ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ

KannadaprabhaNewsNetwork |  
Published : Jul 15, 2025, 11:45 PM IST
15ಎಚ್‌ಪಿಟಿ1- ಹೊಸಪೇಟೆಯ ತಹಸೀಲ್ದಾರ ಕಚೇರಿ ಎದುರು ಆಶಾ ಕಾರ್ಯಕರ್ತೆಯರ ಸಂಘದ ವಿಜಯನಗರ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ಆಶಾ ಕಾರ್ಯಕರ್ತೆಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತು ಕೊಟ್ಟಂತೆ ₹10 ಸಾವಿರ ಗೌರವ ಧನ ಖಾತ್ರಿ ಮಾಡಿ ಆದೇಶ ನೀಡಬೇಕು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಆಶಾ ಕಾರ್ಯಕರ್ತೆಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತು ಕೊಟ್ಟಂತೆ ₹10 ಸಾವಿರ ಗೌರವ ಧನ ಖಾತ್ರಿ ಮಾಡಿ ಆದೇಶ ನೀಡಬೇಕು. ಆಶಾ ಕಾರ್ಯಕರ್ತೆಯರ ಅವೈಜ್ಞಾನಿಕ ಮೌಲ್ಯಮಾಪನ ಪ್ರಕ್ರಿಯೆ ಹಿಂಪಡೆಯಬೇಕು. ಆಶಾ ಕಾರ್ಯಕರ್ತೆಯರಿಗೂ ಬಜೆಟ್‌ನಲ್ಲಿ ಒಂದು ಸಾವಿರ ರು. ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವಿಜಯನಗರ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಬಜೆಟ್ ನಲ್ಲಿ ಹೆಚ್ಚಿಸಿದಂತೆ‌ ಒಂದು ಸಾವಿರ ರು. ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿಸಬೇಕು. ನಗರದ ಬಸ್ ನಿಲ್ದಾಣದಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸಿಲ್‌ ಕಚೇರಿ ತಲುಪಿತು. ಬಳಿಕ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಆಶಾಕಾರ್ಯಕರ್ತೆಯರು ನಿಯೋಗದಲ್ಲಿ ತೆರಳಿ, ಜಿಲ್ಲಾಧಿಕಾರಿ ಕಚೇರಿಯಲ್ಲೂ ಮನವಿ ಸಲ್ಲಿಸಿದರು.

ಎಐಯುಟಿಯುಸಿಯ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್ ಮಾತನಾಡಿ, ಜನವರಿಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರದ ಸಂದರ್ಭದಲ್ಲಿ ಸಿಎಂ ಅವರು ಸಭೆ ಕರೆದು, ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ₹10 ಸಾವಿರ ಗೌರವ ಧನ ಖಾತ್ರಿ ಮಾಡಲಾಗುವುದು. ಏಪ್ರಿಲ್ ತಿಂಗಳಿನಿಂದ ಜಾರಿ ಮಾಡಲಾಗುವುದು, ಹೆಚ್ಚು ಕೆಲಸ ಮಾಡಿದವರಿಗೆ ಹೆಚ್ಚುವರಿ ಗೌರವ ಧನ ನೀಡಲಾಗುವುದು ಎಂದು ಘೋಷಿಸಿದ್ದರು. ಈ ಸಭೆಯಲ್ಲಿ ಆರೋಗ್ಯ ಸಚಿವರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದಾದ ನಂತರ ಸಿಎಂ ಹಾಗೂ ಸಚಿವರು, ಮಾಧ್ಯಮಗಳ ಮುಂದೆ ಅಧಿಕೃತವಾಗಿ ಘೋಷಣೆ ಕೂಡ ಮಾಡಿದ್ದರು. ಆದರೆ ಇಲ್ಲಿಯವರೆಗೆ ಈ ಕುರಿತು ಸರ್ಕಾರ ಆದೇಶವನ್ನೇ ಮಾಡಿಲ್ಲ. ಮುಖ್ಯಮಂತ್ರಿಗಳು ಕೊಟ್ಟ‌ ಮಾತನ್ನು ಉಳಿಸಿಕೊಂಡಿಲ್ಲ ಎಂದು ಆರೋಪಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಗೌರಮ್ಮ ಕೆ.ಎಸ್. ಮಾತನಾಡಿ, ಆಶಾ ಕಾರ್ಯಕರ್ತೆಯರನ್ನು ಮನೆಗೆ ಕಳುಹಿಸುವ ಕೆಲಸ ಮಾಡಲಾಗುತ್ತಿದೆ. ಕಳೆದ 10, 15 ವರ್ಷಗಳಿಂದ ಹಗಲು ರಾತ್ರಿ ಗರ್ಭಿಣಿಯರ ಹಾಗೂ ಶಿಶುಗಳ ಆರೋಗ್ಯಕ್ಕಾಗಿ, ಸಮಾಜದ ಆರೋಗ್ಯಕ್ಕಾಗಿ ಕಷ್ಟಪಡುತ್ತಿರುವ ಆಶಾಗಳನ್ನು ಅತ್ಯಂತ ಅಗೌರವದಿಂದ ಸರ್ಕಾರದ ಕಾಣುತ್ತಿದೆ. ಒಬ್ಬರೇ ಆಶಾವನ್ನು ತೆಗೆಯುವುದಕ್ಕೆ ಅವಕಾಶ ನೀಡಬಾರದು ಎಂದರು.

ಜಿಲ್ಲಾಧ್ಯಕ್ಷೆ ಗೀತಾ ಪಿ.ಎ. ಮಾತನಾಡಿ, ಕೋವಿಡ್ ಸಂದರ್ಭ ತಮ್ಮ ಜೀವವನ್ನು ಪಣಕ್ಕಿಟ್ಟು ದುಡಿದ ಹಲವಾರು ಆಶಾ ಕಾರ್ಯಕರ್ತೆಯರನ್ನು ಯಾವುದೇ ಮುಲಾಜಿಲ್ಲದೆ, ಸರ್ಕಾರ ಮನೆಗೆ ಕಳುಹಿಸಲು‌ ಹೊರಟಿದೆ. ಸರ್ಕಾರ ಹಾಗೂ ಆರೋಗ್ಯ ಇಲಾಖೆ ಇಂತಹ ಕ್ರಮಗಳ ವಿರುದ್ಧ ಆಶಾಗಳು ಬೃಹತ್ ಸಂಖ್ಯೆಯ ಧ್ವನಿ ಎತ್ತಬೇಕು. ಮುಂದಿನ ದಿನಗಳಲ್ಲಿ ಮತ್ತೆ ಉಗ್ರ ಹೋರಾಟಕ್ಕೆ ತಯಾರಾಬೇಕು ಎಂದರು.

ಮುಖಂಡರಾದ ಮಹೇಶ್ವರಿ, ಚೆನ್ನಮ್ಮ, ವೀಣಾ, ಅನ್ನಪೂರ್ಣ, ನಾಗಮ್ಮ, ನಾಗರತ್ನ ಮತ್ತಿತರರಿದ್ದರು.

PREV

Latest Stories

ಭೂಮಿ ಉಳುವಿಗಾಗಿ ರಸಗೊಬ್ಬರ ಬಳಸಬೇಡಿ
ವಿವಿಧ ಬೇಡಿಕೆ ಈಡೇರಿಕೆಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ
ಯಶಸ್ವಿ ಪ್ರದರ್ಶನದತ್ತ ‘ಜಂಗಲ್ ಮಂಗಲ್’: ರಕ್ಷಿತ್ ಕುಮಾರ್