ಕನ್ನಡಪ್ರಭ ವಾರ್ತೆ ಕನಕಪುರ
ಇಲ್ಲಿನ ಬಹುಜನ ಜಾಗೃತ ವೇದಿಕೆಯ ವತಿಯಿಂದ ನಗರದ ಬ್ಯಾಂಕ್ ಆಫ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಗಳಿಗೆ ಭೇಟಿ ನೀಡಿದ ಕನ್ನಡಪರ ಕಾರ್ಯಕರ್ತರು ಗ್ರಾಹಕರಿಗೆ ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ಚಲನ್‌ಗಳನ್ನು ನೀಡುತ್ತಿರುವದನ್ನು ಖಂಡಿಸಿ ಪ್ರತಿಭಟಸಿ ಕನ್ನಡದಲ್ಲಿ ಸೇವೆ ನೀಡುವಂತೆ ಆಗ್ರಹ ಮಾಡಿದರು.ಬಹುಜನ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನೀಲಿ ರಮೇಶ್ ಬ್ಯಾಂಕ್ ಆಫ್ ಬರೋಡಾ ನಗರ ಶಾಖೆಯ ವ್ಯವಸ್ಥಾಪಕ ರೊಂದಿಗೆ ಮಾತನಾಡಿ, ಬ್ಯಾಂಕಿನ ಯಾವುದೇ ಕೌಂಟರ್‌ಗಳಲ್ಲಿ ಕನ್ನಡದ ಚಲನ್‌ಗಳು ಇಲ್ಲದಿರುವ ಬಗ್ಗೆ ಗಮನ ಸೆಳೆದರು. ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಚಾನೆಲ್‌ಗಳನ್ನು ಎಲ್ಲಾ ಕಡೆ ನೀಡಲಾಗುತ್ತಿದ್ದು, ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಕೇಂದ್ರ ಹಣಕಾಸು ಸಚಿವರ ಸೂಚನೆಯನ್ನು ನಿರ್ಲಕ್ಷಿಸಿದಂತಾಗಿದೆ. ಅಲ್ಲದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯದ ಬ್ಯಾಂಕ್, ಅಂಚೆ ಕಚೇರಿ, ವಿಮಾ ಕಚೇರಿಗಳಲ್ಲಿ ಕನ್ನಡದಲ್ಲಿ ಸೇವೆ ನೀಡುವ ಬಗ್ಗೆ ನೀಡಿರುವ ನಿರ್ದೇಶನ ಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆಗ್ರಹಿಸಿದರು.ಕನ್ನಡ ಸಾಹಿತಿ ಪಾರ್ವತೀಶ ಬಿಳಿದಾಳೆ ಮಾತನಾಡಿ, ಕನ್ನಡ ನಾಡಿನಲ್ಲಿ ತಮ್ಮ ಶಾಖೆಗಳನ್ನು ತೆರೆದು ಕನ್ನಡಿಗರಿಂದ ಸಾವಿರಾರು ಕೋಟಿ ವಹಿವಾಟು ನಡೆಸುವ ಬ್ಯಾಂಕ್ ಗಳು ಕನಿಷ್ಠ ಸಾಮಾನ್ಯ ಜ್ಞಾನವನ್ನು ಇಟ್ಟುಕೊಂಡು ಕೆಲಸವನ್ನು
ಮಾಡಬೇಕಾಗಿದೆ, ಇಂದು ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಶಾಖೆಗಳಿಗೆ ಹೆಚ್ಚಾಗಿ ರೈತರು, ಮಹಿಳೆಯರು ಆಗಮಿಸಲಿದ್ದು ಈ ವೇಳೆ ಹಣ ತುಂಬಲು ಹಾಗೂ ತೆಗೆಯಲು ಚಲನ್ ತುಂಬಲು ಪರದಾಟುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬರೋಡಾ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ವ್ಯವಸ್ಥಾಪಕರು ಈಗ ಆಗಿರುವ ಲೋಪಗಳ ಬಗ್ಗೆ ಗಮನಹರಿಸುವುದರ ಜೊತೆಗೆ ನ್ಯೂನತೆಗಳನ್ನು ಸರಿಪಡಿಸಿಕೊಂಡು ಕನ್ನಡದಲ್ಲಿ ಸೇವೆ ನೀಡುವ ಬಗ್ಗೆ ಕನ್ನಡದಲ್ಲಿ ಚಲನ್‌ಗಳನ್ನು ಒದಗಿಸುವ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.ಬಹುಜನ ಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಅಭಿವೃದ್ಧಿ ವೆಂಕಟೇಶ್, ಖಜಾಂಚಿ ಬರಡನಹಳ್ಳಿ ಹರೀಶ್, ಹನುಮಯ್ಯ, ಶಶಿಕುಮಾರ್, ಹನುಮಂತರಾಜು, ಬಿಳಿದಾಳೆ ಕುಮಾರಸ್ವಾಮಿ, ಮುಂತಾದವರು ಭಾಗಿಯಾಗಿದ್ದರು.ಕೆ ಕೆ ಪಿ ಸುದ್ದಿ 02: ಕನಕಪುರದಲ್ಲಿ ಬ್ಯಾಂಕ್‌ಗಳ ಕನ್ನಡ ವಿರೋಧಿ ದೋರಣೆ ಖಂಡಿಸಿ ಬಹುಜನ ಜಾಗೃತಿ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.