ಹೊಸಪೇಟೆ: ರೈತರ ಸಾಲಮನ್ನಾ, ಬೆಂಬಲ ಬೆಲೆಗೆ ಒತ್ತಾಯಿಸಿ ಹಾಗೂ ಕೃಷಿ ಕಾಯಿದೆಗಳ ರದ್ದುಗೊಳಿಸಲು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಲಾಯಿತು.ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಹಾಗೂ ಸಂಪೂರ್ಣ ಉತ್ಪನ್ನದ ಸಂಗ್ರಹಣೆಯ ಖಾತರಿ ನೀಡಬೇಕು. ರೈತರ ಆತ್ಮಹತ್ಯೆ ಮತ್ತು ವಲಸೆ ತಡೆಯಲು ಸಾಲಮನ್ನಾ ಮಾಡಬೇಕು. ವಿದ್ಯುಚ್ಛಕ್ತಿ ವಲಯದ ಖಾಸಗೀಕರಣ ಮತ್ತು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್‌ಗಳ ಪ್ರಸ್ತಾಪ ಕೈಬಿಡಬೇಕು. ಎಲ್ಲ ಕೃಷಿ ಮತ್ತು ಪಶುಸಂಗೋಪನಾ ವ್ಯವಸ್ಥೆಗಳಿಗೂ ಸಾರ್ವಜನಿಕ ವಲಯದಲ್ಲಿ ಸಂಪೂರ್ಣ ವಿಮೆ ಸೌಲಭ್ಯ ಕಲ್ಪಿಸಬೇಕು. ಕಾರ್ಪೊರೇಟ್ ಪರ ಪಿಎಂಎಫ್‌ಬಿವೈ ಯೋಜನೆ ರದ್ದುಪಡಿಸಬೇಕು ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಆಗ್ರಹಿಸಿದರು.
ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಜೀವಹಾನಿಗೆ ₹1 ಕೋಟಿ ಪರಿಹಾರ ಒದಗಿಸಬೇಕು. ಬೆಳೆ ಮತ್ತು ಸಾಕು ಪ್ರಾಣಿ ನಷ್ಟಕ್ಕೆ ₹2 ಕೋಟಿ ಪರಿಹಾರ ನೀಡಬೇಕು. ಸಂಸತ್ತಿನಲ್ಲಿ ಯಾವುದೇ ಪ್ರಜಾತಾಂತ್ರಿಕ ಪ್ರಕ್ರಿಯೆಗಳಿಗೆ ಒಳಪಡಿಸದೇ ಸಿಪಿಸಿ, ಸಿಆರ್‌ಪಿಸಿ ಕಾಯಿದೆಗಳನ್ನು ಬದಲಾಯಿಸಿ, ಜನತೆಯ ಮೇಲೆ ಹೇರಿರುವ ಮೂರು ಕ್ರಿಮಿನಲ್ ಕಾಯಿದೆಗಳನ್ನು ರದ್ದು ಮಾಡಬೇಕು. 736 ರೈತ ಹುತಾತ್ಮರ ಸ್ಮರಣೆಗಾಗಿ ಸಿಂಘು, ಟೆಕ್ರಿ ಗಡಿಯಲ್ಲಿ ಹುತಾತ್ಮರ ಸ್ಮಾರಕ ನಿರ್ಮಿಸಬೇಕು. ಸೂಕ್ತ ಪರಿಹಾರ ನೀಡಬೇಕು. ರೈತ ಹೋರಾಟದ ವಿರುದ್ಧ ದಾಖಲಿಸಿರುವ ಎಲ್ಲ ಪ್ರಕರಣ ಕೈಬಿಡಬೇಕು ಎಂದು ಒತ್ತಾಯಿಸಿದರು.ಜನತೆಯ ಹಕ್ಕುಗಳು ಯೋಗಕ್ಷೇಮ ರಕ್ಷಿಸುವ ನಿಟ್ಟಿನಲ್ಲಿ ನಮ್ಮ ಪ್ರತಿನಿಧಿಗಳಾಗಿ ನಮ್ಮ ಬೆಂಬಲ ನೀಡುತ್ತೇವೆ. ಜನತೆಯ ಮೀತಿ ಮೀರಿದ ಸವಾಲುಗಳು ನಿರುದ್ಯೋಗ, ಬೆಲೆ ಏರಿಕೆ, ದೇಶದಲ್ಲಿ ರೈತರ ಆತ್ಮಹತ್ಯೆ, ಕೃಷಿ ಬಿಕ್ಕಟ್ಟು, ಸಂಪತ್ತಿನ ಅಸಮಾನತೆ, ಕಾರ್ಪೋರೇಟ್ ಪರ ನೀತಿ ಹೀಗೆ ವಿವಿಧ ಪರಿಹಾರಕ್ಕೆ ಸರ್ಕಾರ ನೀತಿಗಳಲ್ಲಿ ಬದಲಾವಣೆಗೆ ಅಗತ್ಯ ಇದೆ ಎಂದರು.
ವಿಭಾಗೀಯ ಕಾರ್ಯದರ್ಶಿ ಗೋಣಿಬಸಪ್ಪ, ಪಿ.ವೆಂಕಟೇಶ್, ಉಪಾಧ್ಯಕ್ಷ ಗುಜ್ಜಲ್ ಗಣೇಶ್, ಗಂಟೆ ಸೋಮಶೇಖರ, ತಂಬ್ರಹಳ್ಳಿ ರವಿ, ಆರ್.ಎಂ.ವೀರೇಶಿ, ರಾಜಾಬಕ್ಷಿ, ಹುಸೇನ್ ಸಾಬ್, ಗೋವಿಂದರಾಜ್, ಪರಮೇಶ್ವರಗೌಡ ಮತ್ತಿತರರಿದ್ದರು.