ಗದಗ: ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ನಡೆದ ಗರ್ಭಿಣಿ ಮಾನ್ಯಾ ಪಾಟೀಲ ಮರ್ಯಾದೆ ಹತ್ಯೆ ಖಂಡಿಸಿ ಶುಕ್ರವಾರ ನಗರದ ಗಾಂಧಿ ವೃತ್ತದಲ್ಲಿ ಶುಕ್ರವಾರ ಪ್ರಾಯಶ್ಚಿತ ದಿನ ಆಚರಿಸಲಾಯಿತು.
ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಇಂಥ ಹತ್ಯೆಗಳು ಸಮಾಜಕ್ಕೆ ಕಪ್ಪುಚುಕ್ಕೆ. ಮರ್ಯಾದೆ ಹೆಸರಿನಲ್ಲಿ ಮನುಷ್ಯತ್ವವನ್ನು ಕೊಲೆ ಮಾಡುವುದು ಅತ್ಯಂತ ಅಮಾನವೀಯ. ಸರ್ಕಾರ ಇಂತಹ ಘಟನೆಗಳನ್ನು ತಡೆಯಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಹೊಣೆಯನ್ನು ಸರ್ಕಾರ ಹೊತ್ತುಕೊಳ್ಳಬೇಕು ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಅಶೋಕ ಬರಗುಂಡಿ ಮಾತನಾಡಿ, ಗರ್ಭಿಣಿ ಮಾನ್ಯಾ ಪಾಟೀಲ ಬರ್ಬರ ಹತ್ಯೆಯು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಮರ್ಯಾದಾ ಹತ್ಯೆ ಹೆಸರಿನಲ್ಲಿ ನಡೆಯುವ ಇಂತಹ ಸಂವಿಧಾನ ವಿರೋಧಿ ಕೃತ್ಯಗಳನ್ನು ತಡೆಯಲು ಸರ್ಕಾರ ಕೂಡಲೇ ಕಠಿಣ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.ಪ್ರಮುಖ ಬೇಡಿಕೆಗಳು: ಮಾನ್ಯಾ ಪಾಟೀಲ ಕೊಲೆ ಪ್ರಕರಣದ ಆರೋಪಿಗಳಿಗೆ ಮತ್ತು ಪ್ರಚೋದನೆ ನೀಡಿದವರಿಗೆ ವಿಳಂಬವಿಲ್ಲದೆ ಗರಿಷ್ಠ ಶಿಕ್ಷೆ ವಿಧಿಸಬೇಕು. ಮರ್ಯಾದಾ ಹತ್ಯೆಗಳನ್ನು ನಿರ್ಬಂಧಿಸಲು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕಠಿಣವಾದ ವಿಶೇಷ ಕಾನೂನು ಜಾರಿಗೆ ತರಬೇಕು. ಅಂತರ್ಜಾತೀಯ ಮತ್ತು ಅಂತರ್ಧರ್ಮೀಯ ವಿವಾಹಿತರಿಗೆ ಸರ್ಕಾರ ಪೊಲೀಸ್ ಇಲಾಖೆಯ ಮೂಲಕ ಸೂಕ್ತ ರಕ್ಷಣೆ ನೀಡಬೇಕು. ಅವರ ಸುರಕ್ಷತೆಯ ಬಗ್ಗೆ ಮಾಸಿಕ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಚರ್ಚಿಸಬೇಕು. ಶಾಲಾ ಪಠ್ಯಗಳಲ್ಲಿ ಜಾತಿ ವಿನಾಶಕಾರಿ ಮತ್ತು ಸಾಮರಸ್ಯದ ಚಿಂತನೆಗಳನ್ನು ಅಳವಡಿಸಬೇಕು. ವ್ಯಕ್ತಿ ಘನತೆ ಮತ್ತು ಬದುಕುವ ಹಕ್ಕಿನ ಕುರಿತು ಜಾಗೃತಿ ಮೂಡಿಸಬೇಕು ಎಂದು ಮನವಿ ಪತ್ರವನ್ನು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಸಹಿತ ಅನೇಕ ಮಠಾಧೀಶರು ಭಾಗವಹಿಸಿದ್ದರು. ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಪ್ರಗತಿಪರ ಸಂಘಟನೆಗಳ ಸದಸ್ಯರು ಕ್ರಾಂತಿಗೀತೆಗಳನ್ನು ಹಾಡುವ ಮೂಲಕ ಮರ್ಯಾದಾ ಹತ್ಯೆಯನ್ನು ಖಂಡಿಸಿದರು.ಮಾಜಿ ಶಾಸಕ ಡಿ.ಆರ್. ಪಾಟೀಲ, ಸಾಹಿತಿ ಬಸವರಾಜ ಸೂಳಿಭಾವಿ, ಶರೀಫ ಬೆಳೆಯಲಿ, ಮುತ್ತು ಬಿಳೆಯಲಿ, ಕಾಂಗ್ರೆಸ್ ಮುಖಂಡ ಅಶೋಕ ಮಂದಾಲಿ, ಮುತ್ತಣ್ಣ ಭರಡಿ, ನಗರಸಭೆ ಸದಸ್ಯ ಚಂದ್ರು ತಡಸದ, ಶೇಖಣ್ಣ ಕವಳಿಕಾಯಿ, ಕೆ.ಎಸ್. ಚಿಟ್ಟಿ, ವಾಸಣ್ಣ ಕುರುಡಗಿ, ಮಂಜುನಾಥ ಮುಳಗುಂದ, ಎಸ್.ಎನ್. ಬಳ್ಳಾರಿ, ವಿದ್ಯಾಧರ ದೊಡ್ಡಮನಿ, ಸಹಿತ ರಾಜಕೀಯ ಭೇದವಿಲ್ಲದೆ ಎಲ್ಲ ಪಕ್ಷಗಳ ಮುಖಂಡರು, ಮಹಿಳಾ ಸಂಘಟನೆಗಳ ಸದಸ್ಯರು ಇದ್ದರು.