ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಬದುಕು ರೂಪಿಸಲು ಅತ್ಯಂತ ಅಗತ್ಯವಾಗಿರುವ ಶಿಕ್ಷಣಕ್ಕೆ ಮೊದಲ ಆದ್ಯತೆಯನ್ನು ನೀಡಬೇಕು. ಪ್ರತಿಯೊಬ್ಬರೂ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಅತ್ಯಗತ್ಯವಾಗಿರುವ ಶಿಕ್ಷಣದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಹೇಳಿದರು.ಕೊಡವ ಮುಸ್ಲಿಂ ಕುಟುಂಬಗಳ ನಡುವಿನ ಮೊದಲ ವರ್ಷದ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿ ‘‘ಕೂವಲೆರ ಚಿಟ್ಟಡೆ ಕಪ್-2025” ಯಶಸ್ವಿ ಕಂಡ ಕಾರಣಕ್ಕಾಗಿ ಚಿಟ್ಟಡೆಯ ಕೂವಲೆರ ಕುಟುಂಬಸ್ಥರ ಆತಿಥ್ಯದಲ್ಲಿ ಇತ್ತೀಚೆಗೆ ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ಚಿಟ್ಟಡೆಯ ಮದರಸಾ ಮೈದಾನದಲ್ಲಿ ನಡೆದ ಯಶಸ್ಸು ಸಂಭ್ರಮಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಆದ್ದರಿಂದ ವಿದ್ಯಾರ್ಥಿಗಳ ನಿರಂತರ ಶೈಕ್ಷಣಿಕ ಉತ್ತೇಜನಕ್ಕಾಗಿ ಕೊಡವ ಮುಸ್ಲಿಂ ಸಮುದಾಯದ ಪ್ರತಿ ಮನೆತನಗಳಲ್ಲಿ ಕೌಟುಂಬಿಕ ಶಿಕ್ಷಣ ನಿಧಿ ಸ್ಥಾಪನೆಯಾಗಬೇಕು ಎಂದು ಸಲಹೆ ನೀಡಿದ ಅವರು, ಶಿಕ್ಷಣ ನಿಧಿಯ ಮೂಲಕ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ವಿವಿಧ ಯೋಜನೆಗಳು ಆರಂಭಗೊಳ್ಳಬೇಕು ಎಂದು ತಿಳಿಸಿದರು.ಆರ್ಥಿಕ ಕೊರತೆಯಿಂದ ಅನಿವಾರ್ಯವಾಗಿ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದ ಕಾಲ ಈಗ ಬದಲಾಗಿದೆ. ಇಂದು ಸರ್ಕಾರ ಪೋಷಕರಿಗೆ ಹೊರೆಯಾಗದ ರೀತಿಯಲ್ಲಿ ಉಚಿತ ಶಿಕ್ಷಣದ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತಿದೆ. ಇದನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಸದುಪಯೋಗಪಡಿಸಿಕೊಳ್ಳಬೇಕು. ಕ್ರೀಡಾಕೂಟಗಳನ್ನು ಬದುಕಿನ ಒಂದು ಭಾಗವನ್ನಾಗಿಯಷ್ಟೇ ಪರಿಗಣಿಸಬೇಕೆ ಹೊರತು ಅದನ್ನೇ ಪೂರ್ಣಾವಧಿಯಾಗಿಸಬಾರದು ಎಂದು ಕಿವಿಮಾತು ಹೇಳಿದರು.
