ಗದಗ: ವೀರಶೈವ ಧರ್ಮ ತತ್ವ-ನಿಷ್ಠೆಯಿಂದ ಕೂಡಿದೆ. ವೀರಶೈವ, ಲಿಂಗಾಯತ ಬೇರೆಯಲ್ಲ ಹಾಗಾಗಿ ಈ ವಿಚಾರದ ಕಂದಕ ಕಡಿಮೆಯಾಗಬೇಕಾಗಿದೆ. ಮುಂದೆ ಜಾತಿ ಸಮೀಕ್ಷೆ ಬಂದಾಗ ವೀರಶೈವ ಲಿಂಗಾಯತ ಎಂದು ನಮೂದಿಸಬೇಕು. ಇಂದಿನ ದಿನಗಳಲ್ಲಿ ಸಂಸ್ಕಾರ, ಆಚಾರ ವಿಚಾರ ಕಡಿಮೆಯಾಗುತ್ತಿದೆ. ಜಂಗಮರು ಎದೆಯ ಮೇಲೆ ಲಿಂಗವನ್ನು ಅಳವಡಿಸಿಕೊಳ್ಳಬೇಕು ಎಂದು ಮುಂಡರಗಿ ಅನ್ನದಾನೀಶ್ವರ ಸಂಸ್ಥಾನಮಠದ ನಾ. ಡಾ.ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.
ನಗರದ ಅಖಿಲ ಭಾರತ ಜಂಗಮ ಸೇವಾ ಸಮಿತಿ ಉದ್ಘಾಟನಾ ಸಮಾರಂಭದ ನಿಮಿತ್ತ ನಡೆದ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಭಕ್ತರಿಗೆ ಶಿವ ದೀಕ್ಷೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಲಿಂಗ ಹಾಕಿಕೊಳ್ಳದಿದ್ದರೆ ಲಿಂಗವಂತ ಆಗಲಾರರು. ಜಂಗಮರು ಸಾಧನೆಯಿಂದ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಜಂಗಮರು ಸಚ್ಚಾರಿತ್ರ್ಯವಂತರಾಗಬೆಕು. ವೀರಶೈವ ಧರ್ಮ ವ್ಯಕ್ತಿ ನಿಷ್ಠೆ ಅಲ್ಲ, ಅದು ತತ್ವ ನಿಷ್ಠೆ ಧರ್ಮವಾಗಿದೆ. ಹೀಗಾಗಿ ಜಂಗಮ ಸೇವಾ ಸಮಿತಿಯಿಂದ ಸಮಾಜಕ್ಕೆ ಒಳ್ಳೆಯ ತನ ಬೀರುವಂತಾಗಲಿ ಎಂದು ಹಾರೈಸಿ, ವೀರಶೈವ ಧರ್ಮವನ್ನು ಓಬಿಸಿ ಪಂಗಡಕ್ಕೆ ಸೇರುವಂತಾಗಲಿ ಎಂದರು.
ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಮಾತನಾಡಿ, ವೀರಶೈವ ಸಮಾಜ ದೊಡ್ಡದು ಆದರೆ, ಕಾರ್ಯಗಳು ಸಣ್ಣದಾಗುತ್ತಿವೆ. ಇಡೀ ಜಗತ್ತನ್ನು ಗೆಲ್ಲುವ ಶಕ್ತಿ ನಮ್ಮಲ್ಲಿದೆ ಆದರೆ, ಒಗ್ಗಟ್ಟಿನ ಕೊರೆತೆಯಿದೆ ಎಂದರು.ಈ ವೇಳೆ ಅಸೂಟಿಯ ರೇವಣಸಿದ್ಧಯ್ಯ ಹಿರೇಮಠ ಹಾಗೂ ಪತ್ರಕರ್ತ ಆನಂದಯ್ಯವಿರಕ್ತಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ನೂತನ ಅಧ್ಯಕ್ಷ ಪ್ರಭಯ್ಯ ದಂಡಾವತಿಮಠ, ಗೌರವಾಧ್ಯಕ್ಷ ಬಸಯ್ಯ ಸಾಸ್ವಿಹಳ್ಳಿಮಠ, ಅಡ್ನೂರು ದಾಸೋಹ ಶ್ರೀಮಠದ ಶ್ರೀಗಳು ಹಾಗೂ ಸೊರಟೂರು ಶ್ರೀಗಳು ಮಾತನಾಡಿದರು. ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ, ಪ್ರಮಾಣ ಪತ್ರ ವಿತರಿಸಿದರು. ಇದೇ ಸಂದರ್ಭದಲ್ಲಿ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ಸಿದ್ದೇಶ್ವರ ಶಾಸ್ತ್ರಿ ತೆಲ್ಲೂರ, ಪತ್ರಕರ್ತರಾದ ವೆಂಕಟೇಶ ಇಮರಾಪೂರ ಹಾಗೂ ಮಾಳಿಂಗರಾಯ ಪೂಜಾರ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಜಂಗಮ ಸಮಾಜದ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಸೇರಿದ ಸಭಿಕರಿಂದ ೧೦ ಲಕ್ಷ ರುಪಾಯಿಗೂ ಹೆಚ್ಚು ಹಣ ದೇಣಿಗೆ ಸಂಗ್ರಹವಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಂಗಮವಟುಗಳಿಗೆ ಅಯ್ಯಾಚಾರ ಹಾಗೂ ಶಿವದೀಕ್ಷೆ ಶಾಸ್ತ್ರೋಕ್ತವಾಗಿ ನೆರವೇರಿತು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಈಶಣ್ಣ ಮುನವಳ್ಳಿ, ಜ.ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಬೆಲೇರಿ, ರೋಟರಿ ಕ್ಲಬ್ ಅಧ್ಯಕ್ಷ ವಿಜಯಕುಮಾರ ಹಿರೇಮಠ, ಅಕ್ಕನಬಳಗದ ನಾಗರತ್ನಾ ಹಿರೇಮಠ, ಪ್ರೀತಿ ದಂಡಾವತಿಮಠ, ಸಂಗಮ್ಮ ಹಿರೇಮಠ, ವಿ.ಸಿ. ಧನ್ನೂರು ಹಿರೇಮಠ, ವೀರೇಶ ಕೂಗುಮಠ, ಜಿ.ಎಸ್. ಹಿರೇಮಠ, ಎಸ್.ಸಿ. ಹಿರೇಮಠ, ರಾಜೇಶ ಕಲ್ಯಾಣಶೆಟ್ಟಿ, ಜಂಗಿನಮಠ, ರಾಜು ಗುಡಿಮನಿ, ವಿಕ್ರಮ್ ಪಾಂಡೆ, ಸಿದ್ಧರಾಮಯ್ಯ ಕಟಗಿಹಳ್ಳಿಮಠ, ಶಿವಮೂರ್ತಯ್ಯ, ಹಿರೇಮಠ ಹಾಗೂ ಜಂಗಮ ಸಮಾಜದ ಹಿರಿಯರು, ಪದಾಧಿಕಾರಿಗಳು ಇದ್ದರು.