ಕನ್ನಡಪ್ರಭ ವಾರ್ತೆ ಭದ್ರಾವತಿ
ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿ, ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗೂ ಮೈಸೂರು ಕಾಗದ ಕಾರ್ಖಾನೆ ಸ್ಥಾಪನೆಯಿಂದಾಗಿ ಕ್ಷೇತ್ರ ವಿಶ್ವದ ಭೂಪಟದಲ್ಲಿ ಕೈಗಾರಿಕಾ ನಗರವಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಕಾಲಾನಂತರದಲ್ಲಿ ಕ್ಷೇತ್ರದ ನಿರ್ಲಕ್ಷ್ಯತನದಿಂದಾಗಿ ಎರಡು ಕಾರ್ಖಾನೆಗಳು ಅವನತಿ ದಾರಿ ಹಿಡಿಯುವ ಮೂಲಕ ಆರ್ಥಿಕ ಸ್ಥಿತಿ ಕುಸಿದು ಜನರು ನೆಮ್ಮದಿ ಬದುಕಿಗಾಗಿ ಬೇರೆಡೆಗೆ ವಲಸೆ ಹೋಗುವಂತಾಗಿದೆ. ಇದೀಗ ಪುನಃ ಹಿಂದಿನ ವೈಭವ ಮರುಕಳುಹಿಸಬೇಕು. ಕ್ಷೇತ್ರದ ಚುನಾಯಿತ ಶಾಸಕರು ಪ್ರಸ್ತುತ ಸರ್ಕಾರದ ಆಡಳಿತ ಪಕ್ಷದವರಾಗಿದ್ದು, ಈ ಹಿನ್ನೆಲೆ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ಸಮಿತಿ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿ ಪರವಾಗಿಲ್ಲ. ಪ್ರಸ್ತುತ ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆಯಿಂದ ಸಚಿವ ಸ್ಥಾನದ ಅಗತ್ಯವಿದೆ.ಕ್ಷೇತ್ರದ ಜನರ ಪರವಾಗಿ ೪ ಬಾರಿ ಶಾಸಕರಾಗಿರುವ ಬಿ.ಕೆ.ಸಂಗಮೇಶ್ವರ್‌ರಿಗೆ ಸಚಿವ ಸ್ಥಾನ ನೀಡಬೇಕು. ಇದರಿಂದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂಬ ವಿಶ್ವಾಸ ಹೊಂದಿದ್ದು, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಹಿರಂಗ ಸಭೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು, ಆದರೆ ಇದುವರೆಗೂ ಸಚಿವ ಸ್ಥಾನ ನೀಡಿಲ್ಲ. ತಕ್ಷಣ ಸಚಿವ ಸ್ಥಾನನೀಡಬೇಕೆಂದು ಒತ್ತಾಯಿಸಿ ಹಾಗೂ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಗೆ ೨ ಸಚಿವ ಸ್ಥಾನ ನೀಡಲಾಗಿತ್ತು. ಅದರಂತೆ ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಧುಬಂಗಾರಪ್ಪರನ್ನು ಮುಂದುವರೆಸಿ ಒಟ್ಟು ಜಿಲ್ಲೆಗೆ ೨ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.
ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರು ಕ್ಷೇತ್ರದಲ್ಲಿ ೩ ಬಾರಿ ಶಾಸಕರಾಗಿದ್ದು, ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುವ ಮೂಲಕ ಇಂದಿಗೂ ಜನ ಮಾನಸದಲ್ಲಿ ಉಳಿದುಕೊಂಡಿದ್ದಾರೆ. ಇವರ ಹೆಸರನ್ನು ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ನಾಮಕರಣಗೊಳಿಸಬೇಕೆಂದು ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಆದರೂ ಸಹ ಇದುವರೆಗೂ ಅವರ ಹೆಸರನ್ನು ಸರ್ಕಾರ ನಾಮಕರಣಗೊಳಿಸಿರುವುದಿಲ್ಲ. ತಕ್ಷಣ ಹೆಸರನ್ನು ನಾಮಕರಣಗೊಳಿಸಲು ಮುಂದಾಗಬೇಕೆಂದು ಒತ್ತಾಯಿಸಲಾಯಿತು.ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಸದಸ್ಯ ನಾಗೇಶ್, ಮಾನವ ಹಕ್ಕುಗಳ ಹೋರಾಟ ಸಮಿತಿ ಪದಾಧಿಕಾರಿಗಳು, ಮಹಿಳಾ ಪ್ರಮುಖರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.