ಬೆಳೆವಿಮೆ ಪರಿಹಾರ ಬಿಡುಗಡೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork | Published : Jul 19, 2024 12:48 AM

ಸಾರಾಂಶ

ಬ್ಯಾಡಗಿ ತಾಲೂಕಿನ ರೈತರಿಗೆ ಕೂಡಲೇ ಬೆಳೆವಿಮೆ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕು ರೈತ ಹೋರಾಟ ಸಮಿತಿ ಹಾಗೂ ಜೆಡಿಎಸ್ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.

ಬ್ಯಾಡಗಿ: ತಾಲೂಕಿನ ರೈತರಿಗೆ ಕಳೆದ ವರ್ಷ (2022-23) ತುಂಬಿದ ಬೆಳೆ ವಿಮೆ ಪರಿಹಾರ ನೀಡದೆ, ಸರ್ಕಾರ ಮತ್ತು ವಿಮೆ ಕಂಪನಿಗಳು ಮೋಸ ಮಾಡಿದೆ. ರೈತ ಮೇಲೆ ಕಾಳಜಿಯಿದ್ದರೆ ಕೂಡಲೇ ಬೆಳೆವಿಮೆ ಮೊತ್ತ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕು ರೈತ ಹೋರಾಟ ಸಮಿತಿ ಹಾಗೂ ಜೆಡಿಎಸ್ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಕಾರ್ಯಾಲಯದ ಎದುರು ಕೆಲಕಾಲ ಪ್ರತಿಭಟನೆ ನಡೆಸಿದರು.

ತಹಸೀಲ್ದಾರ್‌ ಕಾರ್ಯಾರ್ಯದ ಎದುರು ಧರಣಿ ನಡೆಸಿದ ರೈತರು, ವಿಮೆ ಪರಿಹಾರ ನೀಡದ ಸರ್ಕಾರ ಹಾಗೂ ವಿಮಾ ಕಂಪನಿ ವಿರುದ್ಧ ಧಿಕ್ಕಾರ ಕೂಗಿದರು, ಬಳಿಕ ತಹಸೀಲ್ದಾರ್ ಫೀರೋಜ್‌ಷಾ ಸೋಮನಕಟ್ಟಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ದೇಶದ ಅನ್ನದಾತನಿಗೆ ಮೋಸ ಮಾಡುವ ವಿಮೆ ಕಂಪನಿಗಳ ತಾರತಮ್ಯ ನೀತಿ ಖಂಡಿಸಬೇಕಿದೆ. ಕಳೆದ ವರ್ಷ ಹವಾಮಾನ ಆಧಾರಿತ ಮುಂಗಾರು ಮಳೆಗಾಲದಲ್ಲಿ ತಾಲೂಕಿನ ಸಾವಿರಾರು ರೈತರು ಬೆಳೆವಿಮೆ ಕಂತು ತುಂಬಿದ್ದರು. ಆದರೆ ವಿಮೆ ತುಂಬಿ ವರ್ಷ ಗತಿಸಿದರೂ ಪೂರ್ಣ ಪ್ರಮಾಣದಲ್ಲಿ ವಿಮೆ ಹಣ ನೀಡಿಲ್ಲ. ಮಧ್ಯಂತರ ಪರಿಹಾರವಾಗಿ ಶೇ. 25 ವಿತರಿಸಿ ಕೈ ತೊಳೆದುಕೊಂಡ ಖಾಸಗಿ ವಿಮಾ ಕಂಪನಿಗಳು ರೈತರಿಗೆ ಹಗಲು ಮೋಸ ಮಾಡುತ್ತಿವೆ. ಇದನ್ನು ಪ್ರಶ್ನಿಸಬೇಕಾದ ಜನಪ್ರತಿನಿಧಿಗಳು ಮೌನ ವಹಿಸಿರುವುದು ರೈತ ವಿರೋಧಿ ನೀತಿಯಾಗಿದೆ. ರೈತರಿಗೆ ನ್ಯಾಯ ಒದಗಿಸಬೇಕಾದ ಜನಪ್ರತಿನಿಧಿಗಳು ರೈತರಿಗೆ ಹಕ್ಕು ದೊರಕಿಸದಿದ್ದಲ್ಲಿ ರೈತ ಕುಲ ಉಳಿಯಲು ಹೇಗೆ ಸಾಧ್ಯ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊನೆಯ ದಿನಗಳಲ್ಲಿ ಮಾಹಿತಿ: ಕೃಷಿ, ತೋಟಗಾರಿಕೆ ಇಲಾಖೆಗಳು ಸರ್ಕಾರದ ನಿರ್ದೇಶನದಂತೆ ಮುಂಗಾರು, ಹಿಂಗಾರು ಬೆಳೆ ವಿಮೆ ಕಂತು ತುಂಬಿಸಿಕೊಳ್ಳಲು ಕೊನೆಯ ಅವಧಿ ನಿಗದಿ ಮಾಡುತ್ತಿವೆ. ಆದರೆ ವಿಮೆ ಹಣ ಬಿಡುಗಡೆ ಮಾಡಲು ಅವಧಿ ಏಕೆ ಘೋಷಣೆ ಮಾಡುವುದಿಲ್ಲ? ಜೀವವಿಮೆ ಹಾಗೂ ಇತ್ಯಾದಿ ವಿಮೆ ಯೋಜನೆಗಳಲ್ಲಿ ಹಣ ತುಂಬಿಸಿಕೊಂಡ ಬಳಿಕ ಮರಳಿ ನೀಡುವ ಅವಧಿ ಮುದ್ರಿಸಿರುತ್ತಾರೆ. ರೈತರ ಬೆಳೆವಿಮೆಗೆ ಏಕೆ ಈ ನಿಯಮ ಅನ್ವಯವಾಗುವುದಿಲ್ಲ? ಕೂಡಲೇ ಈ ಕುರಿತು ಸರ್ಕಾರ ರೈತರಿಗೆ ನ್ಯಾಯ ಒದಗಿಸಲು ಆದೇಶ ಹೊರಡಿಸುವಂತೆ ಒತ್ತಾಯಿಸಿದರು.

