ಹಾನಗಲ್ಲ: ಧರ್ಮ ಸಂಸ್ಕೃತಿ ಅಳಿವಿನ ಅಂಚಿಗೆ ಜಾರುತ್ತಿದೆಯೇ ಎಂಬ ಭಯ ಸಮಾಜಕ್ಕೆ ಕಾಡುತ್ತಿದ್ದು, ಇದನ್ನು ತಿದ್ದಿಕೊಳ್ಳದಿದ್ದರೆ ನಾಳೆಗೆ ದೊಡ್ಡ ದಂಡ ತೆರುವ ಸ್ಥಿತಿ ಎದುರಾಗಲಿದೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಉಪಾಧ್ಯಕ್ಷ ಎಸ್.ಸಿ.ಹೇಮಗಿರಿಮಠ ತಿಳಿಸಿದರು.
ಸಾಮಾಜಿಕ ಚಿಂತನೆ ನಮ್ಮ ಮೊದಲ ಆದ್ಯತೆಯಾಗಲಿ. ಆರ್ಥಿಕವಾಗಿ ಎಷ್ಟೇ ಸಿರಿವಂತರಾದರೂ ಸಾಂಸ್ಕೃತಿಕ ಸಾಮಾಜಿಕ ಹಿತದತ್ತ ನಿಷ್ಕಾಳಜಿ ಬೇಡ. ಸಂಸ್ಕೃತಿಯಿಂದ ದೂರ ಉಳಿಯುವುದೆಂದರೆ ಅದು ಅವನತಿಯ ಸಂಕೇತವಾಗುತ್ತದೆ. ಎಲ್ಲ ಸಂದರ್ಭಗಳಲ್ಲಿಯೂ ನಮ್ಮ ಮಕ್ಕಳಿಗೆ ಈಗಲೇ ಉತ್ತಮ ಸಂಸ್ಕಾರ ನೀಡುವ ಕೆಲಸ ಆಗಬೇಕು. ಅದಕ್ಕಾಗಿ ೧೨ನೇ ಶತಮಾನದ ಶಿವಶರಣರ ವಚನಗಳು ಅವರ ಹಿತನುಡಿಗಳು ಹೆಚ್ಚು ಪರಿಣಾಮಕಾರಿಯಾಗಬಲ್ಲವು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರ ಘಟಕ ಅಧ್ಯಕ್ಷ ಪ್ರೊ. ಸಿ. ಮಂಜುನಾಥ, ಸಂಸ್ಕಾರ ಮನೆಯಿಂದಲೇ ಆರಂಭವಾಗಬೇಕು. ಇದರಲ್ಲಿ ತಾಯಿಯ ಪಾತ್ರ ಅತ್ಯಂತ ಮುಖ್ಯವಾದುದು. ಎಲ್ಲ ಕಾಲದಲ್ಲಿಯೂ ಮಹಾತ್ಮರ ಚಿಂತನೆಗಳು ಮಕ್ಕಳಿಗೆ ಉತ್ತಮ ಸಂಸ್ಕಾರದ ನೀತಿ ಹೇಳಬಲ್ಲವು. ಅದಕ್ಕಾಗಿ ಬೇಕಾದ ಶಿಕ್ಷಣಕ್ಕೆ ನಾವು ಆದ್ಯತೆ ನೀಡೋಣ. ಮಾನವ ಒಂದು ದೊಡ್ಡ ಸಂಪನ್ಮೂಲ ಎಂಬುದನ್ನು ಮರೆಯುವುದು ಬೇಡ. ಆದರೆ, ಈ ಮಾನವ ಸಂಪನ್ಮೂಲ ಸಮಾಜದ ಹಿತಕ್ಕೆ ಮುಂದಾಗಲಿ, ವಿಘಟನೆಯ ವಿಕಟ ಚಿಂತೆಗಳು ಬೇಡ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ನಿವೃತ್ತ ಶಿಕ್ಷಕ ರವಿರಾಜ ತಿರುಮಲೆ ಮಾತನಾಡಿ, ಮಡಿವಾಳ ಮಾಚಿದೇವರ ಜೀವನ ಸಾಧನೆ ವಿವರಿಸಿ, ಸಮಾಜಕ್ಕೆ ವಚನಕಾರರ ಕೊಡುಗೆ ಅಪಾರವಾದುದು. ಮೂಢ ನಂಬಿಕೆಗಳಿಂದ ದೂರವಾಗಿದ್ದು ಉತ್ತಮ ಸಂಸ್ಕಾರಕ್ಕೆ ಮೊದಲ ಆದ್ಯತೆ ನೀಡೋಣ. ಎಲ್ಲ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಹೇಳುವ ಚಿಂತನೆಗಳು ವಚನಗಳಲ್ಲಿವೆ ಎಂದರು.
ಪುರಸಭೆ ಉಪಾಧ್ಯಕ್ಷೆ ವೀಣಾ ಗುಡಿ, ವಿಶಾಲಾಕ್ಷಿ ಕಳ್ಳೀಮನಿ, ಸುಮಾ ಹಿರೇಗೌಡ್ರ, ಸುಜಾತಾ ನಂದೀಶೆಟ್ಟರ, ವಿಜಯಲಕ್ಷ್ಮೀ ಹಳ್ಳೀಕೇರಿ, ದೀಪಾ ಸಾಲವಟಗಿ, ರೇಖಾ ಶೆಟ್ಟರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀನಿಧಿ ಕಳ್ಳೀಮನಿ, ಖುಷಿ ಕಳ್ಳೀಮನಿ ವಚನ ಗೀತ ಗಾಯನ ಮಾಡಿದರು.