ಕನ್ನಡಪ್ರಭವಾರ್ತೆ ಚಿಕ್ಕಮಗಳೂರು
ತಾಲೂಕು ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಮಹಿಳಾ ಕಾರ್ಯಕರ್ತೆಯರು ಹಾಗೂ ಮುಖಂಡರು ಸಂಸದ ಪ್ರಜ್ವಲ್ ಹಾಗೂ ಹೊಳೇನರಸೀಪುರ ಶಾಸಕ ಎಚ್.ಡಿ.ರೇವಣ್ಣ ವಿರುದ್ಧ ಧಿಕ್ಕಾರ ಕೂಗುತ್ತಾ ಇಂಥವರಿಂದ ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜ್ಯನೀಯ ಸ್ಥಾನವಿದೆ. ಅದರಲ್ಲೂ ಜೆಡಿಎಸ್‍ನಲ್ಲಿ ತೆನೆಹೊತ್ತ ಮಹಿಳೆ ಗುರುತಿಗೆ ವಿರುದ್ಧವಾಗಿ ಸಂಸದರು ಹಾಗೂ ಶಾಸಕರು ನಡೆದುಕೊಳ್ಳುತ್ತಿರುವುದು ನಾಚಿಕೇಡಿನ ಸಂಗತಿ ಎಂದು ಕಿಡಿ ಕಾರಿದರು.ಅಪ್ಪ-ಮಗ ಇಬ್ಬರೂ ಮನೆ ಕೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ನೊಂದ ಮಹಿಳೆ ಪ್ರಕರಣ ದಾಖಲಿಸಿದ್ದಾರೆ. ಸಾರ್ವಜನಿಕರೆದುರು ಪ್ರಜ್ವಲ್ ಹಾಗೂ ರೇವಣ್ಣ ಹೀನಕೃತ್ಯವನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಈ ಹಿಂದಿನ ಮಹಿಳೆಯರ ಮೇಲೆ ದೌರ್ಜನ್ಯವನ್ನು ಮುಕ್ತವಾಗಿ ಹೇಳುವ ಮೂಲಕ ರಕ್ಷಣೆ ಒದಗಿಸಲು ಹೋರಾಟ ಮಾಡುತ್ತಿದ್ದಾರೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬದಿಂದಲೇ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇನ್ನೊಂದೆಡೆ ಎಚ್.ಡಿ.ಕುಮಾರಸ್ವಾಮಿ ಗ್ಯಾರಂಟಿ ಹಣದಿಂದ ಸ್ವಾಭಿಮಾನದ ಜೀವನ ನಡೆಸುತ್ತಿರುವ ಮಹಿಳೆಯರನ್ನು ಸಹಿಸಿಕೊಳ್ಳಲಾಗದೇ ಮಹಿಳೆಯರು ಹಾದಿ ತಪ್ಪುತ್ತಿದ್ದಾರೆ ಎಂದಿದ್ದಾರೆ. ಆದರೆ ನೈತಿಕವಾಗಿ ಹಾದಿ ತಪ್ಪುವ ಕೆಲಸ ಅವರ ಕುಟುಂಬದವರು ಮಾಡುತ್ತಿದ್ದಾರೆ ಎಂದು ದೂರಿದರು.
ವಯಸ್ಸಿನ ಅಂತರವನ್ನು ಗಮನಿಸದೇ ಹಾಲಿ ಸಂಸದರು ಮಹಿಳೆಯರನ್ನು ಬಳಸಿಕೊಂಡು ವಿಕೃತ ರೀತಿಯಲ್ಲಿ ಮೆರೆದಿರುವುದು ವಿಪರ್ಯಾಸ. ಅಲ್ಲದೇ ತಮ್ಮ ವೀಡಿಯೋ ತಾನೇ ಚಿತ್ರಿಸಿಕೊಂಡಿದ್ದು ಗಮನಿಸಿದರೆ ಇಂಥ ಕಾಮುಕ ಸಂಸದರಾಗಿ ಕರ್ತವ್ಯ ನಿರ್ವಹಿಸಲು ಅನರ್ಹರೆನಿಸುತ್ತದೆ. ತಮ್ಮ ತಾಯಿಯ ತವರು ಹಾಸನ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್, ನಿಡಘಟ್ಟ ಉಪಾಧ್ಯಕ್ಷೆ ಹೇಮಾವತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಶೀಲಾ, ನಗರಾಧ್ಯಕ್ಷೆ ಇಂದಿರಾ ಶಂಕರ್, ಮುಖಂಡರಾದ ಯಶೋಧ, ಮಲ್ಲಿಕಾ ಹಾಗೂ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.