ಕೊಪ್ಪಳ: ರಾಜ್ಯ ಸರ್ಕಾರದ ನೂತನ ಸಂಪುಟದಲ್ಲಿ ಅಲ್ಪಸಂಖ್ಯಾತ ಸಮುದಾಯದ ರಾಜ್ಯಮಟ್ಟದ ನಾಯಕ ಶಾಸಕ ಬಿ.ಝೆಡ್ ಜಮೀರ್ ಅಹಮದ್ ಖಾನ್ ಅವರಿಗೆ ಸೂಕ್ತ ಸ್ಥಾನಮಾನ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿ ಕೊಪ್ಪಳದಲ್ಲಿ ಮುಸ್ಲಿಂ ಸಂಘಟನೆಗಳು ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಅದರಲ್ಲಿ ಜಮೀರಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಯಿತು. ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸಂಪುಟದಲ್ಲಿ ಯಾವುದೇ ಸಚಿವ ಸ್ಥಾನ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತವಾಯಿತು.
ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ಎರಡನೇ ಪಟ್ಟಿಯಲ್ಲಿ ಜಮೀರ್ ಅವರಿಗೆ ಸೂಕ್ತ ಸಚಿವ ಸ್ಥಾನ ಅಥವಾ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಇಸ್ಲಾಂ ಧರ್ಮ ಗುರು ಗಂಗಾವತಿಯ ಮೌಲಾನಾ ಹಾಫೀಸ್ ಮಹಮ್ಮದ್ ಮುಸ್ಟಫಾ ಕಮಾಲ್ ಪಾಷಾ ಖಾದ್ರಿ, ಅಂಜುಮನ್ ಕಮಿಟಿಯ ಅಧ್ಯಕ್ಷ ಆಸೀಫ್ ಕರ್ಕಿಹಳ್ಳಿ, ವಾಲ್ಮೀಕಿ ನಾಯಕ ಸಮಾಜದ ಮುಖಂಡ ಯಮನೂರಪ್ಪ ನಾಯಕ್, ದಲಿತ ಸಮುದಾಯದ ಮುಖಂಡ ಪರಶುರಾಮ ಕೆರೆಹಳ್ಳಿ, ಬಿಲ್ದಾರ್ ಸಂಘದ ಕಾರ್ಯದರ್ಶಿ ಜಾಫರ್ ಸಾಬ್ ಕುರಿ, ಎಂಡಿ ಜೀಲಾನ್ ಕಿಲ್ಲೆದಾರ್ ಮೈಲೈಕ್ , ಮುಸ್ತಫಾ ಕುದುರೆಮೋತಿ, ನಗರಸಭೆ ಮಾಜಿ ಸದಸ್ಯ ಅಜಿಮುದ್ದಿನ ಅತ್ತಾರ್, ಸೈಯದ್ ನಾಶೀರುದ್ದೀನ್ ಹುಸೇನಿ, ಅಂಜುಮನ್ ಕಮಿಟಿ ಕಾರ್ಯದರ್ಶಿ ಸಿರಾಜ್ ಮನಿಯರ್, ರಂಗಭೂಮಿ ಕಲಾವಿದ ಚಾಂದ್ ಬಾಷಾ ಕಿಲ್ಲೆದಾರ್ , ಗೌಸ ಸಾಬ್ ಸರ್ದಾರ್ ರಾಬಿತಾ ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ಎಂ. ಲಾಯಕ್ ಅಲಿ ಮುನಿರಾಬಾದ್ ಶಾದಿ ಮಹಲ್ ಅಧ್ಯಕ್ಷ ಸಾಧಿಕ್ ಪಾಷಾ ಮುನಿರಾಬಾದ್ ಅಂಜುಮನ್ ಕಮಿಟಿ ಅಧ್ಯಕ್ಷ ಜಾಹಿದ್, ಯಲಬುರ್ಗಾದ ಶಾಮಿದ್ ಕರಮುಡಿ, ಯಲಬುರ್ಗಾ ಪಪಂ ಸದಸ್ಯ ರಿಯಾಜ್ ಕಾಜಿ, ಕುಕನೂರಿನ ಮುಸ್ಲಿಂ ಸಮಾಜದ ಮುಖಂಡ ರಶೀದ ಹಂಚಿಗೇರಿ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿ, ಪಂಚ್ ಕಮಿಟಿ, ಮಸೀದಿ ಕಮಿಟಿ, ಶಾದಿ ಮಹಲ್ ಕಮಿಟಿ, ನೌ ಜವಾನ್ ಕಮಿಟಿ ಪದಾಧಿಕಾರಿಗಳು ಕಾರ್ಯಕರ್ತರು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಶಾಂತಿಯುತವಾಗಿ ಮೌನ ಬೃಹತ್ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಪಕ್ಷದ ವರಿಷ್ಠ ಮಂಡಳಿಗೆ ಒತ್ತಾಯಿಸಿದರು.