ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಕೋಳಘಟ್ಟ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂಭಾಗ ಠೇವಣಿದಾರರು ತಮ್ಮ ಠೇವಣಿ ಹಣವನ್ನು ಹಿಂತಿರುಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಕೋಳಘಟ್ಟದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು ೨೩೦೦ ಮಂದಿ ಷೇರುದಾರರು ಇದ್ದಾರೆ. ಇವರಲ್ಲಿ ಸುಮಾರು ೧೧೫ ಮಂದಿ ಷೇರುದಾರರು ಸುಮಾರು ೫೧ ಲಕ್ಷಕ್ಕೂ ಹೆಚ್ಚು ಹಣವನ್ನು ಈ ಸಂಘದಲ್ಲಿ ಠೇವಣಿ ಇರಿಸಿದ್ದಾರೆ. ಇವರ ಪೈಕಿ ಹಲವಾರು ಮಂದಿಯ ಠೇವಣಿ ಅವಧಿ ಮುಗಿದು ವರ್ಷಗಳೇ ಕಳೆದಿದ್ದರೂ ಸಹ ಸಂಘದಿಂದ ತಮಗೆ ಠೇವಣಿ ಹಣ ಮತ್ತು ಅದಕ್ಕೆ ಬರುವ ಬಡ್ಡಿ ಹಣವನ್ನೂ ನೀಡದೇ ಸತಾಯಿಸುತ್ತಿದ್ದಾರೆಂದು ಆರೋಪಿಸಿ ಠೇವಣಿದಾರರು ಸಂಘದ ಮುಂದೆ ಪ್ರತಿಭಟನೆ ಮಾಡಿದರು. ಈ ಸಂಧರ್ಭದಲ್ಲಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎ.ಮಹಲಿಂಗಯ್ಯ ಮಾತನಾಡಿ, ಸಹಕಾರ ಸಂಘದ ಪದಾಧಿಕಾರಿಗಳಲ್ಲಿ ಭಿನ್ನಾಭಿಪ್ರಾಯವಿದೆ. ಸಂಘದ ಹಿಂದಿನ ಕಾರ್ಯದರ್ಶಿಯೊಬ್ಬರು ಸುಮಾರು ೩೪ ಲಕ್ಷಕ್ಕೂ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆಂದು ಲೆಕ್ಕಪರಿಶೋಧನಾ ವರದಿಯಲ್ಲಿ ಬಯಲಾಗಿದೆ. ಆ ಕಾರ್ಯದರ್ಶಿ ಮೃತ ಪಟ್ಟಿದ್ದಾರೆ. ಅವರಿಂದ ದುರುಪಯೋಗಪಡಿಸಿಕೊಂಡಿರುವ ಹಣವನ್ನು ವಸೂಲು ಮಾಡದೇ ಆಡಳಿತ ಮಂಡಲಿ ಪಕ್ಷಪಾತ ಮಾಡಿರುವ ಕಾರಣ ಠೇವಣಿದಾರರಿಗೆ ಹಣ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಈಗಾಗಲೇ ಠೇವಣಿ ಇಟ್ಟಿರುವವರಿಗೆ ಸುಮಾರು ೨೨ ಲಕ್ಷ ರು.ಗಳನ್ನು ಮರುಪಾವತಿ ಮಾಡಬೇಕಿದೆ. ಆದರೆ ಆಡಳಿತ ಮಂಡಳಿಯ ಬೇಜವಾಬ್ದಾರಿತನದಿಂದಾಗಿ ಠೇವಣಿದಾರರಿಗೆ ಅನ್ಯಾಯವಾಗಿದೆ ಎಂದು ದೂರಿದರು. ಸದ್ಯ ಕೋಳಘಟ್ಟ ಕೃಷಿ ಪತ್ತಿನ ಸಹಕಾರ ಸಂಘ ಸಂಪೂರ್ಣ ನಷ್ಠದಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಬ್ಯಾಂಕ್ ಸಂಘದ ನೆರವಿಗೆ ಬಂದು ಠೇವಣಿದಾರರ ಹಣವನ್ನು ಹಿಂತಿರುಗಿಸಲು ಸಹಕಾರ ನೀಡಬೇಕೆಂದು ತಾವು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ರಾಜಣ್ಣನವರನ್ನು ಒತ್ತಾಯಿಸಿರುವುದಾಗಿ ಸಂಘದ ಮಾಜಿ ಅಧ್ಯಕ್ಷ ವೆಂಕಟಾಪುರದ ವೀರೇಂದ್ರ ಪಾಟೀಲ್ ಸಭೆಗೆ ತಿಳಿಸಿದರು. ಕೋಳಘಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಮಾತನಾಡಿ ಸಂಘದಿಂದ ವ್ಯಾಪಾರ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ, ಸಂಘಗಳಿಗೆ ಸಾಲ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಸುಮಾರು ೪೧ ಲಕ್ಷಕ್ಕೂ ಹೆಚ್ಚು ಸಾಲ ನೀಡಲಾಗಿದೆ. ಅವುಗಳಲ್ಲಿ ಬಹುಪಾಲು ಮಂದಿ ಸಾಲವನ್ನು ಹಿಂತಿರುಗಿಸಿಲ್ಲ. ಅಲ್ಲದೇ ಬಡ್ಡಿಯನ್ನೂ ಸಹ ಕಟ್ಟಿಲ್ಲ. ಅಲ್ಲದೇ ಹಿಂದಿನ ಕಾರ್ಯದರ್ಶಿಯವರಿಂದ ಸುಮಾರು ೩೪ ಲಕ್ಷ ರು. ಅವ್ಯವಹಾರವಾಗಿದೆ. ಹಾಗಾಗಿ ಠೇವಣಿದಾರರಿಗೆ ಹಣ ನೀಡಲು ಅಸಾಧ್ಯವಾಗಿದೆ ಎಂದು ತಿಳಿಸಿದರು. ಸಂಘ ಸಂಪೂರ್ಣವಾಗಿ ನಷ್ಠದಲ್ಲಿರುವ ಹಿನ್ನೆಲೆಯಲ್ಲಿ ತಮ್ಮ ಸಂಘದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಮಗೂ ಸೇರಿದಂತೆ ಇತರೆ ಸಿಬ್ಬಂದಿಗಳಿಗೆ ಒಂದುವರೆ ವರ್ಷದಿಂದ ಸಂಬಳವೂ ಇಲ್ಲದಾಗಿದೆ ಎಂದು ತಮ್ಮ ಅಸಹಾಯಕತೆಯನ್ನು ವಿವರಿಸಿದರು. ಸಾಲ ಪಡೆದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಸಹ ಅವರು ತಿಳಿಸಿದರು.ಈ ಸಂಧರ್ಭದಲ್ಲಿ ಗ್ರಾಮದ ಮುಖಂಡರಾದ ಕೆ.ಆರ್.ಉಮೇಶ್, ಮಲ್ಲಿಕಾರ್ಜುನ, ಶ್ರೀನಿವಾಸ್, ಯೋಗೀಶ್, ಹೊನ್ನಪ್ಪ, ಕೆ.ಎಂ.ನಾಗರಾಜು, ರಾಜಪ್ಪ, ಚನ್ನಿಗರಾಮಯ್ಯ, ಹೊನ್ನಮ್ಮ, ನಂಜಮ್ಮ, ಸುಧಾ, ವಿನುತ, ಮೈತ್ರಮ್ಮ, ಸಾವಿತ್ರಮ್ಮ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.