ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ರದ್ದು ಮಾಡಲು ಹೊರಟಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಚಾಮರಾಜನಗರ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಪ್ರತಿಭಟನಾನಿತರು ಕನ್ನಡ ಧ್ವಜವನ್ನು ಹಿಡಿದು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಅಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಹೊತ್ತು ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯ ಸರ್ಕಾರ ಬಡವರಿಗೆ ಆಹಾರ ಭದ್ರತೆ ಕೊಡುತ್ತೇವೆ. ಅವರಿಗೆ ಸೌಕರ್ಯಗಳನ್ನು ಕೊಡುತ್ತೇವೆ ಎಂದು ಹೇಳುತ್ತದೆ. ಇನ್ನೊಂದು ಕಡೆ ಅವೈಜ್ಞಾನಿಕವಾಗಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವ ಮೂಲಕ ಬಡವರ ಹೊಟ್ಟೆ ಒಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಜನರಿಗೆ ಅವಶ್ಯಕತೆಯಿರುವ ಬಿಪಿಎಲ್ ಕಾರ್ಡ್‌ಗಳನ್ನು ವ್ಯವಸ್ಥಿತವಾಗಿ ರಾಜ್ಯ ಸರ್ಕಾರ ರದ್ದು ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ. ಒಂದು ಕಡೆ ಸೌಲಭ್ಯ ಕೊಡುವುದು ಮತ್ತೊಂದು ಕಡೆ ಸೌಲಭ್ಯ ಕಿತ್ತುಕೊಳ್ಳುವ ಮೂಲಕ ದ್ವಂದ್ವ ನೀತಿ ಸರ್ಕಾರವಾಗಿದೆ. ಕಳೆದ 4 ದಿನಗಳಿಂದ ಸರ್ವರ್ ಸಮಸ್ಯೆಯಾಗಿದ್ದು, ನ್ಯಾಯಬೆಲೆ ಅಂಗಡಿಗಳ ಮುಂದೆ ಸಾರ್ವಜನಿಕರು ಸರತಿ ಸಾಲಿನಲ್ಲಿ ಪಡಿತರ ಪಡಿಯಲು ಕಾದು ನಿಂತಿದ್ದಾರೆ. ಇದರಿಂದ ಕೂಲಿ ಕಾರ್ಮಿಕರು ಕೆಲಸ ಬಿಟ್ಟು ಪಡಿತರ ಪಡೆಯುವಂತ ವ್ಯವಸ್ಥೆಯಾಗಿದ್ದು ಇದರಿಂದ ಜನರಿಗೆ ತುಂಬಾ ತೊಂದರೆ ಉಂಟಾಗಿದೆ. ಸರ್ಕಾರ ಸರ್ವೇ ಮಾಡಿ ಬಿಪಿಎಲ್ ಕಾರ್ಡ್ ರದ್ದು ಪಡಿಸುವ ಪ್ರಕ್ರಿಯೆ ಹಿಂಪಡೆಯಬೇಕು, ತೆರಿಗೆದಾರರು, ನೌಕರರನ್ನು ಹೊರತುಪಡಿಸಿ ರಾಜ್ಯದ ಪ್ರತಿ ನಾಗರಿಕನಿಗೂ ಬಿಪಿಎಲ್ ಕಾರ್ಡ್ ಕೊಡಬೇಕು. ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಶಾ.ಮುರಳಿ, ನಿಜಧ್ವನಿ ಗೋವಿಂದರಾಜು, ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್‌ಗೋಪಾಲ್, ಕಂಡಕ್ಟರ್ ಸೋಮನಾಯಕ, ಚಾ.ರಾ.ಕುಮಾರ್, ನಂಜುಂಡಶೆಟ್ಟಿ, ಮಹೇಶ್‌ಗೌಡ, ಆಟೋ ಲಿಂಗರಾಜು, ರವಿಚಂದ್ರಪ್ರಸಾದ್ ಕಹಳೆ, ವೀರಭದ್ರ, ತಾಂಡವಮೂರ್ತಿ, ಚಾ.ಸಿ.ಸಿದ್ದರಾಜು ಇತರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.