29ರಂದು ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork |  
Published : Oct 19, 2025, 01:00 AM IST
ಹೊನ್ನಾಳಿ ಫೋಟೋ 15ಎಚ್.ಎಲ್.ಐ2 ಹೊನ್ನಾಳಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕರಿಬಸಪ್ಪ ಗೌಡ ಮಾತನಾಡಿದರು. | Kannada Prabha

ಸಾರಾಂಶ

ರೈತರು ತಮ್ಮ ಅಳಿದುಳಿದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಕೃಷಿ ಮಾರುಕಟ್ಟೆ ಪ್ರಾರಂಭಿಸಬೇಕು. ಅತಿಯಾದ ಮಳೆಯಿಂದಾಗಿ ಹಾಳಾದ ಬೆಳೆಗಳನ್ನು ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸರ್ವೇ ನಡೆಸಬೇಕು. ಅಲ್ಲದೇ, ಬೆಳೆ ನಷ್ಟಕ್ಕೆ ಎರಡೂ ಸರ್ಕಾರಗಳು ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕು ಎಂದು ಹಸಿರು ಸೇನೆ ರಾಜ್ಯಾಧ್ಯಕ್ಷ ಕರಿಬಸಪ್ಪ ಗೌಡ ಮಾಚೇನಹಳ್ಳಿ ಒತ್ತಾಯಿಸಿದ್ದಾರೆ.

- ಅಳಿದುಳಿದ ಬೆಳೆಗಳ ಮಾರಾಟಕ್ಕೆ ಶೀಘ್ರ ಕೃಷಿ ಮಾರುಕಟ್ಟೆ ಪ್ರಾರಂಭಿಸಿ: ಹಸಿರು ಸೇನೆ ರಾಜ್ಯಾಧ್ಯಕ್ಷ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರೈತರು ತಮ್ಮ ಅಳಿದುಳಿದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಕೃಷಿ ಮಾರುಕಟ್ಟೆ ಪ್ರಾರಂಭಿಸಬೇಕು. ಅತಿಯಾದ ಮಳೆಯಿಂದಾಗಿ ಹಾಳಾದ ಬೆಳೆಗಳನ್ನು ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸರ್ವೇ ನಡೆಸಬೇಕು. ಅಲ್ಲದೇ, ಬೆಳೆ ನಷ್ಟಕ್ಕೆ ಎರಡೂ ಸರ್ಕಾರಗಳು ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕು ಎಂದು ಹಸಿರು ಸೇನೆ ರಾಜ್ಯಾಧ್ಯಕ್ಷ ಕರಿಬಸಪ್ಪ ಗೌಡ ಮಾಚೇನಹಳ್ಳಿ ಒತ್ತಾಯಿಸಿದರು.

ಹೊನ್ನಾಳಿಯಲ್ಲಿ ಅ.29ರಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯ ಕುರಿತಂತೆ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರೈತರ ಎಲ್ಲ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅ.29ರಂದು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ಅವಳಿ ತಾಲೂಕುಗಳ ರೈತರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.

ಅಲ್ಪಸ್ವಲ್ಪ ಉಳಿದಿರುವ ಮುಂಗಾರು ಹಂಗಾಮಿನ ಬೆಳೆಗಳು ಕಟಾವಿಗೆ ಬಂದಿವೆ. ಅತಿವೃಷ್ಠಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ. ಆರಂಭದಲ್ಲಿ ಸರಿಯಾಗಿ ಬಿತ್ತನೆಯನ್ನೂ ಮಾಡಲಾಗಲಿಲ್ಲ. ಇನ್ನೊಂದು ಕಡೆ ಬಿತ್ತನೆ ಮಾಡಿದ್ದ ಬೆಳೆಗೆ ಮಳೆಯ ಕಾಟ. ಇದೀಗ ಉಳಿದ ಬೆಳೆಗಳ ಫಸಲನ್ನು ಉಳಿಸಲು ಮತ್ತೆ ಮಳೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಮಂಜೂರಾತಿ ಪತ್ರ ನೀಡಬೇಕು. ಶಾಸಕ ಡಿ.ಜಿ. ಶಾಂತನಗೌಡ ಅವರು ನಿದ್ದೆಯಿಂದ ಎದ್ದು ಅಧಿಕಾರಿಗಳಿಗೆ ಚಾಟಿ ಏಟು ಬೀಸಬೇಕು. ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನಲ್ಲಿ ಸಾಕಷ್ಟು ಕೆರೆಗಳಿದ್ದು, ಅವುಗಳ ಹೂಳೆತ್ತಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಎಂದರು.

ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಸಿ. ಬಸಪ್ಪ ಅರಬಗಟ್ಟೆ ಮಾತನಾಡಿ, ಜೆಜೆಎಂ ಯೋಜನೆಯಡಿ ಕೈಗೊಂಡಿರುವ ಕುಡಿಯುವ ನೀರಿನ ಯೋಜನೆ ಸಂಪೂರ್ಣ ಕಳಪೆಯಾಗಿದೆ. ಈ ಕೂಡಲೇ ತನಿಖೆಗೊಳಪಡಿಸಬೇಕು. ಮೆಕ್ಕೆಜೋಳ, ಭತ್ತ, ಹತ್ತಿ, ಈರುಳ್ಳಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದರು.

ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಕೆರೆಯಾದ ಸವಳಂಗ ಹೊಸಕೆರೆ ಹೂಳು ತೆಗೆಸಬೇಕು. ಖಾಸಗಿ ಹಣಕಾಸಿನ ಸಂಸ್ಥೆಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡಿರುವ ಸಾಲ ವಸೂಲಾತಿಯಲ್ಲಿ ರೈತರಿಗೆ ಕಿರುಕುಳ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಉಪಾಧ್ಯಕ್ಷ ಬಸವರಾಜಪ್ಪ ಬಣಕಾರ, ಗೌರವಾಧ್ಯಕ್ಷ ಜಿ.ವೀರಪ್ಪ ಸೊರಟೂರು, ಮಾಜಿ ಸೈನಿಕ ರಮೇಶ್ ಹಿರೇಮಠ ಮತ್ತಿತರ ರೈತರು ಉಪಸ್ಥಿತರಿದ್ದರು.

- - -

(ಬಾಕ್ಸ್‌) * ಟ್ರಾನ್ಸ್‌ಫಾರ್ಮರ್‌ ಸೌಲಭ್ಯ ಸರಳಗೊಳಿಸಿ: ಉಮೇಶ್‌ ನ್ಯಾಮತಿ ತಾಲೂಕು ಅಧ್ಯಕ್ಷ ಉಮೇಶ್ ಬೆಳಗುತ್ತಿ ಮಾತನಾಡಿ, ರೈತರು ಟ್ರಾನ್ಸ್‌ಫಾರ್ಮರ್‌ ತೆಗೆದುಕೊಳ್ಳಬೇಕಾದರೆ ₹2 ಲಕ್ಷದವರೆಗೂ ಖರ್ಚು ಮಾಡಬೇಕಾದ ದುಸ್ಥಿತಿ ಸರ್ಕಾರ ನಿರ್ಮಾಣ ಮಾಡಿದೆ. ಈ ಹಿಂದೆ ಕೇವಲ ಹತ್ತಿಪ್ಪತ್ತು ಸಾವಿರ ಖರ್ಚು ಮಾಡಿ ಟ್ರಾನ್ಸ್‌ಫಾರ್ಮರ್‌ (ಟಿ.ಸಿ) ಪಡೆಯಬಹುದಿತ್ತು. ಆದ್ದರಿಂದ ನೂತನ ನಿಯಮ ರದ್ದುಪಡಿಸಿ ಈ ಹಿಂದಿನಂತೆ ಹತ್ತಿಪ್ಪತ್ತು ಸಾವಿರಕ್ಕೆ ಟಿ.ಸಿ. ಪಡೆದು ತಮ್ಮ ಕೃಷಿ ಕೆಲಸ ಮುಂದುವರಿಸಲು ರೈತರಿಗೆ ಅವಕಾಶ, ಅನುಕೂಲ ಮಾಡಿಕೊಡಬೇಕು ಎಂದರು.

- - -

-15ಎಚ್.ಎಲ್.ಐ2.ಜೆಪಿಜಿ:

ಹೊನ್ನಾಳಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕರಿಬಸಪ್ಪ ಗೌಡ ಮಾತನಾಡಿದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