ಕುಡಿವ ನೀರಿನ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Jul 22, 2026, 02:00 AM IST
ವಿಶ್ವ ಹಿಂದೂ ಪರಿಷತ್ ಹಾಗೂ ಸಾರ್ವಜನಿಕರು ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಉಪ ವಿಭಾಗಾಧಿಕಾರಿ ವಿಜಯಕುಮಾರ. ಎಚ್.ಬಿ., ಅವರಿಗೆ ಮನವಿಯನ್ನು ಸಲ್ಲಿಸಿದರು. | Kannada Prabha

ಸಾರಾಂಶ

ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ, ಚರಂಡಿ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಸಮಸ್ಯೆಯನ್ನು ತುರ್ತಾಗಿ ಪರಿಹರಿಸುವಂತೆ ಒತ್ತಾಯಿಸಿ ಮಂಗಳವಾರ ವಿಶ್ವ ಹಿಂದೂ ಪರಿಷತ್ ಹಾಗೂ ಸಾರ್ವಜನಿಕರು ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಉಪವಿಭಾಗಾಧಿಕಾರಿ ವಿಜಯಕುಮಾರ ಎಚ್.ಬಿ. ಅವರಿಗೆ ಮನವಿಯನ್ನು ಸಲ್ಲಿಸಿದರು.

ಸವಣೂರು: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ, ಚರಂಡಿ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಸಮಸ್ಯೆಯನ್ನು ತುರ್ತಾಗಿ ಪರಿಹರಿಸುವಂತೆ ಒತ್ತಾಯಿಸಿ ಮಂಗಳವಾರ ವಿಶ್ವ ಹಿಂದೂ ಪರಿಷತ್ ಹಾಗೂ ಸಾರ್ವಜನಿಕರು ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಉಪವಿಭಾಗಾಧಿಕಾರಿ ವಿಜಯಕುಮಾರ ಎಚ್.ಬಿ. ಅವರಿಗೆ ಮನವಿಯನ್ನು ಸಲ್ಲಿಸಿದರು.

ಪಟ್ಟಣದ ಹಲವಾರು ವಾರ್ಡಗಳಲ್ಲಿ ಕುಡಿಯುವ ನೀರಿನ ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಂಗಾಧರ ಬಾಣದ ಮಾತನಾಡಿ, ದಶಕಗಳ ಹಿಂದೆ ಸವಣೂರ ಪಟ್ಟಣದಲ್ಲಿ ನೀರಿನ ಬವಣೆ ಹೆಚ್ಚಾಗಿತ್ತು. ಈಗ ಮತ್ತೇ ಸುಮಾರು 20ರಿಂದ 25 ದಿನಕ್ಕೆ ನೀರು ಸರಬರಾಜುಗೊಳಿಸಲಾಗುತ್ತಿದೆ. ಮಳೆಗಾಲದಲ್ಲಿಯೂ ಸಹ ನೀರಿಗಾಗಿ ಪಟ್ಟಣದ ಜನರು ಪರದಾಡುವಂತಾಗಿರುವದು ವಿಷಾದನೀಯ ಸಂಗತಿಯಾಗಿದೆ. ವರದಾ ನದಿಯಲ್ಲಿ ನೀರು ಹರಿಯುತ್ತಿದ್ದರು ಸಹ ಪಟ್ಟಣದ ಮೋತಿ ತಲಾಬ್‌ಗೆ ನೀರು ಹರಿಸುತ್ತಿಲ್ಲ, ಕಾರಣ ಕೇಳಿದಲ್ಲಿ ಉಡಾಫೆಯ ಉತ್ತರವನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಂಡು ಸವಣೂರಿಗೆ ಸೂಕ್ತ ಸಮಯಕ್ಕೆ ನೀರು ಸರಬರಾಜುಗೊಳಿಸಲು ಮುಂದಾಗಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಅನಿವಾರ್ಯ ಆಗಲಿದೆ ಎಂದು ಎಚ್ಚರಿಸಿದರು.

ನೀರು ಸರಬರಾಜು ಕೈಗೊಳ್ಳಬೇಕು ಹಾಗೂ ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದ ಕಾರಣ ದುರ್ವಾಸನೆ, ಸೊಳ್ಳೆಗಳ ಕಾಟ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿದ್ದರು ಸಹ ಕಸ ವಿಲೇವಾರಿಯೂ ಸಮರ್ಪಕವಾಗಿ ನಡೆಯದೆ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಾರ್ವಜನಿಕರ ಸಮಸ್ಯೆಗಳನ್ನು ತಕ್ಷಣ ಪರಿಶೀಲಿಸಿ, ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಚರಂಡಿಗಳ ಸ್ವಚ್ಛತೆ ಹಾಗೂ ಕಸ ವಿಲೇವಾರಿಯನ್ನು ನಿಯಮಿತವಾಗಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿ ಶೀಘ್ರ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಸವಣೂರ ಹಾಗೂ ಸಾರ್ವಜನಿಕರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರಮುಖರಾದ ಶಿವಪುತ್ರಪ್ಪ ಕಲಕೋಟಿ, ಪ್ರವೀಣ ಬಾಲೇಹೊಸೂರ, ಶಂಭುಲಿಂಗ ಕಣವಿ, ಹನಮಂತಗೌಡ ಮುದಿಗೌಡ್ರ, ಮಹೇಶ ಮುದಗಲ್, ಅರುಣ ಬಗರೇ, ಶ್ರೀನಿವಾಸ ಗಿತ್ತೆ, ಗಜಾನನ ರಾಶಿನಕರ, ವೀಣಾಬಾಯಿ ರಾಶಿನಕರ, ಶಶಿಕಲಾ ರಾಶಿನಕರ, ಸಾವಿತ್ರಿ ಹಿರೇಮಠ, ಚನ್ನಬಸಯ್ಯ ದುರ್ಗದಮಠ, ಮಹೇಶ ಜಡಿ, ಮಹಾದೇವ ಮಹೇಂದ್ರಕರ, ರಾಮಣ್ಣ ಅಗಸರ, ಮಂಜುನಾಥ ಹಂಚಾಟೆ, ಶ್ರೀಕಾಂತ ಲಕ್ಷ್ಮೇಶ್ವರ, ಮದುಕರ ಗಿತ್ತೆ, ಅಜ್ಜಪ್ಪ ಹಂಜಾಟೆ, ಸತೀಶ ಬಿಕ್ಕಣ್ಣವರ, ವಿನಾಯಕ ದೇಶಮನೆ, ಗುರುನಾಥ ಅಚಲಕರ, ಏಕನಾಥ ಮಹೇಂದ್ರಕರ, ಮಹಿಳೆಯರು ಹಾಗೂ ಇತರರು ಪಾಲ್ಗೊಂಡಿದ್ದರು.

ಮನವಿ ಸಲ್ಲಿಕೆ: ಶಿಂಪಿಗಲ್ಲಿ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ನೀರು ಸರಬರಾಜು ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಕಂದಾಯ ಕಚೇರಿ ಆವರಣಕ್ಕೆ ತಲುಪಿತು. ನಂತರ, ಸಾಂಕೇತಿಕ ಪ್ರತಿಭಟನೆ ಕೈಗೊಂಡು ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಜಿಲ್ಲೆಯ 58 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಸಾಧ್ಯತೆ
ವಿಶೇಷಚೇತನರ ಮಾಸಾಶನ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