ಎಸ್‌ಐಆರ್ ರದ್ದು, ಜ್ಞಾನೇಶ್‌ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Oct 10, 2026, 02:15 AM IST
ಫೋಟೋವಿವರ- (9ಎಚ್‌ಪಿಟಿ2) ಹೊಸಪೇಟೆ ನಗರದ ತಹಸೀಲ್ದಾರ್‌ ಕಚೇರಿ ಎದುರು ಶುಕ್ರವಾರ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಎಐಡಿಎಸ್ಓ, ಎಐಡಿವೈಓ, ಹಾಗೂ ಎಸ್‌ಎಫ್‌ಐ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

ಎಐಡಿಎಸ್ಓ ಜಿಲ್ಲಾ ಅಧ್ಯಕ್ಷ ರವಿ ಕಿರಣ್ ಜೆ.ಪಿ. ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ಎಸ್.ಐ.ಅರ್ ಪ್ರಕ್ರಿಯೆ ಹೆಸರಲ್ಲಿ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರನ್ನು ಕೈಬಿಡಲು ಹೊರಟಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದರು.

ಹೊಸಪೇಟೆ: ಕೇಂದ್ರ ಚುನಾವಣಾ ಆಯೋಗವು ಸಂವಿಧಾನ ವಿರೋಧಿ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಸಾಂವಿಧಾನಿಕ ನಿಯಮಗಳನ್ನು ಗಾಳಿಗೆ ತೂರಿ ಏಕಪಕ್ಷೀಯವಾಗಿ ವರ್ತಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಎಐಡಿಎಸ್ಓ, ಎಐಡಿವೈಓ, ಹಾಗೂ ಎಸ್‌ಎಫ್‌ಐ ಸಂಘಟನೆಗಳ ನೇತೃತ್ವದಲ್ಲಿ ನಗರದ ತಹಶೀಲ್ದಾರ್ ಕಚೇರಿ ಎದುರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಲಾಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷ ರವಿ ಕಿರಣ್ ಜೆ.ಪಿ. ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ಎಸ್.ಐ.ಅರ್ ಪ್ರಕ್ರಿಯೆ ಹೆಸರಲ್ಲಿ ದಲಿತರು, ಹಿಂದುಳಿದವರು ಹಾಗೂ ಅಲ್ಪ ಸಂಖ್ಯಾತರನ್ನು ಕೈಬಿಡಲು ಹೊರಟಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದರು.

ತಳಮಟ್ಟದ ಜನರನ್ನು ಮತದಾನದ ಪ್ರಕ್ರಿಯೆಯಿಂದಲೇ ಹೊರದೂಡುವ ವ್ಯವಸ್ಥಿತ ಹುನ್ನಾರವೇ ಎಸ್‌ಐಆರ್‌ ನದು, ಅಲ್ಲದೆ, ಯುವ ಮತದಾರರು ಮೊದಲ ಬಾರಿಗೆ ನೋಂದಾಯಿಸಿಕೊಳ್ಳುವ ’ಫಾರ್ಮ್ 6’ ರಲ್ಲಿ ಕಠಿಣ ನಿಯಮಗಳನ್ನು ತಂದು, ಪೋಷಕರ ದಾಖಲೆಗಳನ್ನು ಕಡ್ಡಾಯಗೊಳಿಸಿರುವುದರಿಂದ ಕೋಟ್ಯಂತರ ಯುವಜನರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಪ್ರಜಾಪ್ರಭುತ್ವದ ಮೂಲ ಸ್ತಂಭಗಳೇ ಧ್ವಂಸಗೊಳ್ಳುತ್ತಿರುವಾಗ ವಿದ್ಯಾರ್ಥಿ ಸಮುದಾಯ ಮೌನವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಶಿವರಡ್ಡಿ ಮಾತನಾಡಿ, ದೇಶದಲ್ಲಿ 13 ಕೋಟಿಗೂ ಅಧಿಕ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಮಾನವೀಯವಾಗಿ ತೆಗೆದುಹಾಕಲಾಗಿದೆ. ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಹುದ್ದೆಯಲ್ಲಿ ಮುಂದುವರಿಯಲು ಯಾವುದೇ ನೈತಿಕ ಹಕ್ಕನ್ನು ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಡಿವೈಓ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ನಾಯ್ಕ್ ಮಾತನಾಡಿ, ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಎಸ್.ಐ.ಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಎಸ್.ಐ.ಅರ್ ಪ್ರಕ್ರಿಯೆ ರದ್ದಾಗುವವರೆಗೆ ಹೋರಾಟ ಮುಂದುವರೆಯಲಿದೆ ಎಂದರು.

ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಪಂಪಾಪತಿ ಮಾತನಾಡಿ, ದೇಶದ 13 ಕೋಟಿ ಮತದಾರರ ಹಕ್ಕುಗಳನ್ನು ಕಸಿದು ಕೊಳ್ಳಲು ಹೊರಟಿರುವ ಎಸ್. ಐ.ಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಯು.ಉಮಾದೇವಿ, ಶ್ರೀನಿವಾಸ, ಸಮೀರ್, ಶಿವಮ್ಮ, ಜಾಗೃತ ನಾಯಕ ಬಳಗದ ಗೌರವಾಧ್ಯಕ್ಷ ದುರುಗಪ್ಪ ಪೂಜಾರಿ, ಹಿರಿಯ ಸದಸ್ಯ ಆಂಜನೇಯ ಸೇರಿದಂತೆ ವಿದ್ಯಾರ್ಥಿ, ಯುವಜನರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಎಸ್.ಐ.ಅರ್ ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಅಯುಕ್ತ ಜ್ಞಾನೇಶ್ ಕುಮಾರ್ ರನ್ನು ವಜಾ ಮಾಡಬೇಕು ಎಂದು ಘೋಷಣೆ ಕೂಗಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡು ಕಂಡ ಅಪ್ರತಿಮ ಶಿವಯೋಗಿಗಳಲ್ಲಿ ಕುಮಾರ ಶಿವಯೋಗಿಗಳು ಒಬ್ಬರು: ಶೇಖರಯ್ಯ ಶಾಸ್ತ್ರೀಗಳು
ಬೆಣಚಮಟ್ಟಿ ಗ್ರಾಮದ ಕೆರೆಯಲ್ಲಿ ಅಕ್ರಮ ಮರಳುಗಾರಿಕೆ