ಇಂದು ಕೇವಲ ಶಿಕ್ಷಣದ ಬದಲಿಗೆ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಗುಣಮಟ್ಟದ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಬಹುದಾಗಿದೆ. ಮಕ್ಕಳ ವಿದ್ಯಾಭ್ಯಾಸದ ಕುರಿತು ಪೋಷಕರು ಹೆಗ್ಗುರಿಗಳನ್ನು ಹೊಂದಿರಬೇಕು. ಈ ಮೂಲಕ ಸಮುದಾಯದ ವಿದ್ಯಾರ್ಥಿಗಳನ್ನು ಐಎಎಸ್, ಐಪಿಎಸ್ ಮೊದಲಾದ ಉನ್ನತ ಹುದ್ದೆಗಳನ್ನು ಅಲಂಕರಿಸಲು ಪ್ರೇರೇಪಿಸಬೇಕು ಎಂದು ಕರೆ ನೀಡಿದ ಸೂಫಿ ಹಾಜಿ, ಹಿಂದಿನ ತಲೆಮಾರಿನವರು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಸರ್ಕಾರಿ ಸೌಲಭ್ಯಗಳು ಕಡಿಮೆ ಇತ್ತು. ಆದರೆ ಇದೀಗ ಶಿಕ್ಷಣದಿಂದ ಹಿಡಿದು ಉದ್ಯೋಗದ ತರಬೇತಿವರೆಗೂ ಉತ್ತೇಜನ ನೀಡುವ ಸರ್ಕಾರಿ ಮತ್ತು ಸರ್ಕಾರೇತರ ಸೌಲಭ್ಯಗಳಿವೆ. ಜೊತೆಗೆ ಸರ್ಕಾರ ಶಿಕ್ಷಣಕ್ಕಾಗಿ ಸಾಲದ ಸೌಲಭ್ಯವು ನೀಡುತ್ತಿದೆ. ಇಂದು ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯುವ ಹಾದಿ ಸುಗಮವಾಗಿರುವುದರಿಂದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.ಕೂವಲೆರ ಕುಟುಂಬ ಸಂಘದ ಅಧ್ಯಕ್ಷರಾದ ಉಮ್ಮರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೂವಲೆರ ಕುಟುಂಬದ ತಕ್ಕರಾದ ಕೆ. ಎಚ್. ಸಾದಲಿ, ಕೆ.ಎಂ.ಎ. ಆಡಳಿತ ಮಂಡಳಿ ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು, ಕೆ.ಎಂ.ಎ. ನಿರ್ದೇಶಕರೂ ಆಗಿರುವ ಕೊಂಡಂಗೇರಿ ಮುಸ್ಲಿಂ ಜಮಾಅತ್ತಿನ ಅಧ್ಯಕ್ಷರಾದ ಕುಪ್ಪಂದಿರ ಕೆ. ಯೂಸುಫ್ ಹಾಜಿ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ನಿರ್ದೇಶಕರಾದ ಪುದಿಯತ್ತಂಡ ಎಚ್. ಸಂಶುದ್ದೀನ್, ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಹಾಜಿ, ಪುದಿಯಾಣೆರ ಎಂ. ಹನೀಫ್, ಪುಡಿಯಂಡ ಶಾದುಲಿ, ದುದ್ದಿಯಂಡ ಎಚ್. ಮೊಯ್ದು ಹಾಜಿ, ಬೇಟೋಳಿ ಗ್ರಾ. ಪಂ. ಸದಸ್ಯರಾದ ಮೀತಲತಂಡ ರಜ್ಹಾಕ್, ಎರಟೇಂಡ ಲತೀಫ್ ಮೊದಲಾದವರು ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರಾದ ದುದ್ದಿಯಂಡ ಸೂಫಿ ಹಾಜಿ, ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು ಮತ್ತು ಕೆಎಂಎ ನಿರ್ದೇಶಕರಾದ ಕುಪ್ಪಂದಿರ ಕೆ. ಯೂಸುಫ್ ಹಾಜಿ ಅವರಿಗೆ ಕೂವಲೆರ ಕುಟುಂಬಸ್ಥರ ಪರವಾಗಿ ಗೌರವಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೂವಲಿರ ಚಿಟ್ಟಡೆ ಕಪ್-2025ರ ಆಯೋಜನಾ ಸಮಿತಿಯ ಪ್ರಮುಖರಾದ ಫಕ್ರುದ್ದೀನ್, ಅಬ್ಬಾಸ್, ಸಜೀರ್ ಪೈಜ್ಹು, ಸೇರಿದಂತೆ ಕೂವಲೆರ ಕುಟುಂಬಸ್ಥರು, ಕೆ. ಎಂ.ಎ. ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.