ಬಳ್ಳಾರಿ: ಗಣತಿ ಪಟ್ಟಿಯಾಚೆ ಇರುವ ದೇವದಾಸಿ ಮಹಿಳೆಯರು ಅವರ ಕುಟುಂಬಗಳ ಸದಸ್ಯರನ್ನು ಕೂಡಲೇ ಗಣತಿ ಪಟ್ಟಿಗೆ ಸೇರಿಸಿಕೊಂಡು ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸರ್ಕಾರ ದೇವದಾಸಿ ನಿಷೇಧ ಮೂಸದೆ- 2025ನ್ನು ಅಂಗೀಕರಿಸಿರುವುದು ಹಾಗೂ ಎಲ್ಲ ದೇವದಾಸಿ ಮಹಿಳೆಯರು ಮತ್ತು ಅವರ ಮೂರು ತಲೆಮಾರುಗಳ ಕುಟುಂಬದ ಸದಸ್ಯರ ಗಣತಿಗೆ ಕ್ರಮ ವಹಿಸಿರುವುದು ಸ್ವಾಗತಾರ್ಹ. ಆದರೆ, ಈವರೆಗೆ ಗಣತಿಯಲ್ಲಿ ಸೇರಿಸಲಾಗದಿರುವ ದೇವದಾಸಿ ಮಹಿಳೆಯರು ಹಾಗೂ ಅವರ ಕುಟುಂಬದ ಸಾವಿರಾರು ಸದಸ್ಯರನ್ನು ಪಟ್ಟಿಯಲ್ಲಿ ಇಲ್ಲ ಎಂಬ ಕಾರಣಕ್ಕಾಗಿ ಈಗ ಸಿಗುವ ಸೌಲಭ್ಯಗಳನ್ನು ಪಡೆಯಲಾಗುತ್ತಿಲ್ಲ. ಗಣತಿ ಪಟ್ಟಿಯಲ್ಲಿಲ್ಲ ಎಂಬಂಶವನ್ನು ಇಟ್ಟುಕೊಂಡು ದೇವದಾಸಿ ಕುಟುಂಬದ ಸರ್ಟಿಫಿಕೆಟ್ ಕೂಡ ಸಿಕ್ಕಿಲ್ಲ. ಇದರಿಂದ ಸಾವಿರಾರು ಮಕ್ಕಳು ಶಿಕ್ಷಣ ಹಾಗೂ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ಗಣತಿ ಪಟ್ಟಿಯಿಂದ ದೇವದಾಸಿ ಮಹಿಳೆಯರನ್ನು ಹೊರಗಿಡುತ್ತಿರುವುದು ಕಂಡು ಬಂದಿದೆ. ದೇವದಾಸಿ ಪದ್ಧತಿ ನಿಷೇಧ ಕಾಯ್ದೆ 1982ರಲ್ಲಿ ಅಂಗೀಕರಿಸಿ ಜಾರಿಯಾಗಿರುವುದರಿಂದ ಆನಂತರ ಹುಟ್ಟಿದವರನ್ನು ಗಣತಿಗೆ ಸೇರಿಸಲಾದೆಂದು ಹಳೆಯ ಕಾನೂನನ್ನು ತೋರಿಸಿ ಗಣತಿ ಪಟ್ಟಿಯಲ್ಲಿಲ್ಲದ ಮಹಿಳೆಯರ ಅರ್ಜಿಯನ್ನು ಪಡೆಯದಿರುವುದು ಅತ್ಯಂತ ಖಂಡನೀಯ. ಬ್ರಿಟಿಷರ ಕಾಲದಲ್ಲಿಯೇ ದೇವದಾಸಿ ಪದ್ಧತಿಯನ್ನು ನಿಷೇಧಿಸಲಾಗಿತ್ತು. ಆಗಿದ್ದಾಗ್ಯೂ ಎರಡು ಬಾರಿ ಗಣತಿ ನಡೆಸಿ, ಪುನರ್ವಸತಿ ಕಲ್ಪಿಸಲಾಗಿದೆ. ಗಣತಿಯಾಚೆ ಇರುವ ಮಹಿಳೆಯರು ಹಾಗೂ ಅವರ ಕುಟುಂಬದ ಸದಸ್ಯರನ್ನು ಹಳೆಯ ಕಾಯ್ದೆಯನ್ನು ತೋರಿಸಿ ಹೊರಗಿಟ್ಟಲ್ಲಿ, ಹೊಸ ಕಾಯ್ದೆ ಅಂಗೀಕಾರದ ನಂತರ ಮರಳಿ ಈ ಮಹಿಳೆಯರ ಗಣತಿಗೆ ಕ್ರಮ ವಹಿಸಲು ಮತ್ತಷ್ಟು ಬಜೆಟ್ ಹೊರೆಯನ್ನು ಸರ್ಕಾರ ಭರಿಸಬೇಕಾಗುತ್ತದೆ. ಅಲ್ಲಿಯವರೆಗೆ ಈ ಕುಟುಂಬಗಳು ಸಂಕಷ್ಟವನ್ನು ಎದುರಿಸಬೇಕಾಗಿದೆ. ಹೀಗಾಗಿ ಯಾವುದೇ ವಯೋಮಿತಿ ಕೇಳದೆ ಫಲಾನುಭವಿಗಳಿರುವ ತೊಡರುಗಳನ್ನು ಸರಿಪಡಿಸಬೇಕು. ಗಣತಿ ಪಟ್ಟಿಯಾಚೆ ಇರುವ ಎಲ್ಲ ದೇವದಾಸಿ ಮಹಿಳೆಯರನ್ನು ಅವರ ಮೂರು ತಲೆಮಾರು ಕುಟುಂಬದ ಸದಸ್ಯರನ್ನು ಅತಿ ಶೀಘ್ರವಾಗಿ ಗಣತಿಪಟ್ಟಿಗೆ ಸೇರಿಸಲು ವಿಶೇಷ ಕ್ರಮ ವಹಿಸಿ, 2026ರ ಬಜೆಟ್‌ನಲ್ಲಿ ಎಲ್ಲ ದೇವದಾಸಿ ಮಹಿಳೆಯರಿಗೆ 5 ಸಾವಿರ ರು.ಗಳ ಪೆನ್ಷನ್ ನೀಡಬೇಕು. ವಿದ್ಯಾವಂತ ಮಕ್ಕಳಿಗೆ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷೆ ಈರಮ್ಮ ದೇವದಾಸಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ತಿಳಿಸಿದರಲ್ಲದೆ, ರಾಜ್ಯ ಸರ್ಕಾರ ಕೂಡಲೇ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಬೇಕು. ಗಣತಿ ಪಟ್ಟಿಯಾಚೆ ಇರುವ ದೇವದಾಸಿ ಮಹಿಳೆಯರು ಅವರ ಕುಟುಂಬಗಳ ಸದಸ್ಯರನ್ನು ಕೂಡಲೇ ಗಣತಿ ಪಟ್ಟಿಗೆ ಸೇರಿಸಿಕೊಂಡು ಪುನರ್ವಸತಿ ಕಲ್ಪಿಸಿ ಕೊಡುವತ್ತ ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದರು.ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಕಳುಹಿಸಿದರು. ಸಂಘಟನೆಯ ಕುರುಗೋಡು ತಾಲೂಕು ಮುಖಂಡ ಸಿ.ವೀರೇಶ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಮುಖಂಡರು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.