ಖಾಲಿ ಇರುವ ಸಂಗೀತ, ಚಿತ್ರಕಲಾ, ರಂಗಕಲಾ ಹಾಗೂ ದೈಹಿಕ ಶಿಕ್ಷಕರ ನೇಮಕಾತಿ ಆಗ್ರಹಿಸಿ ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಸಂಘಟನಾ ಸಮಿತಿ ನೇತೃತ್ವದಲ್ಲಿ ಗದಗ ನಗರದ ಗಾಂಧಿ ಸರ್ಕಲ್‌ನಲ್ಲಿ ನಿರುದ್ಯೋಗಿ ಯುವಜನರಿಂದ ಪ್ರತಿಭಟನೆ ಮಾಡಲಾಯಿತು.
ಗದಗ: ಖಾಲಿ ಇರುವ ಸಂಗೀತ, ಚಿತ್ರಕಲಾ, ರಂಗಕಲಾ ಹಾಗೂ ದೈಹಿಕ ಶಿಕ್ಷಕರ ನೇಮಕಾತಿ ಆಗ್ರಹಿಸಿ ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಸಂಘಟನಾ ಸಮಿತಿ ನೇತೃತ್ವದಲ್ಲಿ ನಗರದ ಗಾಂಧಿ ಸರ್ಕಲ್‌ನಲ್ಲಿ ಚಿತ್ರಕಲೆ, ಸಂಗೀತ, ರಂಗಕಲೆ ಹಾಗೂ ದೈಹಿಕ ಶಿಕ್ಷಣದಲ್ಲಿ ಪದವಿ ಪಡೆದ ಹಾಗೂ ಐಟಿಐ ಡಿಪ್ಲೊಮಾ ಮುಗಿಸಿದ ನಿರುದ್ಯೋಗಿ ಯುವಜನರಿಂದ ಪ್ರತಿಭಟನೆ ಮಾಡಲಾಯಿತು.
ಈ ವೇಳೆ ಎಐಡಿವೈಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಶರಣು ಗಡ್ಡಿ ಮಾತನಾಡಿ, ಕೂಡಲೇ ಚಿತ್ರಕಲೆ, ಸಂಗೀತ, ರಂಗಕಲೆ ಹಾಗೂ ದೈಹಿಕ ಶಿಕ್ಷಣದಲ್ಲಿ ಪದವಿ ಪಡೆದವರನ್ನು ರಾಜ್ಯ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ಕ್ರಮಕೈಗೊಳ್ಳಬೇಕು.
ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ಔದ್ಯೋಗಿಕ ನೀತಿಗಳನ್ನು ಜಾರಿಗೆ ತರದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಮುಖ್ಯವಾಗಿ ಪ್ರತಿ ವರ್ಷ ಕೋಟ್ಯಂತರ ಯುವಕರು ಈ ನಿರುದ್ಯೋಗದ ಪಡೆಗೆ ಸೇರಿಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಸಂಗೀತ, ಚಿತ್ರಕಲೆ, ನೃತ್ಯ, ನಾಟಕ ಹಾಗೂ ದೈಹಿಕ ಶಿಕ್ಷಣ ವಿಷಯಗಳಲ್ಲಿ ಪದವಿಗಳನ್ನು ಪಡೆದವರೂ ಇದ್ದಾರೆ. ಇನ್ನೊಂದೆಡೆ ಸರ್ಕಾರ ಕಾಯಂ ಹುದ್ದೆಗಳನ್ನು ಭರ್ತಿ ಮಾಡದೆ ಗುತ್ತಿಗೆ ಆಧಾರದಲ್ಲಿ ಅಥವಾ ಅತಿಥಿಗಳ ರೂಪದಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ.
