ಸ್ಮಶಾನ ಜಾಗಕ್ಕಾಗಿ ಪ್ರತಿಭಟನೆ

KannadaprabhaNewsNetwork |  
Published : Jul 20, 2024, 12:47 AM IST
19ಎಚ್.ಎಲ್.ವೈ-1: ಪಟ್ಟಣದಲ್ಲಿರುವ ಪ್ರೊಟೆಸ್ಟಂಟ್ ಸಮುದಾಯಕ್ಕೆ ಅನುಕೂಲವಾಗುವಂತೆ ಸ್ಮಶಾನ ಬಳಕೆಗಾಗಿ ಕ್ರಿಶ್ಚಿಯನ್ ಪ್ರೊಟೆಸ್ಟಂಟ್  ಫಾದರ್ ಅಸೋಸಿಯೇಶನ್ ಸಂಘಟನೆಗೆ ಜಿಲ್ಲಾಧಿಕಾರಿಗಳು ಮಂಜೂರು ಮಾಡಿರುವ 15 ಗುಂಟೆ ಜಮೀನನ್ನು ಪುರಸಭೆಯವರು ಕೊಡಬೇಕೆಂದು ಆಗ್ರಹಿಸಿ ಶುಕ್ರವಾರ ಇಂದಿರಾನಗರದ ನಿವಾಸಿಗಳು ಪುರಸಭೆಗೆ ತೆರಳಿ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಎದುರು ಅಹವಾಲು ತೊಡಿಕೊಂಡರು. | Kannada Prabha

ಸಾರಾಂಶ

ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪಿಎಸ್ಐ ವಿನೋದ ರೆಡ್ಡಿ, ಮುಖ್ಯಾಧಿಕಾರಿ, ಪ್ರೊಟೆಸ್ಟಂಟ್ ಸಮುದಾಯದ ಪ್ರಮುಖರ ಹಾಗೂ ಹುಲ್ಲಟ್ಟಿ ರೈತರ ಸಭೆ ನಡೆಸಿ ಪ್ರಕರಣವನ್ನು ಸೌಹಾರ್ದದಿಂದ ಇತ್ಯರ್ಥ ಪಡಿಸಲಾಯಿತು.

ಹಳಿಯಾಳ: ಸ್ಮಶಾನಕ್ಕಾಗಿ ಜಿಲ್ಲಾಧಿಕಾರಿಗಳು ಮಂಜೂರು ಮಾಡಿರುವ 15 ಗುಂಟೆ ಜಮೀನನ್ನು ಪುರಸಭೆಯವರು ನೀಡಬೇಕೆಂದು ಆಗ್ರಹಿಸಿ ಇಂದಿರಾನಗರದ ನಿವಾಸಿಗಳು ಪ್ರತಿಭಟನೆ ನಡೆಸಿದರು. ಬಳಿಕ ರೈತರ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಯಿತು.

ಶುಕ್ರವಾರ ಪುರಸಭೆ ಕಚೇರಿಗೆ ತೆರಳಿದ ಇಂದಿರಾನಗರದ ನಿವಾಸಿಗಳು ಹಾಗೂ ತಾಲೂಕಿನ ಕ್ರಿಶ್ಚಿಯನ್ ಪ್ರೊಟೆಸ್ಟಂಟ್ ಸಮುದಾಯದ ಪ್ರಮುಖರ ನಿಯೋಗವು ಜಿಲ್ಲಾಡಳಿತ ಸ್ಮಶಾನಕ್ಕಾಗಿ ಮಂಜೂರು ಮಾಡಿದ ಜಮೀನು ನೀಡುವಂತೆ ಪಟ್ಟು ಹಿಡಿದರು. ಗುರುವಾರ ರಾತ್ರಿ ಇಂದಿರಾನಗರದ ನಿವಾಸಿ ಹಾಗೂ ಕ್ರಿಶ್ಚಿಯನ್ ಪ್ರೊಟೆಸ್ಟಂಟ್ ಸಮಾಜದ ಹಿರಿಯರು ಪುರಸಭಾ ಮಾಜಿ ಸದಸ್ಯ ಯೇಸುಕ್ರಿಸ್ತಂ ಮಂಡಲ್ ನಿಧನರಾದ ಹಿನ್ನಲೆ ಅವರ ಅಂತ್ಯಸಂಸ್ಕಾರವನ್ನು ಮಾಡಲು ಸ್ಮಶಾನ ಭೂಮಿಯ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆ ಜಿಲ್ಲಾಡಳಿತದಿಂದ ಮಂಜೂರಾಗಿರುವ ಸ್ಮಶಾನ ಭೂಮಿಯನ್ನು ನೀಡುವಂತೆ ಆಗ್ರಹಿಸಲು ಪುರಸಭೆಗೆ ಧಾವಿಸಿದರು.

