ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಸಮಸ್ಯೆಗಳ ಬಗೆಹರಿಸಲು ಸರ್ಕಾರದ ಗಮನ ಸೆಳೆಯಲಾಗಿತ್ತು. ಇದುವರೆಗೂ ಸರ್ಕಾರ ಬೇಡಿಕೆಗಳ ಈಡೇರಿಸದೆ ಉದಾಸೀನ ತೋರಿದೆ ಎಂದು ಪ್ರತಿಭಟನಾಕಾರರು ನೋವು ತೋಡಿಕೊಂಡರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಡಿ.ಎಂ.ಮಲಿಯಪ್ಪ ಮಾತನಾಡಿ, ತಾವೇ ಒಪ್ಪಿಕೊಂಡಿರುವ ಪ್ರಕಾರ ಎಲ್ಲಾ ನೌಕರರಿಗೆ 5 ಸಾವಿರ ರು. ವೇತನ ಹೆಚ್ಚಿಸಿ ಇಲಾಖೆಯಿಂದ ಆದೇಶ ಹೊರಡಿಸಬೇಕು. ನೌಕರರು ನಿವೃತ್ತಿಯಾದರೆ, ನಿಧನ ಹೊಂದಿದರೆ ಇಡಿಗಂಟು 6 ಲಕ್ಷ ರು. ಕೊಡಬೇಕು. ಸೇವಾ ಹಿರಿತನದ ಆಧಾರದಲ್ಲಿ ವೇತನ ನೀಡಬೇಕು. ಸ್ವಚ್ಛ ವಾಹಿನಿ ನೌಕರರ ಸಭೆ ಕರೆದು ಅವರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು. ಪ್ರತಿಯೊಂದು ಪಂಚಾಯಿತಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ತುಂಬಬೇಕು. ಕಳೆದ 18-20 ವರ್ಷಗಳಿಂದ ಡಾಟಾ ಎಂಟ್ರಿ ಆಪರೇಟರ್‌ಗಳಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಅನುಮೋದನೆ ಕೊಡಬೇಕು. 2ನೇ ಡಾಟಾ ಎಂಟ್ರಿ ಆಪರೇಟರ್ ನೇಮಕಾತಿಯಾಗಬೇಕು. ಈಗಾಗಲೆ ಆರೋಗ್ಯದ ಕುರಿತು ಸಿಬ್ಬಂದಿಗಳ ಮಾಹಿತಿಗಾಗಿ ಫಾರ್ಮೆಟ್ ಕಳಿಸಿದ್ದೀರ. ಅದರಲ್ಲಿ ಗುತ್ತಿಗೆ, ಹೊರಗುತ್ತಿಗೆ, ಗೌರವ ಧನ, ಕಾರ್ಮಿಕರ ಮಾಹಿತಿ ನೀಡಲು ಸೂಚಿಸಿದ್ದು, ಆದರೆ ಈ ಫಾರ್ಮೆಟ್‍ನಲ್ಲಿ ಪಂಚಾಯಿತಿ ನೌಕರರೆಂದು ಮಾಹಿತಿ ಇಲ್ಲದಿರುವುದನ್ನು ಸರಿಪಡಿಸಿ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯನ್ನು ಒತ್ತಾಯಿಸಿದರು. ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ವಿ.ರಂಗನಾಥ್, ಜಯಲಕ್ಷ್ಮಿ, ಶಶಿ, ವೆಂಕಟೇಶ್, ಸೀನಪ್ಪ, ಮಾರಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.