ಮುಳಗುಂದ: ಸಮರ್ಪಕ ರಸಗೊಬ್ಬರ ಒದಗಿಸುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಕಂದಾಯ ಇಲಾಖೆ ಕಾರ್ಯಾಲಯದ ಎದುರಿಗೆ ಪ್ರತಿಭಟನೆ ನಡೆಸಿದರು.
ಗೋವಿನ ಜೋಳ, ಹೆಸರು, ಹತ್ತಿ, ಮೆಣಸಿನಕಾಯಿ, ಉಳ್ಳಾಗಡ್ಡೆ, ಶೇಂಗಾ ಇನ್ನಿತರ ಬೆಳೆಗಳನ್ನು ಬಿತ್ತಲಾಗಿದ್ದು, ಪಟ್ಟಣದಲ್ಲಿ ಯುರಿಯಾ, ಡಿಎಪಿ ರಸಗೊಬ್ಬರ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಳಗುಂದ ಹೊರತುಪಡಿಸಿ ಮಾಗಡಿ, ಯಳವತ್ತಿ, ಅಂತೂರ-ಬೆಂತೂರ ಗ್ರಾಮಗಳಲ್ಲಿ ಯುರಿಯಾ ಗೊಬ್ಬರ ಸಿಗುತ್ತಿದೆ. ರೈತರು ಹೆಚ್ಚಿನ ದರ ಕೊಟ್ಟು ತರುವಂತಾಗಿದೆ.ಮುಳಗುಂದ, ಚಿಂಚಲಿ, ನೀಲಗುಂದ, ಶೀತಾಲಹರಿ, ಬಸಾಪುರ ಗ್ರಾಮದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರಿನ ಬೆಳೆ ಬಿತ್ತನೆ ಮಾಡಲಾಗಿದೆ. ಪ್ರಸ್ತುತ ವರ್ಷ ಅಧಿಕ ಮಳೆಯಾಗುತ್ತಿರುವುದರಿಂದ ಬೆಳೆಗಳಿಗೆ ರಸಗೊಬ್ಬರದ ಅವಶ್ಯಕತೆ ತುಂಬಾ ಇದೆ. ಆದರೆ ಕಳೆದ ಗುರುವಾರವೇ ಬರಬೇಕಿದ್ದ ಯುರಿಯಾ ಗೊಬ್ಬರ ಶನಿವಾರದ ವರೆಗೂ ಬಂದಿಲ್ಲ. ಹೀಗಾಗಿ ಕೃಷಿ ಇಲಾಖೆಯ ಗದಗ ಜಿಲ್ಲಾ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್. ಅವರಿಗೆ ಫೋನ್ ಮಾಡಿದರೆ ಅವರು ಸ್ಪಂದಿಸಿಲ್ಲ. ಭಾನುವಾರ ಫೋನ್ ಮಾಡದಂತೆ ಹೇಳಿದ್ದಾರೆ. ಅವರು ರೈತರಿಗೆ ಅಪಮಾನ ಮಾಡಿದ್ದಾರೆ ಎಂದು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಂಟಿ ನಿರ್ದೇಶಕಿ ವಿರುದ್ಧ ಘೋಷಣೆಗಳನ್ನು ಕೂಗಿ ರಸ್ತೆ ಮೇಲೆ ಕುಳಿತು, ತಾರಾಮಣಿ ಅವರು ಪ್ರತಿಭಟನಾ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.ಈ ವೇಳೆ ಸ್ಥಳಕ್ಕಾಗಮಿಸಿದ ಉಪ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಹಾಗೂ ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರವನವರ ಅವರು, ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ರೈತರು ಜಂಟಿ ಕೃಷಿ ನಿರ್ದೇಶಕರು ರೈತರಿಗೆ ಸರಿಯಾಗಿ ಸ್ಪಂದನೆ ನೀಡದೆ ಅಪಮಾನ ಮಾಡಿದ್ದಾರೆ, ಅವರು ಇಲ್ಲಿಗೆ ಬಂದು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಆನಂತರ ಸ್ಥಳಕ್ಕೆ ಆಗಮಿಸಿದ ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರು ರೈತರ ಮನವೊಲಿಸುವಲ್ಲಿ ಸಫಲರಾದರು. ಆನಂತರ ರೈತ ಸಂಘದ ಸದಸ್ಯರು ಹಾಗೂ ರೈತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ, ದೇವರಾಜ ಸಂಗನಪೇಟಿ, ಕಿರಣ ಕುಲಕರ್ಣಿ, ಮಹಮ್ಮದಲಿ ಶೇಖ, ಬಸವರಾಜ ಕೊಟಗಿ, ಮುತ್ತಪ್ಪ ಬಳ್ಳಾರಿ, ದತ್ತಪ್ಪ ಯಳವತ್ತಿ, ನಾಗಪ್ಪ ಬಾಳಿಕಾಯಿ, ಮುತ್ತಪ್ಪ ಪಲ್ಲೇದ, ದಾವಲಸಾಬ್ ನದ್ದೀಮುಲ್ಲಾ, ಮಹಾಂತೇಶ ಕರಿಗಾರ, ಯಲ್ಲಪ್ಪ ಬಾರಕೇರ, ಮಹಾಂತೇಶ ಲಾಳಿ, ಶಂಕ್ರಯ್ಯ ಹಿರೇಮಠ, ಹಜರೇಸಾಬ್ ಸದರಬಾವಿ, ಮುತ್ತಪ್ಪ ಸುಂಕದ, ಗಂಗಪ್ಪ ವಿಜಾಪುರ, ಮಹಾಂತೇಶ ವಿಜಾಪುರ, ದೇವಪ್ಪ ಅಣ್ಣಿಗೇರಿ, ಸಂತೋಷ ಮಟ್ಟಿ ಇದ್ದರು. ಪಿಎಸ್ಐ ವಿ.ಎಸ್. ಚವಡಿ, ಎಎಸ್ಐ ಈಶ್ವರ ಸಾದರ ಹಾಗೂ ಸಿಬ್ಬಂದಿ ಬಂದೋಬಸ್ತ್ ಒದಗಿಸಿದರು.