ಶಿರಹಟ್ಟಿ: ವಿದ್ಯಾರ್ಥಿನಿಯರ ಶೈಕ್ಷಣಿಕ ಹಿತ ಕಾಪಾಡಲು ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯವನ್ನು ಕೂಡಲೇ ಪ್ರಾರಂಭಿಸಿ, ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿನಿಯರಿಗೆ ಶಿಕ್ಷಣ ಮುಂದುವರಿಸಲು ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಸಂಘಟನೆ ವತಿಯಿಂದ ಸೋಮವಾರ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಸಂಘಟನೆಯ ನಗರ ಘಟಕದ ಕಾರ್ಯದರ್ಶಿ ಪರಶುರಾಮ ಕಳ್ಳಿಮನಿ, ಸೋಮಶೇಖರ ದೇಸಾಯಪಟ್ಟಿ ಮಾತನಾಡಿ, ಶಿಕ್ಷಣಕ್ಕೆ ಅಗತ್ಯವಾದ ಮೂಲ ಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೆಟ್ರಿಕ್ ನಂತರ ಉನ್ನತ ಶಿಕ್ಷಣ ಪಡೆಯಲು ದೂರದ ಊರುಗಳಿಂದ ಬರುವ ವಿದ್ಯಾರ್ಥಿನಿಯರಿಗೆ ಸುರಕ್ಷಿತ ವಸತಿ ಸೌಲಭ್ಯ ಅತ್ಯಂತ ಅಗತ್ಯವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.ತಾಲೂಕಿನಲ್ಲಿ ೩ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿದ್ದು, ಇದರಲ್ಲಿ ೧೫೦೦ ವಿದ್ಯಾರ್ಥಿನಿಯರು ಗ್ರಾಮೀಣ ಭಾಗದಿಂದ ಬರುತ್ತಾರೆ. ಗ್ರಾಮೀಣ ಪ್ರದೇಶದ ಅನೇಕ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿನಿಯರು ಆರ್ಥಿಕ ಸಮಸ್ಯೆಯಿಂದಾಗಿ ದೂರದ ಪಟ್ಟಣಗಳಿಗೆ ತೆರಳಿ ಶಿಕ್ಷಣ ಪಡೆಯಲು ಸಾಧ್ಯವಾಗದೆ ವಿದ್ಯಾಭ್ಯಾಸ ಮೊಟಕುಗೊಳಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರ್ಕಾರದ ವತಿಯಿಂದ ವಸತಿನಿಲಯ ಆರಂಭವಾದರೆ ಇಂತಹ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹರಿಪೂರ ಗ್ರಾಮದ ಪದವಿ ಕಾಲೇಜು ಹಿಂಬದಿಯಲ್ಲಿ ₹೯೯ ಲಕ್ಷ ವೆಚ್ಚದಲ್ಲಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗಾಗಿ ನಿರ್ಮಾಣಗೊಂಡ ವಸತಿನಿಲಯ ಕಟ್ಟಡ ಸುಮಾರು ವರ್ಷಗಳ ಹಿಂದೆಯೇ ಕಾಮಗಾರಿ ಪೂರ್ಣಗೊಂಡಿದ್ದು, ಕಟ್ಟಡ ಉದ್ಘಾಟನೆಯಾಗದೇ ಪಾಳು ಬಿದ್ದಿದ್ದು ತುರ್ತು ಪ್ರಾರಂಭಿಸಬೇಕು.ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಕೋಟಿಗಟ್ಟಲೆ ಹಣ ವ್ಯಯಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದ್ದು, ಕಟ್ಟಡ ಕಾಮಗಾರಿ ಮುಗಿದು ಸುಮಾರು ವರ್ಷಗಳೇ ಕಳೆದರೂ ಬಳಕೆಗೆ ಬರದೇ ಇರುವುದರಿಂದ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಓದಿಗೆ ಹಿನ್ನಡೆಯಾಗುತ್ತಿದೆ ಎಂದರು.ನಂತರ ತಹಸೀಲ್ದಾರ್ ಕೆ. ರಾಘವೇಂದ್ರ ರಾವು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ವಸತಿನಿಲಯ ಪ್ರಾರಂಭಕ್ಕೆ ಕ್ರಮ ವಹಿಸುವ ಜತೆಗೆ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡುವ ಭರವಸೆ ನೀಡಿದರು. ಸಿಪಿಐ ಬಿ.ವಿ. ನ್ಯಾಮಗೌಡ ಇದ್ದರು.