ಕನಕಪುರ: ಮೂರು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದರು.
ಕಾಡಾನೆ ದಾಳಿಯಿಂದ ನಾಶವಾದ ತೆಂಗಿನ ಸಸಿಗಳನ್ನು ತಾಲೂಕು ಕಚೇರಿ ಮುಂದಿಟ್ಟು ರೈತ ಸಂಘ ಹಾಗೂ ಪ್ರಗತಿ ಪರ ಸಂಘಟನೆ ಪದಾಧಿಕಾರಿಗಳು ತಾಲೂಕು ಆಡಳಿತ ಹಾಗು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.ರೈತ ಸಂಘದ ರಾಜ್ಯ ಸಂಚಾಲಕ ಮುನಿರಾಜು ಮಾತನಾಡಿ, ತಾಲೂಕಿನಲ್ಲಿ ಕಾಡು ಪ್ರಾಣಿಗಳ ಉಪಟಳ ಮಿತಿಮೀರುತ್ತಿದೆ. ಕಳೆದ ರಾತ್ರಿ ನಗರಕ್ಕೆ ಸಮೀಪದ ಶ್ರೀನಿವಾಸನಹಳ್ಳಿಯಲ್ಲಿ ಕಾಡಾನೆಗಳು ದಾಳಿ ಮಾಡಿ ತೆಂಗಿನ ಸಸಿಗಳನ್ನು ಮುರಿದು ನಾಶ ಮಾಡಿದ್ದರೂ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಆಡಳಿತ ನೀತಿ ಸಂಹಿತೆ, ಚುನಾವಣೆ ಕೆಲಸ ಕಾರ್ಯಗಳಲ್ಲಿ ಮುಳುಗಿ ಹೋಗಿದ್ದು ರೈತರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿ ಮಾಡಲು ರೈತರು ಹೆದರುವಂತಾಗಿದೆ. ರೈತರು ಭತ್ತ, ರಾಗಿ ಬೆಳೆಯದಿದ್ದರೆ ಅಧಿಕಾರಿಗಳು ಏನು ತಿನ್ನುತ್ತೀರಿ ಎಂದು ಪ್ರಶ್ನಿಸಿದ ರೈತರು, ಕಾಡಾನೆ ದಾಳಿಗೆ ತಾಲೂಕಿನಲ್ಲಿ ಸರಣಿ ಸಾವುಗಳಾಗುತ್ತಿದೆ. ಮೃತರಿಗೆ ಸ್ವಲ್ಪ ಪರಿಹಾರ ಕೊಟ್ಟು ಸರ್ಕಾರ ಕೈ ತೊಳೆದುಕೊಳ್ಳುತ್ತಿದೆ. ಮುಂದೆ ಅವರ ಕುಟುಂಬದ ಗತಿ ಏನು ಎಂದು ಪ್ರಶ್ನಿಸಿದರು.ತಾಲೂಕಿನ ಹೆಚ್ಚು ಭೂ ಭಾಗ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ. ರಾಮನಗರ, ಚಾಮರಾಜನಗರ ಮತ್ತು ಬೆಂಗಳೂರು ವ್ಯಾಪ್ತಿಯ ಬನ್ನೇರುಘಟ್ಟ ಅರಣ್ಯ ಸೇರಿದಂತೆ ಮೂರು ಜಿಲ್ಲೆಗೆ ಅರಣ್ಯ ವ್ಯಾಪ್ತಿ ಸೇರಿದ್ದು ಕಾಡಾನೆಗಳ ನಿಯಂತ್ರಣ ನಮ್ಮದಲ್ಲ, ನಮ್ಮದಲ್ಲ ಎಂದು ಒಬ್ಬರ ಮೇಲೆ ಮತ್ತೊಬ್ಬರು ಜವಾಬ್ದಾರಿ ಹಾಕಿ ಕರ್ತವ್ಯ ದಿಂದ ಜಾರಿಕೊಳ್ಳುತ್ತಿದ್ದಾರೆ. ರೈತರು ಬೆಳೆ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿಪರ ಸಂಘಟನೆ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಕಳೆದ ವರ್ಷ ಮಳೆ ಇಲ್ಲದೆ ಬರಗಾಲ ಆವರಿಸಿತ್ತು. ಈ ವರ್ಷ ಮುಂಗಾರು ಮಳೆ ಪ್ರಾರಂಭವಾಗಿದ್ದು ರೈತರು ಕೃಷಿ ಚಟುವಟಿಕೆ ಮಾಡಲು ಕಾಡುಪ್ರಾಣಿಗಳ ಭಯದಿಂದ ಹಿಂಜರಿಯುತ್ತಿದ್ದಾರೆ. ರೈತರ ಸಮಸ್ಯೆ ಕೇಳಬೇಕಾದ ಶಾಸಕರು ಇದ್ದು ಇಲ್ಲದಂತಾಗಿದ್ದಾರೆ. ಅರಣ್ಯ ಇಲಾಖೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡುವ ಕೆಲಸ ಮಾಡುತ್ತಿಲ್ಲ, ಜಿಲ್ಲಾಧಿಕಾರಿಗಳು ರೈತರ ಸಮಸ್ಯೆಗಳನ್ನು ಕೇಳುವುದಿಲ್ಲ. ತಾಲೂಕು ಆಡಳಿತ ಚುನಾವಣಾ ಕರ್ತವ್ಯದಲ್ಲಿ ಮುಳುಗಿಹೋಗಿದೆ ಹಾಗಾದರೆ ರೈತರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಕೂಡಲೇ ತಾಲೂಕು ಆಡಳಿತ ಸಂಬಂಧಪಟ್ಟ ಮೂರು ಜಿಲ್ಲೆಯ ಅರಣ್ಯ ಇಲಾಖೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಸಭೆ ಕರೆದು ರೈತರ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆ ಸದಸ್ಯ ಕೆ.ಆರ್. ಸುರೇಶ್, ರೈತ ಸಂಘದ ತಾಲೂಕು ಅಧ್ಯಕ್ಷ ಕುಮಾರ್, ಹಾರೋಹಳ್ಳಿ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ಪಡುವಣಗೆರೆ ಕುಮಾರ್, ಮುಖಂಡ ರಂಗಪ್ಪ, ಪಂಚ ಮುಖಿ, ಕೆಂಪಣ್ಣ, ಶಿವರಾಜು, ಮುನಿಸಿದ್ದೇಗೌಡ, ಉಮೇಶ್,ಪುಟ್ಟಮಾದೇಗೌಡ,ರಾಜು, ಬೈರೇಗೌಡ, ಮರಿಲಿಂಗೇಗೌಡ, ಸುರೇಶ್,ಶಿವಲಿಂಗೇಗೌಡ, ವಿವಿಧ ಸಂಘಟನೆ ಪದಾಧಿಕಾರಿಗಳು. ರೈತರು ಉಪಸ್ಥಿತರಿದ್ದರು.ಕೋಟ್...........
ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಆದಷ್ಟು ಬೇಗ ಸಭೆಯ ದಿನಾಂಕ ನಿಗದಿಪಡಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು.- ಸ್ಮಿತಾರಾಮು, ತಹಸೀಲ್ದಾರ್, ಕನಕಪುರ ಕೆ ಕೆ ಪಿ ಸುದ್ದಿ 3(1):
ಕನಕಪುರ ತಾಲೂಕು ಕಚೇರಿ ಮುಂದೆ ಕಾಡಾನೆ ದಾಳಿಗೆ ನೆಲಕಚ್ಚಿದ ತೆಂಗಿನ ಗಿಡಗಳಿಟ್ಟು ರೈತ ಸಂಘ ಹಾಗೂ ಪ್ರಗತಿ ಪರ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.