾಜ ದೊಡ್ಡಿ ಸೇರಿ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