ಶಿರಸಿ: ವಸತಿ ರಹಿತರಿಗೆ ನೀಡುವ ಮನೆಗಳಿಗೆ ರಾಜ್ಯ ಸರ್ಕಾರ ಎರಡು ಮತ್ತು ಮೂರನೇ ಬಿಲ್‌ಗಳನ್ನು ಮಂಜೂರು ಮಾಡುತ್ತಿಲ್ಲ. ಇದರಿಂದ ಫಲಾನುಭವಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ಬಾಕಿ ಇರುವ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಪಂ ಪ್ರತಿನಿಧಿಗಳು ನಗರದ ಸಹಾಯಕ ಆಯುಕ್ತರ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಆರ್.ಡಿ.ಹೆಗಡೆ ಜಾನ್ಮನೆ ಮಾತನಾಡಿ, ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಬಡವರನ್ನು ಬೀದಿಗೆ ಹಾಕುವುದು ಅವರ ಉದ್ದೇಶವಾಗಿದ್ದು, ಈಗ ಅವರು ಯೋಚಿಸಿದಂತೆ ಮಾಡುತ್ತಿದ್ದಾರೆ. ಜನ ಕೇಳದಿದ್ದರೂ ಉಚಿತಗಳ ಆಮಿಷ ಒಡ್ಡಿ, ಮತ ಪಡೆದ ಈ ಸರ್ಕಾರ ಈಗ ಅಭಿವೃದ್ಧಿ ಕಾರ್ಯ ಮಾಡುವುದನ್ನೇ ಮರೆತಿದೆ. ಹೊಸ ಯೋಜನೆಗಳನ್ನು ನೀಡುವುದು ಹಾಗಿರಲಿ, ಈಗಾಗಲೇ ನೀಡಿರುವ ಆಶ್ರಯ ಮನೆಗಳ ಫಲಾನುಭವಿಗಳಿಗೆ ಬಿಲ್ ಹಣ ನೀಡದೇ ಸತಾಯಿಸುತ್ತಿರುವುದು ಸರಿಯಲ್ಲ. ಈಗಾಗಲೇ ಸಮಸ್ಯೆ ಎದುರಿಸುತ್ತಿರುವ ಬಡ ಜನತೆಗೆ ಈಗ ಮನೆ ಕಂತು ನೀಡದೇ ಇನ್ನಷ್ಟು ಸಂಕಷ್ಟಕ್ಕೆ ರಾಜ್ಯ ಸರ್ಕಾರ ನೂಕಿದೆ. ಇನ್ನು ೧೫ ದಿನದಲ್ಲಿ ಆಶ್ರಯ ಮನೆಗಳ ಇನ್ನುಳಿದ ಬಿಲ್ ಹಣ ಮಂಜೂರು ಮಾಡಿದ್ದರೆ ಉಪವಿಭಾಗಾಧಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಬಿಲ್ ಮಂಜೂರಾಗದೇ ಅತಂತ್ರವಾಗಿರುವ ಫಲಾನುಭವಿಗಳು ಇದೇ ವೇಳೆ ಪ್ರತ್ಯೇಕವಾಗಿ ಮನವಿಗಳನ್ನು ಉಪವಿಭಾಗಾಧಿಕಾರಿಗೆ ಸಲ್ಲಿಸಿದರು. ಫಲಾನುಭವಿಗಳ ಪರವಾಗಿ ಗೌರಿ ಮಂಜುನಾಥ ನಾಯ್ಕ ಮಾತನಾಡಿ, ಮನೆ ಮಂಜೂರಾಗಿದೆ ಎಂದು ಇದ್ದ ಮನೆ ಕೆಡವಿಕೊಂಡು ನಾವೀಗ ಬೀದಿಯಲ್ಲಿ ನಾವು ನಿಂತಿದ್ದೇವೆ. ಬಿಸಿಲಿನಲ್ಲಿ ಮಕ್ಕಳು ಮೊಮ್ಮಕ್ಕಳನ್ನ ಬಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಮೂರು ಲಕ್ಷ ಸಾಲ ಮಾಡಿ ಮನೆಯ ವಾಸ್ತವ್ಯ ಸ್ಥಿತಿಗೆ ಕಟ್ಟಿಕೊಂಡಿದ್ದೇವೆ. ಈಗ ನಾವು ದುಡಿಯುವ ಹಣ ಸಾಲದ ಬಡ್ಡಿ ತುಂಬುವುದಕ್ಕೇ ಸರಿಯಾಗುತ್ತಿದೆ. ರಾಜಕಾರಣಿಗಳು ಮತ ಕೇಳಲು ಬಂದಾಗ ಕಾಲಿಗೆ ಬೀಳ್ತಾರೆ, ಆ ಮೇಲೆ ಮರೆತು ಬಿಡುತ್ತಿದ್ದಾರೆ. ಈ ಸರ್ಕಾರ ಅಲ್ಪ ಸಂಖ್ಯಾತರಿಗೆ ವಿವಾಹವಾಗಲು ₹ ೫೦ ಸಾವಿರ ಕೊಡುತ್ತಾರೆ. ಹಿಂದೂಗಳಿಗೆ ಮಾತ್ರ ಇಂತಹ ಸೌಲಭ್ಯ ಏಕಿಲ್ಲ ಎಂದು ಪ್ರಶ್ನಿಸಿದರು.ಪ್ರತಿಭಟನೆಯಲ್ಲಿ ಪಶ್ಚಿಮ ಭಾಗದ ಗ್ರಾಪಂ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ನವೀನ ಶೆಟ್ಟಿ ಚಿಪಗಿ, ಪ್ರಮುಖರಾದ ಅನಂತಮೂರ್ತಿ ಹೆಗಡೆ, ರಮೇಶ ನಾಯ್ಕ ಕುಪ್ಪಳ್ಳಿ, ಶ್ರೀನಾಥ ಶೆಟ್ಟಿ, ಮಂಜುನಾಥ ಭಂಡಾರಿ, ನರಸಿಂಹ ಹೆಗಡೆ, ನಾಗರಾಜ ಶೆಟ್ಟಿ, ನಿರ್ಮಲಾ ಇಸಳೂರು ಮತ್ತಿತರರು ಇದ್ದರು.
ಕಷ್ಟದಲ್ಲಿರುವವರಿಗೆ ₹೧.೫ ಲಕ್ಷ ನೀಡಲೂ ಸಾಧ್ಯವಾಗದಷ್ಟು ರಾಜ್ಯ ಸರ್ಕಾರ ದಿವಾಳಿ ಆಗಿದೆಯೇ? ಆಶ್ರಯ ಮನೆಯ ಉಳಿದ ಕಂತುಗಳನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಫಲಾನುಭವಿಗಳು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗೆ ಮನವಿ ನೀಡಿದರೂ ಸ್ಪಂದನೆ ದೊರೆತಿಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ಹೇಳಿದ್ದಾರೆ.