ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲಾ ಅಂಗವಿಕಲರು ಹಾಗೂ ಪಾಲಕರ ಒಕ್ಕೂಟ ಸಮಿತಿ, ದಿವ್ಯಾಂಗರ ರಕ್ಷಣಾ ಸಮಿತಿ, ಸಕ್ಷಮ ಸಂಸ್ಥೆ ಉಡುಪಿ ಹಾಗೂ ವಿವಿಧ ಜಿಲ್ಲೆಯ ಸಂಘ-ಸಂಸ್ಥೆಗಳ ವತಿಯಿಂದ ವಿಕಲಚೇತನರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ದಿವ್ಯಾಂಗರ ರಕ್ಷಣಾ ಸಮಿತಿಯ ಸಂಚಾಲಕ, ನಗರಸಭೆ ಸದಸ್ಯ ವಿಜಯ ಕೊಡವೂರು ಮಾತನಾಡಿ, ಜಿಲ್ಲೆಯ ಅಂಗವಿಕಲರು ಅನೇಕ ಸಮಸ್ಯೆಗಳಿಂದಾಗಿ ಕಷ್ಟದಾಯಕ ಜೀವನ ನಡೆಸುತ್ತಿದ್ದಾರೆ. ಅವರಿಗೆ ಸ್ವಾವಲಂಬಿ ಜೀವನವನ್ನು ನಡೆಸಲು ಆರ್ಥಿಕ ಭದ್ರತೆ ಒದಗಿಸುವ ಯಾವುದೇ ಯೋಜನೆಗಳು ಲಭ್ಯವಿಲ್ಲ. ಬೆಲೆ ಏರಿಕೆಯಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿದ್ದು, ಅವರ ಬೇಡಿಕೆಗಳನ್ನು ಈಡೇರಿಸಬೇಕು. ರಾಜ್ಯದಲ್ಲಿ ಅಂಗವಿಕಲ ಹಕ್ಕುಗಳ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.ಸುಮಾರು 13ರಿಂದ 15 ಸಾವಿರದಷ್ಟು ಅಂಗವಿಕಲರು ಉಡುಪಿ ಜಿಲ್ಲೆಯೊಂದರಲ್ಲಿ ಇದ್ದಾರೆ. ಬೆನ್ನುಮೂಳೆ ಮುರಿದ 124 ರಷ್ಟು ಮಂದಿ ಮನೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ಇವರಿಗೆ ಮನೆಗಳಲ್ಲಿಯೇ ವೈದ್ಯಕೀಯ ಸೇವೆ ಸಿಗಬೇಕು. ಅಂಗವಿಕಲರಿಗೆ ಶೇ.5ರಷ್ಟು ಮೀಸಲಿರುವ ಅನುದಾನ ಅಂಗವಿಕಲರ ಕಲ್ಯಾಣಕ್ಕೆ ಬಳಸದೆ ಮೋರಿ, ರಸ್ತೆ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ. ಈ ಹಿಂದಿನಂತೆಯೇ ಅಂಗವಿಕಲರಿಗೆ ಸರಕಾರ ವಿವಿಧ ಸವಲತ್ತುಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.ಸಂಘದ ಅಧ್ಯಕ್ಷ ಮಂಜುನಾಥ ಹೆಬ್ಬಾರ್ ಮಾತನಾಡಿ, ಹೀಮೊಫಿಯಾಕ್ಕೆ ಸಂಬಂಧಿಸಿದಂತೆ ಚುಚ್ಚುಮದ್ದಿಗಾಗಿ ಅನುದಾನವನ್ನು ಕಾದಿರಿಸಿ ಚುಚ್ಚುಮದ್ದು ಸದಾಕಾಲ ಲಭ್ಯವಿರುವಂತೆ ಮಾಡಬೇಕು. ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿಯೂ ಲಸಿಕೆ ಸಿಗುವಂತಾಗಬೇಕು ಎಂದರು.ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಕುಂದಾಪುರ-ಬೈಂದೂರು ತಾಲೂಕು ಸಮಿತಿ ಅಧ್ಯಕ್ಷ ಸಂತೋಷ ಜಾಲಾಡಿ, ಗೌರವಾಧ್ಯಕ್ಷ ವೆಂಕಟೇಶ್ ಕೋಣಿ, ಪ್ರಮುಖರಾದ ರವೀಂದ್ರ, ಲತಾ ಭಟ್, ಹರೀಶ್ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ಹರೀಶ್ ತೋಳ್ಪಾಡಿ ಉಪಸ್ಥಿತರಿದ್ದರು.ಪ್ರತಿಭಟನಾ ಸಭೆಗೂ ಮುನ್ನ ಮಣಿಪಾಲದ ಕಾಯಿನ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸಾವಿರಕ್ಕೂ ಹೆಚ್ಚು ಅಂಗವಿಕಲರು ಪ್ರತಿಭಟನಾ ಮೆರವಣಿಗೆ ನಡೆಸಿದರು.