ಅಂಬೇಡ್ಕರ್ ಸ್ವಾಭಿಮಾನಿ ಬಳಗ ಅಬಕಾರಿ ಕಚೇರಿ ಮುಂದೆ ಧರಣಿ । ಅಬಕಾರಿ ಇಲಾಖೆ ಕಚೇರಿವರೆಗೆ ಕಾಲ್ನಾಡಿಗೆ ಜಾಥಾ
ಅಂಬೇಡ್ಕರ್ ಸ್ವಾಭಿಮಾನಿ ಬಳಗದ ರಾಜ್ಯ ಅಧ್ಯಕ್ಷ ಬಿ.ಮಂಜುನಾಥ್ ಮಾತನಾಡಿ, ಕೆಜಿಎಫ್ ತಾಲೂಕು ಉಪ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಕೋಲಾರ ತಾಲೂಕು ಅಬಕಾರಿ ಉಪ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಮಾಮಣಿ ಕರ್ತವ್ಯ ಲೋಪವೆಸಗಿದ್ದು, ಹಲವರ ಸಾವಿಗೂ ಕಾರಣರಾಗಿರುತ್ತಾರೆ ಎಂದು ದೂರಿದರು.
ತಮಿಳುನಾಡಿನ ವೇಲೂರು ನಿವಾಸಿಗಳಾದ ದಲಿತ ಜನಾಂಗಕ್ಕೆ ಸೇರಿದ ನಾಗರಾಜ ಹಾಗೂ ಕಿಶೋರ್‌ರ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದು, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿರುವುದು ಕಂಡು ಬಂದಿರುತ್ತದೆ, ಇಂತಹ ಹಲವಾರು ಪ್ರಕರಣಗಳಲ್ಲಿ ಭಾಗಿ ಆಗಿರುವುದು ಸಹ ಕಂಡು ಬಂದಿದ್ದು, ಇವುಗಳ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಅಂಬೇಡ್ಕರ್ ಸ್ವಾಭಿಮಾನಿ ಬಳಗ ಒತ್ತಾಯಿಸಿದರು.ಸಂಘಟನೆ ನೀಡಿದ ದೂರಿನ ಮೇರೆಗೆ ಜಿಲ್ಲಾ ಅಬಕಾರಿ ಉಪ ಆಯುಕ್ತರು ಕೆಜಿಎಫ್ ಉಪ ಅಧೀಕ್ಷಕರಿಗೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದು, ಉಪ ಅಧೀಕ್ಷಕರು ನೀಡಿರುವ ವರದಿಯಲ್ಲಿ ಅಂದಿನ ಕೆಜಿಎಫ್ ತಾಲೂಕು ಉಪ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಮಾಮಣಿ ಪ್ರಕರಣ ದಾಖಲಿಸುವಲ್ಲಿ ಪ್ರಕ್ರಿಯೆ ಸರಿಯಾಗಿ ನಿರ್ವಹಿಸದೆ ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದೆ. ಅಬಕಾರಿ ಉಪ ಆಯುಕ್ತರು ರಮಾಮಣಿರನ್ನು ಅಮಾನತು ಮಾಡುವ ಅಧಿಕಾರ ಇದ್ದರೂ ಸಹ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಇನ್ನಷ್ಟು ಭ್ರಷ್ಟಾಚಾರ ಮಾಡಲು ಕುಮ್ಮಕ್ಕು ನೀಡಿದ್ದಾರೆಂದು ಆರೋಪಿಸಿದರು.ಅಬಕಾರಿ ಕಾನೂನು ರೀತಿ ಎಂ.ಆರ್.ಪಿ. ಶಾಪ್ ಹಾಗೂ ಡಾಬಾಗಳಲ್ಲಿ ಜನರು ಕುಡಿಯಲು ಅವಕಾಶ ಇಲ್ಲದಿದ್ದರೂ, ಎಂ.ಆರ್.ಪಿ. ಶಾಪ್ ಹಾಗೂ ಡಾಬಾಗಳೊಂದಿಗೆ ಅಬಕಾರಿ ಇಲಾಖೆಯವರು ಶಾಮೀಲಾಗಿ ಸ್ಥಳದಲ್ಲೇ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.ಕಾನೂನು ಬಾಹಿರವಾಗಿ ಕೆಲವು ಕಡೆ ಮುಂಜಾನೆ ೫ ಘಂಟೆಗೆ ಕೆಲವು ಬಾರುಗಳಲ್ಲಿ ಮಧ್ಯ ದೊರೆಯುತ್ತಿದೆ. ಇಷ್ಟೇ ಅಲ್ಲದೆ ಎಂಆರ್‌ಪಿಗಳಲ್ಲಿ ಪ್ಯಾಕೆಟ್ ಮತ್ತು ಬಾಟಲಿಗಳ ಮೇಲೆ ೨೦ ರಿಂದ ೩೦ ರು. ಜಾಸ್ತಿ ವಸೂಲಿ ಸಹ ನಡೆಯುತ್ತಿದೆ. ಇದರ ಮೂಲಕ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಹಣದ ಲೂಟಿ ಮಾಡುತ್ತಿದ್ದಾರೆ ಹಾಗೂ ಜನರನ್ನು ಕುಡುಕುರನ್ನಾಗಿಸಿ ಅವರುಗಳ ಸಾವಿಗೆ ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿದರು.ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಹಾಗೂ ರಮಾಮಣಿ ಅನೇಕ ಅಮಾಯಕರ ಮೇಲೆ ಹಾಕಿರುವ ನಕಲಿ ಕೇಸುಗಳ ಬಗ್ಗೆ ತನಿಖೆ ನಡೆಸಿ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರನ್ನು ತಕ್ಷಣ ಅಮಾನತು ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯ ನೇತೃತ್ವವನ್ನು ಅಂಬೇಡ್ಕರ್ ಸ್ವಾಭಿಮಾನಿ ಬಳಗದ ಪರಮೇಶ್, ಖಾದ್ರಿಪುರ ನಾರಾಯಣಣ್ಣ, ಉಮಾರಾಣಿ, ರಮೇಶ್, ಸುಗಟೂರ್ ಮೂರ್ತಿ, ಸುರೇಶ್, ನವೀನ್, ಲಕ್ಷ್ಮೀ ಪತಿ, ಸಿಮೆಂಟ್ ರಾಜು ಇದ್ದರು.