ದ.ಕ. ಜಿಲ್ಲೆಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಧರಣಿ

KannadaprabhaNewsNetwork | Published : Feb 6, 2025 12:15 AM

ಸಾರಾಂಶ

ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಂತೂರು ಜಂಕ್ಷನ್‌ನಲ್ಲಿ ಸಾಮೂಹಿಕ ಧರಣಿ ನಡೆಯಿತು. ಜಿಲ್ಲೆಯ ಹಲವು ಜನಪರ ಸಂಘಟನೆಗಳ ಮುಖಂಡರು ಧರಣಿಯಲ್ಲಿ ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯನ್ನು ಹಾದು ಹೋಗುವ 4 ಹೆದ್ದಾರಿಗಳು ಸಮಸ್ಯೆಯ ಆಗರವಾಗಿದ್ದು, ಶೀಘ್ರವೇ ಸಮಸ್ಯೆಗಳನ್ನು ಪರಿಹರಿಸಬೇಕು, ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ಶರವೇಗದಲ್ಲಿ ಪೂರ್ಣಗೊಳಿಸಬೇಕು, ನಂತೂರು ಮೇಲ್ಸೇತುವೆ, ಕೂಳೂರು ಸೇತುವೆ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ತಿಗೊಳಿಸಬೇಕು, ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳಿಸಬೇಕು, ಹೊಸ ಟೋಲ್ ಗೇಟ್‌ಗಳನ್ನು ಸ್ಥಾಪಿಸುವಾಗ ಅಂತರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಂತೂರು ಜಂಕ್ಷನ್‌ನಲ್ಲಿ ಸಾಮೂಹಿಕ ಧರಣಿ ನಡೆಯಿತು.

ಜಿಲ್ಲೆಯ ಹಲವು ಜನಪರ ಸಂಘಟನೆಗಳ ಮುಖಂಡರು ಧರಣಿಯಲ್ಲಿ ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದರು. ಧರಣಿಯ ಬಳಿಕ ದ‌.ಕ. ಜಿಲ್ಲೆಯ ಹೆದ್ದಾರಿ ಸಮಸ್ಯೆಗಳ ಕುರಿತು ಚರ್ಚಿಸಲು ಮಂಗಳೂರಿನಲ್ಲಿ ಹೆದ್ದಾರಿ ಪ್ರಾಧಿಕಾರದ ವಿಶೇಷ ಸಭೆ ಕರೆಯುವಂತೆ ಆಗ್ರಹಿಸಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಪತ್ರ ಕಳುಹಿಸಿ ಕೊಡಲಾಯಿತು.

ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಸಾಮೂಹಿಕ ಧರಣಿ ಉದ್ಘಾಟಿಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಸಮಾರೋಪ ಭಾಷಣ ಮಾಡಿದರು.

ಕೆಪಿಸಿಸಿ ವಕ್ತಾರ ಎಂ.ಜಿ. ಹೆಗಡೆ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್, ದಲಿತ ಮುಖಂಡ ಎಂ. ದೇವದಾಸ್, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಆಮ್ ಆದ್ಮಿಯ ಎಸ್.ಎಲ್. ಪಿಂಟೊ, ಬಂಟ್ವಾಳ ತಾಲೂಕು ಹೋರಾಟ ಸಮಿತಿಯ ಸುರೇಶ್ ಕುಮಾರ್ ಬಂಟ್ವಾಳ, ಮಾಜಿ ಕಾರ್ಪೊರೇಟರ್ ಮರಿಯಮ್ಮ ಥಾಮಸ್, ರೈತ ಸಂಘದ ಕೆ. ಯಾದವ ಶೆಟ್ಟಿ, ಆಲ್ವಿನ್ ಮಿನೆಜಸ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವಿವಿಧ ಸಂಘಟನೆಗಳ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ವಸಂತ ಆಚಾರಿ, ಬಿ.ಕೆ. ಇಮ್ತಿಯಾಜ್, ಸದಾಶಿವ ದಾಸ್ ಕುಪ್ಪೆಪದವು, ರಾಧಾ ಮೂಡುಬಿದಿರೆ, ವಿ. ಕುಕ್ಯಾನ್, ಎಚ್.ವಿ. ರಾವ್, ಯೋಗೀಶ್ ಜಪ್ಪಿನಮೊಗರು, ಸದಾಶಿವ ಪಡುಬಿದ್ರಿ, ಮಾಜಿ ಕಾರ್ಪೊರೇಟರ್‌ಗಳಾದ ಜಯಂತಿ ಶೆಟ್ಟಿ, ದಯಾನಂದ ಶೆಟ್ಟಿ, ಅಯಾಜ್ ಕೃಷ್ಣಾಪುರ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು. ಹೋರಾಟ ಸಮಿತಿ ಸಹ ಸಂಚಾಲಕ ಶ್ರೀನಾಥ್ ಕುಲಾಲ್ ನಿರೂಪಿಸಿದರು.

Share this article