ಇವರಿಗೆ ಸಿಗುವ ಸಂಬಳವೂ ಕಡಿಮೆ. ಈ ಕನಿಷ್ಠ ವೇತನದಲ್ಲಿ ಇಂದಿನ ದುಬಾರಿ ಬೆಲೆ ಏರಿಕೆಯ ಬಿಸಿಗೆ ಗೌರವಯುತ ಜೀವನ ನಡೆಸುವುದು ದುಸ್ತರವಾಗಿದೆ. ಇದರಿಂದ ಅವರು ಮಾನಸಿಕ ಜರ್ಜರಿತರಾಗುತ್ತಿದ್ದಾರೆ. ಆದ್ದರಿಂದ ಈ ಎಲ್ಲಾ ಶಿಕ್ಷಕರನ್ನು ಕಾಯಂ ಆಗಿ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಒಟ್ಟು ೫೨೪೦ ಸರ್ಕಾರಿ ಪ್ರೌಢಶಾಲೆಗಳಿವೆ. ಅವುಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸಹಪಠ್ಯ ವಿಷಯಗಳ ಒಟ್ಟು ಬೋಧಕರ ಸಂಖ್ಯೆ ೧೫೦೦ನ್ನೂ ದಾಟುವುದಿಲ್ಲ. ೨೦೦೮-೦೯ನೇ ಸಾಲಿನಲ್ಲಿ ಸುಮಾರು ೬೦೦ ಶಿಕ್ಷಕರನ್ನು ನೇಮಕಾತಿ ಮಾಡಿದ್ದು ಬಿಟ್ಟರೆ ಇದೂವರೆಗೆ ಈ ಶಿಕ್ಷಕರ ನೇಮಕಾತಿಗಳೇ ಆಗಿಲ್ಲ.
ವಸತಿ ಶಾಲೆಗಳಿಗೆ ೨೦೨೨-೨೩ರಲ್ಲಿ ಕ್ರೈಸ್ ಅಡಿಯಲ್ಲಿ ಸುಮಾರು ೧೨೦೦ ಶಿಕ್ಷಕರ ನೇಮಕವಾಗಿದೆ. ಆದರೆ ಇನ್ನೂ ಬಹುತೇಕ ಶಾಲೆಗಳಿಗೆ ಈ ಶಿಕ್ಷಕರ ನೇಮಕಾತಿ ಆಗಬೇಕಿದೆ.
ಶಿಕ್ಷಣವೆಂದರೆ ಕೇವಲ ಮೆದುಳಿಗೆ ಮಾಹಿತಿ ತುಂಬುವುದಲ್ಲ. ಬದಲಿಗೆ ಚಾರಿತ್ರ್ಯ ನಿರ್ಮಿಸುವುದು ಎಂದು ಸಾಕ್ರೆಟಿಸ್ ಹೇಳುತ್ತಾರೆ. ಅಂದರೆ ಮಕ್ಕಳಿಗೆ ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳು ಮಾತ್ರವಲ್ಲದೇ ಸಂಗೀತ, ಚಿತ್ರಕಲೆ, ರಂಗಕಲೆ, ದೈಹಿಕ ಶಿಕ್ಷಣ ಇವೇ ಮೊದಲಾದ ಲಲಿತ ಕಲೆಗಳೂ ಅವಶ್ಯಕವಾಗಿವೆ.
ಕರ್ನಾಟಕದಲ್ಲಿ ನಿರುದ್ಯೋಗದ ಬೇಗೆಯಲ್ಲಿ ಬೇಯುತ್ತಿರುವ ಸಂಗೀತ, ಚಿತ್ರಕಲೆ, ರಂಗಕಲೆ ಹಾಗೂ ದೈಹಿಕ ಶಿಕ್ಷಣಗಳಲ್ಲಿ ಪದವಿ ಪಡೆದವರ ನೇಮಕಾತಿಗಾಗಿ ಕೂಡಲೇ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮನವಿ ಪತ್ರವನ್ನು ಗ್ರೇಡ-೨ ತಹಶೀಲ್ದಾರಾರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಭರಮಪ್ಪ ಪಲ್ಲೇದ, ಗವಾಯಿಗಳು, ಶರಣಪ್ಪ ಗೋಡೆಕರ, ವಿನಾಯಕ, ಲಕ್ಷ್ಮಣ ತಳವಾರ, ವೆಂಕಟೇಶ, ಬಸವರಾಜ, ಪ್ರಜ್ವಲ್, ಎಚ್.ರೆಡ್ಡಿ, ಫಕೀರಪ್ಪ ಕುಂಟಗೇರಿ, ಮಹಾದೇವಪ್ಪ ಮುಂತಾದವರು ಇದ್ದರು.