ಘೋಷಣೆ ಮಾಡಿ ಏನು ಪ್ರಯೋಜನ?: ಕಳೆದ ವರ್ಷ ರಾಜ್ಯದಲ್ಲಿ ಮಳೆ ಕೊರತೆಯಿಂದ ಬರಗಾಲ ತೀವ್ರವಾದ ಹಿನ್ನೆಲೆಯಲ್ಲಿ ಸರ್ಕಾರ ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಿತ್ತು. ಬಳಿಕ ಸಮರ್ಪಕ ಬೆಳೆಹಾನಿ ಪರಿಹಾರ ನೀಡಲಿಲ್ಲ. ಹೆಚ್ಚುವರಿ ಯಾವುದೇ ಕಾಮಗಾರಿ ಆರಂಭಿಸಲಿಲ್ಲ. ಅಲ್ಲದೇ ರೈತರ ಕಂತು ತುಂಬಿಸಿಕೊಂಡ ಹಣಕ್ಕೆ ವಿಮೆ ಮೊತ್ತ ಬಿಡುಗಡೆಯಾಗಲಿಲ್ಲ. ಹಾಗಾದರೆ ಬರಗಾಲ ಪ್ರದೇಶವೆಂದು ಬ್ಯಾಡಗಿಯನ್ನು ಘೋಷಣೆ ಮಾಡಿ ಏನು ಪ್ರಯೋಜನ? ರೈತ ಸಮುದಾಯಕ್ಕೆ ಸಂಕಷ್ಟದಲ್ಲಿ ಸರ್ಕಾರ ಏನು ಯೋಜನೆ ಜಾರಿಗೊಳಿಸಿದೆ ಎಂದು ಪ್ರಶ್ನಿಸಿದ ಅವರು, ಕೆಲವು ಘೋಷಣೆಗಳು ದಾಖಲೆಯಲ್ಲಿ ಉಳಿದರೆ ಏನು ಪ್ರಯೋಜನ ಎಂದರು.

ನಿಮಗಿಂತ ಖಾಸಗಿ ವಿತರಕರೇ ಉತ್ತಮ:

ಜೆಡಿಎಸ್ ತಾಲೂಕಾಧ್ಯಕ್ಷ ಮೋಹನ ಬಿನ್ನಾಳ ಮಾತನಾಡಿ, ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕಿದೆ. ಎರಡು ವರ್ಷಗಳಿಂದ ಸಕಾಲಕ್ಕೆ ಮಳೆ ಕೊರತೆ, ಮತ್ತೊಂದೆಡೆ ಅತಿವೃಷ್ಟಿಯಿಂದ ಜನ ತೊಂದರೆಯಲ್ಲಿ ಸಿಲುಕಿದ್ದಾರೆ. ಕೆಲಸವಿಲ್ಲದೇ ಕೂಲಿಕಾರರು ಪರದಾಡುತ್ತಿದ್ದಾರೆ. ರೈತರು ಗೊಬ್ಬರ ಮತ್ತು ಬಿತ್ತನೆ ಬೀಜಕ್ಕೂ ಪರದಾಡುವಂತಾಗಿದೆ. ಸರ್ಕಾರಗಳು ಪ್ರತಿವರ್ಷವೂ ಬಿತ್ತನೆ ಬೀಜ, ಗೊಬ್ಬರ ಉಚಿತವಾಗಿ ವಿತರಿಸಬೇಕು. ಶೇ. 50 ಸಬ್ಸಿಡಿ ಘೋಷಿಸಿದೆ. ಆದರೆ ಶೇ. 30ರಷ್ಟು ಮಾತ್ರ ನೀಡುತ್ತಿದೆ. ಖಾಸಗಿ ಅಂಗಡಿಗಳಲ್ಲಿ ಇದಕ್ಕಿಂತ ಕಡಿಮೆ ದರದಲ್ಲಿ ಲಭ್ಯವಿದೆ. ಸರ್ಕಾರದ ಯೋಜನೆ ಘೋಷಿಸಿದಂತೆ ರೈತ ಸಮುದಾಯಕ್ಕೆ ಸೌಲಭ್ಯ ಸಿಗದಂತಾಗಿದೆ ಎಂದು ಆರೋಪಿಸಿದರು.

ಈರಪ್ಪ ಸಂಕಣ್ಣವರ, ನಿಂಗಪ್ಪ ಮಾಗೋಡ, ಶಶಿಧರಸ್ವಾಮಿ ಗೊಲ್ಲರಹಳ್ಳಿಮಠ, ಬಿ.ಬಿ. ಬಂಗೇರ, ಮಂಜಪ್ಪ ತಿಮಕಾಪುರ, ಮೃತ್ಯುಂಜಯ ಕಡೇಮನಿ, ಗಣೇಶ ಸಂಕಣ್ಣವರ, ಈರಪ್ಪ ಓಲೆಕಾರ, ಪುಟ್ಟಪ್ಪ ಬಾರ್ಕಿ, ಮಲಕಪ್ಪ ಸಂಕಣ್ಣವರ ಇದ್ದರು.

Share this article