ಕಟ್ಟಡ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork | Updated : Jul 16 2024, 12:33 AM IST

ಸಾರಾಂಶ

ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆಗಳ ಪರಿಹಾರ ಹಾಗೂ ಹಲವು ಬೇಡಿಕೆಗಳಿಗಾಗಿ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿಯ ಜಿಲ್ಲಾ ಘಟಕದಿಂದ ಮನವಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆಗಳ ಪರಿಹಾರ ಹಾಗೂ ಹಲವು ಬೇಡಿಕೆಗಳಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ (ಜೆಸಿಟಿಯು) ಜಿಲ್ಲಾ ಘಟಕದಿಂದ ನಗರದ ಜಿಲ್ಲಾ ಆಡಳಿತ ಭವನದ ಎದುರಿಗೆ ಸೋಮವಾರ ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾ ಕಾರ್ಮಿಕ ಅಧಿಕಾರಿ ಮೂಲಕ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ಇದುವರೆಗೂ ಸಿಗುತ್ತಿದ್ದ ಸೌಲಭ್ಯಗಳು ಈಗ ಸಿಗುತ್ತಿಲ್ಲ. ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಜೊತೆಗೂ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಕಳೆದ 12 ತಿಂಗಳಲ್ಲಿ 12 ಹೋರಾಟಗಳು ನಡೆದಿವೆ. ಶೈಕ್ಷಣಿಕ ಸಹಾಯಧನ, ಮದುವೆ ಸಹಾಯಧನ, ವೈದ್ಯಕೀಯ ಪರಿಹಾರಕ್ಕೆ ಸಲ್ಲಿಕೆಯಾದ ಸಾವಿರಾರು ಅರ್ಜಿಗಳು ಕಳೆದ ಒಂದು ವರ್ಷದಿಂದ ಕೊಳೆಯುತ್ತಿವೆ. ಪಿಂಚಣಿದಾರರ ಪಿಂಚಣಿ ನಿಂತುಹೋಗಿದೆ. ಹೀಗಾಗಿ ಅವರ ಜೀವನ ಕಷ್ಟಕ್ಕೆ ಸಿಲುಕಿದೆ. ಶೈಕ್ಷಣಿಕ ಸಹಾಯಧನ ಬಿಡುಗಡೆಗಾಗಿ ನಾವು ಕೊನೆಗೆ ಹೈಕೋರ್ಟ್ ಮೆಟ್ಟಿಲೇರಬೇಕಾಯಿತು. ಮತ್ತೊಂದೆಡೆ ಕಾರ್ಮಿಕರು ಕೇಳದಿದ್ದರೂ ಲ್ಯಾಪ್‌ಟಾಪ್, ವೈದ್ಯಕೀಯ ತಪಾಸಣೆ, ಪೌಷ್ಟಿಕಾಂಶ (ಆಯುರ್ವೇದಿಕ್) ಕಿಟ್ ಗಳನ್ನು ಖರೀದಿಸಿದ್ದೀರಿ, ಇದಕ್ಕಾಗಿ ಮಂಡಳಿಯ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದೀರಿ. ಇದರಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಕಲ್ಯಾಣ ಮಂಡಳಿಯನ್ನು ಪುನರಚಿಸಿ ಕೇಂದ್ರ ಕಾರ್ಮಿಕ ಸಂಯೋಜಿತ ಸಂಘಗಳಿಗೆ ಅದರಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಮಹಿಳೆ ಪ್ರಾತಿನಿಧ್ಯಕ್ಕೆ ಕಾರ್ಮಿಕ ಸಂಘದ ಪ್ರತಿನಿಧಿಗೆ ಮಾತ್ರವೇ ಅವಕಾಶ ಇರಬೇಕು. ಕಾರ್ಮಿಕ ಸಂಘಟನೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುವ ಪ್ರಯತ್ನಗಳನ್ನು ಮಂಡಳಿಯ ಮೇಲ್ಮಟ್ಟದಿಂದ ಕೆಳ ಹಂತದವರೆಗೂ ಅಧಿಕಾರಿಗಳು ನಡೆಸುತ್ತಿದ್ದಾರೆ. ಇದು ತೀವ್ರ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ಕಡೆ ಕಾರ್ಮಿಕ ನಿರೀಕ್ಷಕರು ತಮ್ಮ ಭ್ರಷ್ಟಾಚಾರಕ್ಕೆ ಅನುಕೂಲವಾಗುವ ಕೆಲ ಸ್ಥಳೀಯ ಮುಖಂಡರನ್ನು ಸೃಷ್ಟಿಸಿ ಹೊಸ ಸಂಘಗಳನ್ನು ನೋಂದಣಿ ಮಾಡಿಸುತ್ತಿದ್ದಾರೆ. ಇವರ ಮೂಲಕ ಬೋಗಸ್ ನೋಂದಣಿ ಮಾಡಿಸಿ ಮಂಡಳಿ ಸೌಲಭ್ಯಗಳ ಕೊಡಿಸಿ ಮಂಡಳಿ ನಿಧಿಗೆ ಕನ್ನ ಹಾಕುತ್ತಿದ್ದಾರೆ. ಅದಕ್ಕೆ ಕೂಡಲೇ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು ಸಂಯೋಜಿತ) ಜಿಲ್ಲಾ ಅಧ್ಯಕ್ಷ ಖಾಸೀಮ್ ಸಾಬ್ ಸರ್ದಾರ್, ಜಿಲ್ಲಾ ಉಪಾಧ್ಯಕ್ಷ ಇಸ್ಮಾಯಿಲ್ ಇಟಗಿ, ತಾಲೂಕಾ ಅಧ್ಯಕ್ಷ ಹನುಮೇಶ್ ಭೋವಿ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ) ಜಿಲ್ಲಾ ಅಧ್ಯಕ್ಷ ತುಕಾರಾಮ ಬಿ. ಪಾತ್ರೋಟಿ, ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎ. ಗಫಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಲ್. ತಿಮ್ಮಣ್ಣ, ಜಿಲ್ಲಾ ಖಜಾಂಚಿ ಅಡಿವೆಪ್ಪ ಚಲವಾದಿ, ಜಿಲ್ಲಾ ಉಪಾಧ್ಯಕ್ಷ ಜಾಫರ್ ಕುರಿ, ಜಿಲ್ಲಾ ಸಹ ಕಾರ್ಯದರ್ಶಿ ಮೌಲಾ ಸಾಬ್ ಹಣಗಿ, ಶಿವಲಿಂಗಯ್ಯ ಲಕಮಾಪುರ, ಶಂಸುದ್ದೀನ್ ಮಕಾಂದಾರ್, ರಾಜಾ ಸಾಬ್ ತಹಶೀಲ್ದಾರ್, ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ಜಿಲ್ಲಾ ಸಂಚಾಲಕ ಶರಣು ಗಡ್ಡಿ, ಮುದುಕಪ್ಪ ಭಾಗ್ಯನಗರ, ರಾಮಲಿಂಗ ಶಾಸ್ತ್ರಿ, ಸಂಜಯ್ ದಾಸ್ ಕೌಜಗೇರಿ, ಮೈಲಾರಪ್ಪ, ಶೇಖ್ ಸಾಬ್, ಯಮನೂರಪ್ಪ, ಮೆಹಬೂಬ್, ನಾಗರಾಜ, ಗವಿಸಿದ್ದಪ್ಪ ಇತರರಿದ್ದರು.

Share this article