ಕನ್ನಡಪ್ರಭ ವಾರ್ತೆ ವಿಜಯಪುರ
ಎಬಿವಿಪಿ ಕೇಂದ್ರೀಯ ಕಾರ್ಯಸಮಿತಿ ಸದಸ್ಯ ಸಚಿನ ಕುಳಗೇರಿ ಮಾತನಾಡಿ, ರಾಜ್ಯದಲ್ಲಿ ಕಳೆದ 5-6 ವರ್ಷಗಳಿಂದ ವಿದ್ಯಾರ್ಥಿಗಳ ಪರಿಸ್ಥಿತಿ ಶೋಚನೀಯವಾಗಿದೆ. ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದು, ಅಧಿಕಾರಕ್ಕೆ ಬಂದ ಸರ್ಕಾರ ಕಳೆದ ಮೂರು ವರ್ಷಗಳಿಂದ ಯಾವುದೇ ನೇಮಕಾತಿಗಳನ್ನು ಮಾಡದೆ ವಿದ್ಯಾರ್ಥಿಗಳಿಗೆ ಮೋಸ ಮಾಡಿದೆ. ರಾಜ್ಯದಲ್ಲಿ ಒಟ್ಟು 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಇವೆ. ಆದರೆ ಸರ್ಕಾರಕ್ಕೆ ಈ ಯಾವುದೇ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೆ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.ಎಬಿವಿಪಿ ಜಿಲ್ಲಾ ಸಂಚಾಲಕ ಸಂದೀಪ ಅರಳಗುಂಡಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ 79,694 ಹುದ್ದೆಗಳು, ಉನ್ನತ ಶಿಕ್ಷಣ ಇಲಾಖೆಯಲ್ಲೂ 13,599 ಹುದ್ದೆಗಳು ಖಾಲಿ ಇವೆ. ಇದರಿಂದ ರಾಜ್ಯದ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದರು.ಎಬಿವಿಪಿ ಕಾನೂನು ವಿದ್ಯಾರ್ಥಿಗಳ ಪ್ರಮುಖ ಮಂಜುನಾಥ ಹಳ್ಳಿ ಮಾತನಾಡಿ, ರಾಜ್ಯದ ವಿವಿಗಳ ಸ್ಥಿತಿಗತಿ ಶೋಚನೀಯವಾಗಿದೆ. ವಿವಿಗಳಿಗೆ ಯಾವುದೇ ಅನುದಾನ ನೀಡದೇ ಅವುಗಳನ್ನು ಕೇವಲ ವಿದ್ಯಾರ್ಥಿಗಳ ಶುಲ್ಕದ ಮೇಲೆ ನಡೆಸುವಂತೆ ಮಾಡುತ್ತಿದೆ. ಹಿಂದಿನ ಸರ್ಕಾರ ಸ್ಥಾಪಿಸಿದ 9 ವಿಶ್ವ ವಿದ್ಯಾಲಯಗಳು ಮುಚ್ಚುವ ಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿದರು.ಈ ವೇಳೆ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ, ಶಶಿಕಾಂತ ರಾಕ್ಲೆ, ಚೇತನ ಕೋರವಾರ, ದುಂಡಪ್ಪ ನಿಲೋಗಿ, ಬಾಲಾಜಿ ಬಿರಾದಾರ, ಬಸನಗೌಡ ಕೋನರಡ್ಡಿ, ಕಾರ್ತಿಕ ಬಿರಾದಾರ, ಅಜಯ, ಶಿಲ್ಪಾ ಪೂಜಾರಿ, ನಿಖಿತಾ ರೂಡಿ, ಅಜಯ ಸೋಲಂಕಿ, ಶಶಿಕುಮಾರ ಪಾಟೀಲ, ಸಾಯಿ ಬಿರಾದಾರ ಭಾಗವಹಿಸಿದ್ದರು.ಪ್ರತಿಭಟನಾನಿರತರ ಬೇಡಿಕೆಗಳೇನು?
- ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಾರಂಭ ಮಾಡಬೇಕು.- ವಿವಿಧ ಇಲಾಖೆಗಳಿಗೆ ನೇಮಕಾತಿ ಮಾಡುವಾಗ ವಯೋಮಿತಿಯನ್ನು ಸಡಿಲಿಕೆ ಮಾಡಬೇಕು.
- ಸಮರ್ಪಕವಾಗಿ ವಿದ್ಯಾರ್ಥಿ ವೇತನವನ್ನು ತಲುಪಿಸಬೇಕು.
- ಸರ್ಕಾರ ತಕ್ಷಣವೇ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ.