ಬಂಟ್ವಾಳ: ನೇತ್ರಾವತಿ ನದಿ ಪಾತ್ರದ ರಸ್ತೆ, ಮನೆ, ಅಂಗಡಿಗಳು ಜಲಾವೃತ

KannadaprabhaNewsNetwork | Published : Jul 20, 2024 12:50 AM

ಸಾರಾಂಶ

ಕಳೆದ ಮೂರು ದಿನಗಳಿಂದ ೬ ಮೀಟರ್‌ನಲ್ಲಿಯೇ ಹರಿಯುತ್ತಿದ್ದ ನೇತ್ರಾವತಿ ಗುರುವಾರ ರಾತ್ರಿ ನಿರಂತರವಾಗಿ ಸುರಿದ ಮಳೆಗೆ ಶುಕ್ರವಾರ ಮುಂಜಾನೆ ಏಕಾಏಕಿ ೮.೨ ಮೀಟರ್‌ಗೆ ಏರಿಕೆಯಾಗಿ, ತಗ್ಗು ಪ್ರದೇಶಗಳೆಲ್ಲಾ ಜಲಾವೃತವಾಗಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತಾಲೂಕಿನಲ್ಲಿ ಮಳೆಯ ಆರ್ಭಟ ಶುಕ್ರವಾರವೂ ಮುಂದುವರಿದಿದ್ದು, ನೇತ್ರಾವತಿ ನದಿ ಅಪಾಯಮಟ್ಟವನ್ನೂ ಮೀರಿ ಹರಿದು ನದಿಪಾತ್ರದ ರಸ್ತೆಗಳು, ಮನೆ, ಅಂಗಡಿಗಳಿಗೆ ನೀರು ನುಗ್ಗಿ, ತಗ್ಗುಪ್ರದೇಶಗಳೆಲ್ಲಾ ಜಲಾವೃತಗೊಂಡಿದೆ.

ಪಾಣೆಮಂಗಳೂರು, ಆಲಡ್ಕ, ಬಂಟ್ವಾಳ ಬಡ್ಡಕಟ್ಟೆ. ಜಕ್ರಿಬೆಟ್ಟು, ಗೂಡಿನ ಬಳಿ, ಕಂಚಿಕಾರ ಪೇಟೆಯ ಪ್ರದೇಶಗಳು ಜಲಾವೃತವಾಗಿವೆ. ಬಿ.ಸಿ .ರೋಡು- ಬಂಟ್ವಾಳ ಪೇಟೆ ಸಂಪರ್ಕಿಸುವ ರಸ್ತೆ ನೀರಿನಿಂದ ಆವೃತವಾಗಿದ್ದು, ರಸ್ತೆ ಸಂಪರ್ಕ ಸಂಪೂರ್ಣ ಬಂದ್‌ ಆಗಿದೆ. ಪರಿಹಾರ ಕಾರ್ಯಾಚರಣೆಯ ಭಾಗವಾಗಿ ಐವತ್ತಕ್ಕೂ ಹೆಚ್ಚು ಮನೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ.

ಕಳೆದ ಮೂರು ದಿನಗಳಿಂದ ೬ ಮೀಟರ್‌ನಲ್ಲಿಯೇ ಹರಿಯುತ್ತಿದ್ದ ನೇತ್ರಾವತಿ ಗುರುವಾರ ರಾತ್ರಿ ನಿರಂತರವಾಗಿ ಸುರಿದ ಮಳೆಗೆ ಶುಕ್ರವಾರ ಮುಂಜಾನೆ ಏಕಾಏಕಿ ೮.೨ ಮೀಟರ್‌ಗೆ ಏರಿಕೆಯಾಗಿ, ತಗ್ಗು ಪ್ರದೇಶಗಳೆಲ್ಲಾ ಜಲಾವೃತವಾಗಿದೆ. ನದಿಯಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಅಜಿಲಮೊಗರು ಬಳಿ ಘಟನೆ ಅಪಾಯದ ಮಟ್ಟ ಮೀರಿ ಹರಿದು ಅಜಿಲಮೊಗರು ಬಳಿ ರಸ್ತೆ ಜಲಾವೃತಗೊಂಡಿದೆ. ಅಜಿಲಮೊಗರು ದರ್ಗಾಕ್ಕೂ ನೀರಿ ಆವರಿಸುವ ಭೀತಿ ಎದುರಾಗಿದೆ. ಸರಪಾಡಿ ಭಾಗದ ಅನೇಕ ಕೃಷಿ ತೋಟಗಳಿಗೆ ನೀರು‌ ನುಗ್ಗಿ ಅಪಾರ ನಷ್ಟ ಸಂಭವಿಸಿದೆ. ಬಂಟ್ವಾಳ ಪೇಟೆಗೆ ನುಗ್ಗಿದ ನೀರು: ಬಂಟ್ವಾಳದಲ್ಲಿಯೂ ನೇತ್ರಾವತಿ ನದಿ ಉಕ್ಕಿ ಹರಿದು ಬಂಟ್ವಾಳ ಪೇಟೆಗೂ ನದಿ ನೀರು ಆವರಿಸಿದ್ದು, ಜಕ್ರಿಬೆಟ್ಟು ಬಳಿ ರಸ್ತೆ ಜಲಾವೃತವಾಗಿ ಬಂಟ್ವಾಳ ಪೇಟೆ ಸಂಪರ್ಕಿಸುವ ರಸ್ತೆ ಜಲಾವೃತಗೊಂಡಿದೆ. ರಸ್ತೆಯಲ್ಲಿ ಪೂರ್ತಿ ನೀರು ತುಂಬಿದ ಪರಿಣಾಮ ವಾಹನ ಸಂಚಾರ ಬಂದ್ ಆಗಿದ್ದು, ಬಂಟ್ವಾಳ ಪೇಟೆ ಸಂಪರ್ಕಿಸುವ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಪಾಣೆಮಂಗಳೂರು ಶಾರದ ಹೈಸ್ಕೂಲ್ ಆಟದ ಮೈದಾನಕ್ಕೆ ನೀರು ನುಗಿದ್ದು ಸಮೀಪದ ಅಡಕೆ ತೋಟಗಳಿಗೆ ನೀರು ನುಗ್ಗಿದೆ.ಜಿಲ್ಲಾಧಿಕಾರಿ ಭೇಟಿ: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಶುಕ್ರವಾರ ಮಧ್ಯಾಹ್ನದ ವೇಳೆಗೆ ಬಂಟ್ವಾಳದ ನೆರೆ ಪೀಡಿತ ಪ್ರದೇಶಗಳಾದ ಪಾಣೆಮಂಗಳೂರು ಆಲಡ್ಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿನ ತಾಲೂಕು ಆಡಳಿತ ಹಾಗೂ ಪೊಲೀಸರ ಜೊತೆಗೆ ಕೆಲ ಹೊತ್ತು ಇಲ್ಲಿನ ಸ್ಥಿತಿಗತಿಗಳ ಬಗ್ಗೆ ‌ಮಾಹಿತಿ ಪಡೆದುಕೊಂಡರು.