ಈ ವೇಳೆ ಸುಂದರರಾಜ ಎಂ. ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಸ್ಮಶಾನ ಭೂಮಿಗಾಗಿ ಸಮಾಜದವರು ಹೋರಾಟ ಮಾಡುತ್ತ ಮನವಿ ನೀಡುತ್ತಾ ಬಂದಿದ್ದಾರೆ. ಹೀಗಿರುವಾಗ ಜಿಲ್ಲಾಡಳಿತವು 2010ರಲ್ಲಿ ಹುಲ್ಲಟ್ಟಿ ಗ್ರಾಮದ ಸರ್ಕಾರಿ ಜಮೀನನಲ್ಲಿನ 15 ಗುಂಟೆ ಜಮೀನನ್ನು ಮಂಜೂರು ಮಾಡಿದ್ದರು. ಜಿಲ್ಲಾಧಿಕಾರಿಗಳು ಆದೇಶವನ್ನು ಪುರಸ್ಕರಿಸಿ ಅಂದಿನ ಪುರಸಭಾ ಆಡಳಿತ ಮಂಡಳಿಯು ಮಂಜೂರಾತಿ ನೀಡಿದೆ. ಈ ಮಧ್ಯೆ ನಮ್ಮ ಸಮಾಜದ ವ್ಯಕ್ತಿ ನಿಧನರಾದಾಗ ಅವರ ಅಂತ್ಯಸಂಸ್ಕಾರ ಮಾಡಲೆಂದು ಮಂಜೂರಾದ ಜಮೀನಿಗೆ ಹೋದಾಗ ಅಲ್ಲಿನ ಜನರು ನಮಗೆ ಅಡ್ಡಿಪಡಿಸಿದ್ದಾರೆ. ಒಂದು ವೇಳೆ ವೇಳೆ ಪುರಸಭೆಯವರು ಜಮೀನು ನೀಡದಿದ್ದರೆ ಶವವನ್ನು ಪುರಸಭೆ ಎದುರು ಇಟ್ಟು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಅಹವಾಲು ಆಲಿಸಿದ ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಜಿಲ್ಲಾಡಳಿತ ಮಂಜೂರು ಮಾಡಿದ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಲು ಅವಕಾಶವನ್ನು ಕೊಡುತ್ತೆವೆ ಎಂದು ಭರವಸೆ ನೀಡಿದರು. ಪುರಸಭಾ ನಿಕಟಪೂರ್ವ ಉಪಾಧ್ಯಕ್ಷೆ ಸುವರ್ಣ ಮಾದರ, ಯೇಸಯ್ಯಾ ತುಮಗುಂಟ, ರಾಜೇಶ ಮಾದರ, ರಾಯಲಮ್ಮಾ ತುಮಗುಂಟ, ಮರಿಯಮ್ಮ ಜಕರಯ್ಯಾ ಮೊದಲಾದವರು ಇದ್ದರು.

ರೈತರ ಸಭೆ ನಡೆಸಿ ಸಮಸ್ಯೆ ಇತ್ಯರ್ಥ

ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪಿಎಸ್ಐ ವಿನೋದ ರೆಡ್ಡಿ, ಮುಖ್ಯಾಧಿಕಾರಿ, ಪ್ರೊಟೆಸ್ಟಂಟ್ ಸಮುದಾಯದ ಪ್ರಮುಖರ ಹಾಗೂ ಹುಲ್ಲಟ್ಟಿ ರೈತರ ಸಭೆ ನಡೆಸಿ ಪ್ರಕರಣವನ್ನು ಸೌಹಾರ್ದದಿಂದ ಇತ್ಯರ್ಥ ಪಡಿಸಲಾಯಿತು.ಸಭೆಯ ನಂತರ ಹುಲ್ಲಟ್ಟಿಗೆ ತೆರಳಿದ ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಹಾಗೂ ಸಿಬ್ಬಂದಿ ಸ್ಥಳವನ್ನು ಗುರುತಿಸಿ ಅಂತ್ಯಸಂಸ್ಕಾರ ಮಾಡಲು ಸ್ವಚ್ಛ ಮಾಡಿಸಿದರು. ಬಳಿಕ ಪುರಸಭಾ ಮಾಜಿ ಸದಸ್ಯ ಯೇಸುಕ್ರಿಸ್ತಂ ಮಂಡಲ್ ಅವರ ಅಂತ್ಯಸಂಸ್ಕಾರ ನಡೆಯಿತು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು