ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲೆಯ ಯಲಬುರ್ಗಾ ತಾಲೂಕಿನ ಲಕಮನಗುಳೆ ಗ್ರಾಮದ ಫಲವತ್ತಾದ ಜಮೀನುಗಳಲ್ಲಿ ಪವರ್ ಗ್ರಿಡ್ ಸ್ಟೇಷನ್‌ಗೆ ಭೂಸ್ವಾಧೀನ ಮಾಡಿಕೊಳ್ಳುವುದನ್ನು ಕೈ ಬಿಡಲು ಒತ್ತಾಯಿಸಿ ಕೊಪ್ಪಳ ಜಿಲ್ಲಾ ಆಡಳಿತ ಭವನದ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಹಾಗೂ ಭೂ ಸ್ವಾಧೀನಾಧಿಕಾರಿಗಳಿಗೆ ಸಹಾಯಕ ಆಯುಕ್ತರ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಿದರು.ಫಲವತ್ತಾದ ಜಮೀನುಗಳಲ್ಲಿ ಪವರ್ ಗ್ರಿಡ್ ಸ್ಟೇಷನ್ ಗಾಗಿ ಭೂ ಸ್ವಾಧೀನಕ್ಕೆ ಕ್ರಮ ವಹಿಸಿದ್ದೀರಿ. ಪವರ್ ಗ್ರಿಡ್ ಸ್ಟೇಷನ್ ನಿರ್ಮಾಣವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದಕ್ಕಾಗಿ ಅತ್ಯಂತ ಫಲವತ್ತಾದ ಬಹುವಾರ್ಷಿಕ ಬೆಳೆಗಳು ಸೇರಿ, ವರ್ಷಕ್ಕೆ ಕನಿಷ್ಠ ಎರಡು ವಾಣಿಜ್ಯ ಬೆಳೆಗಳನ್ನು ಪಂಪ್ ಸೆಟ್ ನೀರಾವರಿ ಜಮೀನುಗಳ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿರುವುದನ್ನು ನಾವು ವಿರೋಧಿಸುತ್ತೇವೆ. ಆಯ್ಕೆ ಮಾಡಿಕೊಂಡ ಎಲ್ಲ ಜಮೀನುಗಳು ಅತ್ಯಂತ ಫಲವತ್ತಾದ ನೀರಾವರಿ ಜಮೀನುಗಳಾಗಿವೆ. ಈ ಎಲ್ಲ ಜಮೀನುಗಳನ್ನು ರೈತ ಕುಟುಂಬಗಳು ಹಲವು ತಲೆಮಾರುಗಳಿಂದ ಶ್ರಮಪಟ್ಟು ಬಂಡವಾಳ ತೊಡಗಿಸಿ ಫಲವತ್ತಾದ ಜಮೀನುಗಳಾಗಿ ಬದಲಾಯಿಸಿದ್ದಾರೆ. ಇವುಗಳಲ್ಲಿ ಗ್ರಾಮಗಳ ಕೃಷಿ ಕೂಲಿಕಾರರ ಶ್ರಮವು ಅಡಗಿದೆ. ಈ ಫಲವತ್ತಾದ ಜಮೀನುಗಳು ರೈತ ಕುಟುಂಬಗಳಿಗೆ ಮಾತ್ರವಲ್ಲ ಸುತ್ತ ಮುತ್ತಲಿನ ಗ್ರಾಮಗಳ ಕೂಲಿಕಾರರ ವರ್ಷವಿಡೀ ಕೆಲಸ ಒದಗಿಸುವ ಮೂಲಕ ಜೀವನಾಧಾರ ಆಗಿವೆ.
ಅದು ಮಾತ್ರವೇ ಅಲ್ಲ, ಭೂ ಸ್ವಾಧೀನ ಕಾಯ್ದೆ -2013 ಕೂಡಾ ಫಲವತ್ತಾದ ಜಮೀನುಗಳ ಸ್ವಾಧೀನ ಮಾಡಬಾರದು ಎಂದು ಹೇಳುತ್ತದೆ. ಈ ಭೂ ಸ್ವಾಧೀನವು ಕಾಯ್ದೆಯ ವಿರುದ್ಧವಾಗಿದೆ. ಇದಕ್ಕೆ ಕೃಷಿಯಲ್ಲಿ ತೊಡಗಿದ ಯಾವುದೇ ರೈತ ಕುಟುಂಬದ ಒಪ್ಪಿಗೆ ಇರುವುದಿಲ್ಲ. ಹೀಗಾಗಿ ಫಲವತ್ತಾದ ಈ ಜಮೀನುಗಳ ಸ್ವಾಧೀನ ಪ್ರಕ್ರಿಯೆಯನ್ನು ಈ ಕೂಡಲೇ ನಿಲ್ಲಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಜಿ.ನಾಗರಾಜ್, ರಾಜ್ಯ ಉಪಾಧ್ಯಕ್ಷ ಯು. ಬಸವರಾಜ್, ಜಿಲ್ಲಾ ಮುಖಂಡರಾದ ದೊಡ್ಡನಗೌಡ, ಯಲಬುರ್ಗಾ ತಾಲೂಕಿನ ಮುಖಂಡರಾದ ಅಬ್ದುಲ್ ರಜಾಕ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಖಾಸಿಮ್ ಸರದಾರ್, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ರೈತ ಮುಖಂಡರಾದ ಮಹೇಶ್ ಕುಮಾರ್ ಹಿರೇಮಠ, ಯಲ್ಲನಗೌಡ ಹಾಳಕೇರಿ, ಶಾಂತಯ್ಯ ಹಿರೇಮಠ, ಗವಿಸಿದ್ದಯ್ಯ ಹಿರೇಮಠ, ದೇವೇಂದ್ರ ಗೌಡ ಮಾಲಿಪಾಟೀಲ್, ಅಡಿವೆಪ್ಪ ವದ್ನಾಳ, ಅಡಿವೆಮ್ಮ ಹರಿಜನ್, ಸುಶೀಲಮ್ಮ ಬುಡಶೆಟ್ನಾಳ. ಹಂಪಮ್ಮ ಮಾಲಿಪಾಟೀಲ್ ಮುಂತಾದವರಿದ್ದರು.