ಅವರು ಉಪ್ಪಿನಂಗಡಿ ಮತ್ತು ಶಿರಾಡಿಯಲ್ಲಿ ಹಾನಿಯಾದ ಸ್ಥಳಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಬಂಟ್ವಾಳದ ಕೆಲವು ಪ್ರಮುಖ ಸ್ಥಳಗಳ ವೀಕ್ಷಣೆ ನಡೆಸಿದರು. ನೀರು ಜಾಸ್ತಿಯಾಗಿ ಮನೆಗಳಿಗೆ ‌ನೀರು‌ನುಗ್ಗುವ ಲಕ್ಷಣಗಳು ಕಂಡು ಬರುವ ಮನೆಗಳನ್ನು ಹಗಲು ಹೊತ್ತಿನಲ್ಲಿಯೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ‌ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಾಳಜಿ‌ ಕೇಂದ್ರದ ಬಗ್ಗೆ ಮಾಹಿತಿ ‌ಪಡೆದುಕೊಂಡ ಅವರು ಅಲ್ಲಿನ ವ್ಯವಸ್ಥೆಗಳನ್ನು ತಿಳಿದುಕೊಂಡರು. ಈ ಸಂದರ್ಭ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ತಾಲೂಕು ತಹಸೀಲ್ದಾರ್‌ ಅರ್ಚನಾ ಭಟ್‌ ಉಪಸ್ಥಿತರಿದ್ದರು.ಹಲವೆಡೆಗಳಲ್ಲಿ ವ್ಯಾಪಕ ಹಾನಿ: ಗಾಳಿ ಮಳೆಗೆ ತಾಲೂಕಿನ ‌ಅನೇಕ ಕಡೆಗಳಲ್ಲಿ ಹಾನಿಯಾಗಿದ್ದು, ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಘಟ್ಟ ಪ್ರದೇಶಗಳಲ್ಲಿ ಮತ್ತು ಬೆಳ್ತಂಗಡಿ ಭಾಗದಲ್ಲಿ ಅತೀ ಹೆಚ್ಚಿನ ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿ ತಾಲೂಕಿನಲ್ಲಿ ಅವಾಂತರಕ್ಕೆ ಕಾರಣವಾಗಿದೆ. ಬಾಳ್ತಿಲ ಗ್ರಾಮದ ಕಂಟಿಕ ನಿವಾಸಿ ಸೋಮಪ್ಪ ಎಂಬವರ ಮನೆಯ ಮೇಲೆ ಅಡಕೆ ಮರ ಬಿದ್ದು ಹಾನಿ ಸಂಭವಿಸಿದೆ. ಬಾಳ್ತಿಲ ಗ್ರಾಮದ ನೀರಪಾದೆ ನಿವಾಸಿ ಸುಮತಿ ಎಂಬವರ ಮನೆಯತ ಛಾವಣಿ ಮೇಲೆ ಅಡಕೆ ಮರ ಬಿದ್ದು ಹಾನಿ ಸಂಭವಿಸಿದೆ. ಸಂಗಬೆಟ್ಟು ಗ್ರಾಮದ ನಾಗೇಶ ಎಂಬವರ ರೊಟ್ಟಿ ತರಯಾರಿಕಾ ಕೊಠಡಿಗೆ ಮರ ಬಿದ್ದು ಹಾನಿ ಸಂಭವಿಸಿದೆ. ಕೊಯಿಲ ಗ್ರಾಮದ ಅಂತರ ಎಂಬಲ್ಲಿ ಗುಡ್ಡ ವೊಂದು ಕುಸಿತಗೊಂಡಿದ್ದು, ರಸ್ತೆಗೆ ಬಿದ್ದ ಮಣ್ಣಿನ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಸಿಡಿಲು ಬಡಿದು ಮನೆಗೆ ಹಾನಿ: ಕೇಪು ಗ್ರಾಮದ ಚೆಲ್ಲಡ್ಕ ಎಂಬಲ್ಲಿನ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಯಾದ ಘಟನೆ ನಡೆದಿದೆ. ಕಲ್ಲಡ್ಕ ಶಶಿಶೇಖರ ಭಂಡಾರಿ ಎಂಬವರ ಮನೆಗೆ ಜು.೧೮ರ ತಡರಾತ್ರಿ ಸಿಡಿಲು ಬಡಿದು ದುರ್ಘಟನೆ ಸಂಭವಿಸಿದೆ‌. ವಿದ್ಯುತ್‌ ಉಪಕರಣಗಳಿಗೆ ಹಾನಿಯಾಗಿದೆ‌. ಮನೆಯ ಒಂದು ಭಾಗ ಬೆಂಕಿಗಾಹುತಿಯಾಗಿದೆ‌. ಅಗ್ನಿ ಶಾಮಕ ಸಿಬ್ಬಂದಿ ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸಿದರು. ಘಟನೆ ನಡೆಯುವ ವೇಳೆ ಮನೆಯೊಳಗಿದ್ದ ಶಶಿಶೇಖರ ಭಂಡಾರಿ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಕ್ಷಾಂತರ ರು. ನಷ್ಟವಾಗಿದೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಶೆಡ್‌ ಕುಸಿದು ಸಾವಿರಾರು ಕೋಳಿಗಳು ಸಾವು

ಗುರುವಾರ ತಡರಾತ್ರಿ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಕೋಳಿ ಸಾಕಾಣೆ ಶೆಡ್ ನೆಲಕ್ಕುರುಳಿ ಸುಮಾರು ಒಂದೂವರೆ ಸಾವಿರ ಕೋಳಿಗಳು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ ನಡೆದಿದೆ. ರಾಘವ ಎಂಬವರ ಮಾಲಕತ್ವದ ಶೆಡ್ ಇದಾಗಿದ್ದು, ಅದರಲ್ಲಿ ಸುಮಾರು ೨೨೦೦ ಕೋಳಿಗಳನ್ನು ಸಾಕಾಣೆ ಮಾಡುತ್ತಿದ್ದರು. ಸುಮಾರು ೭೦೦ ಕೋಳಿಗಳು ಮಾರಾಟವಾಗಿದ್ದವು. ಘಟನೆಯಿಂದ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.

Share this article