ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork |  
Published : Sep 11, 2025, 12:03 AM ISTUpdated : Sep 11, 2025, 12:04 AM IST
ಹೂವಿನಹಡಗಲಿಯ ಬೀರಬ್ಬಿ ಭಗತ್‌ಸಿಂಗ್‌ ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ತಾಲೂಕಿನ ಬೀರಬ್ಬಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್‌ ಸೌಕರ್ಯ, ಸರ್ಕಾರಿ ಶಾಲೆಗೆ ಶಿಕ್ಷಕರ ನಿಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಭಗತ್‌ಸಿಂಗ್‌ ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಬೀರಬ್ಬಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವಂತೆ ಆಗ್ರಹಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನ ಬೀರಬ್ಬಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್‌ ಸೌಕರ್ಯ, ಸರ್ಕಾರಿ ಶಾಲೆಗೆ ಶಿಕ್ಷಕರ ನಿಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಭಗತ್‌ಸಿಂಗ್‌ ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಇಲ್ಲಿನ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ವೇದಿಕೆ ಸಂಚಾಲಕ ಜಿ.ಮಲ್ಲಿಕಾರ್ಜುನ, ಬೀರಬ್ಬಿ ಗ್ರಾಮದಲ್ಲಿ ಮೈಲಾರ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಿದೆ. ಇದರಿಂದ ಗ್ರಾಮಸ್ಥರು ಮತ್ತು ಬದುಕು ಅರಿಸಿ ಬರುವ ನೂರಾರು ಕೂಲಿ ಕಾರ್ಮಿಕರ ಮಕ್ಕಳು ಟೆಂಟ್‌ನಲ್ಲಿ ಜೀವನ ಮಾಡುತ್ತಾರೆ, ಅವರ ಆರೋಗ್ಯ ಹದಗೆಟ್ಟರೆ ಚಿಕಿತ್ಸೆಗಾಗಿ 15 ಕಿಮೀ ದೂರದ ಮಾಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ಪರಿಸ್ಥಿತಿ ಇದೆ. ಬೀರಬ್ಬಿ ಗ್ರಾಪಂ ಕೇಂದ್ರ ವ್ಯಾಪ್ತಿಯಲ್ಲಿ 8 ಗ್ರಾಮಗಳು ಒಳಪಟ್ಟಿವೆ. ಆದರೆ ಅಗತ್ಯ ಸೌಲಭ್ಯಕ್ಕಾಗಿ ಜನರ ಪರದಾಟ ಮಾತ್ರ ತಪ್ಪಿಲ್ಲ. ಆದ್ದರಿಂದ ಕೂಡಲೇ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.

ಈ ಗ್ರಾಮದಲ್ಲಿ ಎಎನ್‌ಎಂ ನರ್ಸ್‌ ಕೇಂದ್ರವನ್ನಾದರೂ ಮಂಜೂರು ಮಾಡಿ ಎಂದು ದಶಕದಿಂದ ಬೇಡಿಕೆ ಇಟ್ಟರೂ ಇನ್ನು ಈಡೇರಿಲ್ಲ, ಗ್ರಾಮದಲ್ಲೆ ಮೈಲಾರ ಸಕ್ಕರೆ ಕಾರ್ಖಾನೆ ಇದೆ, ಇದರಿಂದ ಜನಾರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಜನ ಆರೋಗ್ಯ ಉಪಚಾರಕ್ಕಾಗಿ ಪರದಾಡುವ ಪರಿಸ್ಥಿತಿ ಬಂದಿದೆ ಎಂದರು.

ಮೈಲಾರ ಸಕ್ಕರೆ ಕಾರ್ಖಾನೆಗೆ ನೂರಾರು ಕಬ್ಬಿನ ಲಾರಿಗಳು ಬರುತ್ತಿವೆ, ಇಲ್ಲಿ ರಸ್ತೆ ಸಂಚಾರಕ್ಕೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಇದರಿಂದ ಶಾಲಾ ಕಾಲೇಜುಗಳಿಗೆ ಹೋಗಲು ಬಸ್ಸುಗಳನ್ನು ನಿಲುಗಡೆ ಮಾಡುತ್ತಿಲ್ಲ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಕೂಡಲೇ ಸಾರಿಗೆ ಘಟಕ ಅಧಿಕಾರಿಗಳು ಸೂಕ್ತ ಬಸ್‌ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದರು.

ಬೀರಬ್ಬಿಯಲ್ಲಿರುವ ಸರ್ಕಾರಿ ಶಾಲೆಗೆ ಮುಖ್ಯ ಶಿಕ್ಷಕರೇ ಇಲ್ಲ, ಸಾಕಷ್ಟು ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡುತ್ತಿಲ್ಲ, ಶಾಲೆಯಲ್ಲಿ ಶಿಕ್ಷಕರು ಇಲ್ಲದ ಕಾರಣ ಪಾಲಕರು, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಿಸುತ್ತಿದ್ದಾರೆ. ಹೀಗೆ ಹತ್ತಾರು ಸಮಸ್ಯೆಗಳಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ, ನಾಗರಿಕ ಪ್ರಜಾತಾಂತ್ರಿಕ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಕೂಡಲೇ ಬೇಡಿಕೆ ಈಡೇರಿಸದಿದ್ದರೇ ಉಗ್ರ ಹೋರಾಟ ಮಾಡಲು ಮುಂದಾಗುತ್ತೇವೆಂದು ಎಚ್ಚರಿಕೆ ನೀಡಿದರು.

ವೇದಿಕೆಯ ಸೊಪ್ಪಿನ ಉಮೇಶ, ಡಿ.ಪಕ್ಕೀರಪ್ಪ, ಚಂದ್ರು ಕೊರಡೂರು ಮಾತನಾಡಿದರು.

ರವಿಕುಮಾರ, ಗುರುಸ್ವಾಮಿ, ದಾಂಗೀರ ಬಾಷ, ದೇವರಾಜ, ಚಿದಾನಂದಯ್ಯ, ಷಣ್ಮುಖಪ್ಪ ಸೇರಿದಂತೆ ಇತರರು ಕಂದಾಯ ಇಲಾಖೆಯ ಶಿರಸ್ತೆದಾರ ಸಲೀಂಗೆ ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಮುಖ್ಯ ರಸ್ತೆ ಮೂಲಕ ಎಲೆಪೇಟೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ನ್ಯಾಯಯುತ ಬೇಡಿಕೆ ಈಡೇರಿಸಬೇಕೆಂದು ಘೋಷಣೆ ಕೂಗಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?