ಮುಖ್ಯರಸ್ತೆ ಅಗಲೀಕರಣ ಸಮಿತಿ ಸದಸ್ಯರಿಂದ ತಹಸೀಲ್ದಾರಗೆ ಮನವಿ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಮುಖ್ಯರಸ್ತೆ ಅಗಲೀಕರಣ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ನಿತ್ಯವೂ ಲಕ್ಷಾಂತರ ಚೀಲಗಳು ದೂರದ ಊರುಗಳಿಂದ ವಾಹನಗಳಲ್ಲಿ ಮಾರುಕಟ್ಟೆಗೆ ಆಗಮಿಸುತ್ತಿವೆ. ಆದರೆ ಮಾರುಕಟ್ಟೆಗೆ ಬಂದಂತಹ ರೈತರ ಗೋಳಂತೂ ಕೇಳುವವರಿಲ್ಲ. ವಾಹನ ದಟ್ಟಣೆಯಿಂದ ನಿಗದಿತ ಸಮಯಕ್ಕೆ ಚೀಲಗಳು ಮಾರುಕಟ್ಟೆ ತಲುಪಲು ಸಾಧ್ಯವಾಗುತ್ತಿಲ್ಲ, ರೈತರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪಟ್ಟಣದಲ್ಲಿನ ಮುಖ್ಯರಸ್ತೆ ಅಗಲೀಕರಣ ಮಾಡುವಂತೆ ಬ್ಯಾಡಗಿ ಬಂದ್ ಸೇರಿದಂತೆ ಕತ್ತೆ ಮೆರವಣಿಗೆ, ಆಮರಣಾಂತ ಉಪವಾಸ ಸತ್ಯಾಗ್ರಹ ಹೀಗೆ ಕಳೆದ 14 ವರ್ಷದಿಂದ ಹೋರಾಟ ನಡೆಯುತ್ತಿವೆ, ಆದರೂ ಸಹ ಅಗಲೀಕರಣಕ್ಕೆ ಸರ್ಕಾರ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯವಾದಿ ಎನ್.ಎಸ್. ಬಟ್ಟಲಕಟ್ಟಿ ಮಾತನಾಡಿ, ನನೆಗುದಿಗೆ ಬಿದ್ದಿರುವ ರಸ್ತೆ ಅಗಲೀರಣದಿಂದ ಪಟ್ಟಣ ಕುಗ್ರಾಮಕ್ಕಿಂತ ಕಡೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಖ್ಯಾತಿಗೆ ತಕ್ಕಂತೆ ಯಾವುದೇ ಮೂಲಸೌಕರ್ಯಗಳಿಲ್ಲ. ಮುಖ್ಯ ರಸ್ತೆ ಪರಿಸ್ಥಿತಿ ಕೇಳುವವರಿಲ್ಲದಂತಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿಳಂಬ ಧೋರಣೆ ಇದಕ್ಕೆ ಕಾರಣ ಎಂದು ಆರೋಪಿಸಿದರು.