ಅಂಡರ್‌ಪಾಸ್ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Feb 6, 2025 12:15 AM

ಸಾರಾಂಶ

ಕನಕ ದುರ್ಗಮ್ಮ ದೇವಸ್ಥಾನ ಬಳಿ ರೈಲ್ವೆ ಅಂಡರ್‌ಪಾಸ್ ರಸ್ತೆಯನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಬೇಕು

ಬಳ್ಳಾರಿ: ಇಲ್ಲಿನ ಕನಕ ದುರ್ಗಮ್ಮ ದೇವಸ್ಥಾನ ಬಳಿ ರೈಲ್ವೆ ಅಂಡರ್‌ಪಾಸ್ ರಸ್ತೆಯನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ವಿಪ ಸದಸ್ಯ ವೈ.ಎಂ. ಸತೀಶ್ ನೇತೃತ್ವದಲ್ಲಿ ಬಿಜೆಪಿಯ ಕಾರ್ಯಕರ್ತರು ಬುಧವಾರ ಪ್ರತಿಭಟಿಸಿ ಪೊಲೀಸ್ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿ, ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಅಂಡರ್‌ಪಾಸ್‌ನ ಕಾಮಗಾರಿ ಪೂರ್ಣಗೊಂಡಿದ್ದು, ವಿನಾಕಾರಣ ವಿಳಂಬ ಮಾಡುತ್ತಿರುವ ಕುರಿತು ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದ್ದ ಬಿಜೆಪಿ ಕಾರ್ಯಕರ್ತರು, ಫೆ.5ರಂದು ಅಂಡರ್‌ಪಾಸ್ ನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಲಾಗುವುದು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿ ಭರವಸೆ ಹಿನ್ನೆಲೆ ಪ್ರತಿಭಟನೆ ವಾಪಸ್‌ ಪಡೆಯಲಾಗಿತ್ತು. ಆದರೆ ಫೆ.5ರಂದು ಅಂಡರ್‌ ಪಾಸ್ ಮುಕ್ತಗೊಳಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಶಾಸಕ ವೈ.ಎಂ. ಸತೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರಲ್ಲದೆ, ಅಂಡರ್‌ಪಾಸ್ ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಬ್ಯಾರಿಕೇಡ್ ತೆಗೆಯಲು ಮುಂದಾದರು. ಪ್ರತಿಭಟನೆ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದ ಪೊಲೀಸರು, ಪ್ರತಿಭಟನಾಕಾರರನ್ನು ತಡೆದರು. ಇದೇ ವೇಳೆ ಪೊಲೀಸರು, ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಮಧ್ಯಪ್ರವೇಶಿಸಿದ ಎಎಸ್ಪಿ ರವಿಕುಮಾರ್ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಉಪ ಆಯುಕ್ತ ರೆಹಮಾನ್ ಖಾನ್ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ನೀವು ಕಾಂಗ್ರೆಸ್ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿದ್ದೀರಿ ಎಂದು ಆಕ್ರೋಶಗೊಂಡರು. ಕಾಮಗಾರಿ ಮುಗಿದ ಬಳಿಕವೂ ಜನರ ಓಡಾಟಕ್ಕೆ ಏಕೆ ಅನುವು ಮಾಡಿಕೊಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಉಪ ಆಯುಕ್ತ ಸಮರ್ಪಕ ಉತ್ತರ ನೀಡದೇ ಜಾರಿಕೊಂಡರು. ಇದರಿಂದ ಮತ್ತಷ್ಟು ಕುಪಿತರಾದರು.

ಮುಖಂಡರಾದ ಎಚ್‌.ಹನುಮಂತಪ್ಪ, ಗುತ್ತಿಗನೂರು ವಿರುಪಾಕ್ಷಗೌಡ, ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕರ್, ಸುರೇಖಾ ಮಲ್ಲನಗೌಡ, ಗೋವಿಂದರಾಜುಲು, ಇಬ್ರಾಹಿಂಬಾಬು, ಮಾಜಿ ಬುಡಾ ಅಧ್ಯಕ್ಷ ಮಾರುತಿಪ್ರಸಾದ್, ಹನುಮಂತಪ್ಪ, ಮಲ್ಲನಗೌಡ, ಗುರುಲಿಂಗನಗೌಡ, ಶರಣುಗೌಡ, ಮಲ್ಲೇಶ್, ಮದಿರೆ ಕುಮಾರಸ್ವಾಮಿ, ಸುಗುಣ ಮತ್ತಿತರರಿದ್ದರು.

ಕಾಮಗಾರಿಯಲ್ಲಿ ಹಗರಣ:

ರಸ್ತೆ ಕಾಮಗಾರಿಯಲ್ಲಿ ದೊಡ್ಡ ಹಗರಣ ನಡೆದಿದೆ. ಈ ಕುರಿತು ತನಿಖೆಯಾಗಲಿ. ಬಳಿಕ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಶಾಸಕ ಸತೀಶ್ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಮಗಾರಿಗೆ ₹1.8 ಕೋಟಿ ಖರ್ಚಾಗಿದೆ. ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಕೂಲಂಕಷ ಪರೀಕ್ಷಿಸಿಯೇ ಜಿಲ್ಲಾಧಿಕಾರಿ ಹಣ ಬಿಡುಗಡೆ ಮಾಡಬೇಕು ಎಂದರು.

ಜ.31ಕ್ಕೆ ಕಾಮಗಾರಿ ಮುಗಿದಿದೆ. ವಿನಾಕಾರಣ ವಿಳಂಬವಾಗುತ್ತಿದೆ. ಶಾಸಕ ನಾರಾ ಭರತ್ ರೆಡ್ಡಿ ಫೆ.9ಕ್ಕೆ ರಸ್ತೆ ಮುಕ್ತಗೊಳಿಸಲು ಕುತಂತ್ರ ಮಾಡಿದ್ದಾರೆ. ಮೂರು ತಿಂಗಳಿನಿಂದ ಜನರು ಪರದಾಡುತ್ತಿದ್ದಾರೆ. ಶಾಸಕರನ್ನು ಯಾಕಾದರೂ ಚುನಾಯಿಸಿದೆವು ಎಂದು ಜನರು ಬೇಸರ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

Share this article