ಗದಗ: ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ವತಿಯಿಂದ ನಗರದ ಜಿಲ್ಲಾಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾನಿರತರು ಹಿಂದುಳಿದ ವರ್ಗಗಳ ನಿಗಮಗಳಿಗೆ ಹಣ ನೀಡಿ, ಇಲ್ಲವೆ ನಿಗಮ ಮುಚ್ಚಿ ಬಿಡಿ ಎಂಬ ಘೋಷಣೆ ಕೂಗುತ್ತಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಬಿಜೆಪಿ ಓಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಸಿದ್ಧೇಶ ಎಸ್. ಹೂಗಾರ ಮಾತನಾಡಿ, ಅಹಿಂದ ಹೆಸರಿನ ಮೇಲೆ ಅಧಿಕಾರಕ್ಕೆ ಬಂದಿರುವ ತಾವುಗಳು ಹಿಂದುಳಿದ ವರ್ಗಗಳ ಜನರ ಆರ್ಥಿಕ, ಔದ್ಯೋಗಿಕ, ಕೃಷಿ ಮತ್ತು ಶಿಕ್ಷಣಕ್ಕಾಗಿ ನಿಗಮಗಳಿಗೆ ಹಣ ಬಿಡುಗಡೆ ಮಾಡದೇ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ₹1000 ಕೋಟಿಗೂ ಅಧಿಕ ಅನುದಾನ ದಿ.ದೇವರಾಜು ಅರಸು, ಒಕ್ಕಲಿಗ,ಮರಾಠ, ವಿಶ್ವಕರ್ಮ, ವೀರಶೈವ ಲಿಂಗಾಯತ, ನಿಜಶರಣ ಅಂಬಿಗರಚೌಡಯ್ಯ, ಸವಿತಾ ಸಮಾಜ, ಅಲೆಮಾರಿಅರೆ, ಅಲೆಮಾರಿ, ಮಡಿವಾಳ ಮಾಚಿದೇವ ಮತ್ತು ಕಾಡುಗೊಲ್ಲ ಅಭಿವೃದ್ಧಿ ನಿಗಮಗಳಿಗೆ ಹಣ ಬಿಡುಗಡೆ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ₹1600 ಕೋಟಿ ಬಜೆಟನಲ್ಲಿ ಘೋಷಣೆ ಮಾಡಿ ಕೇವಲ ₹57.04 ಕೋಟಿ ಮಾತ್ರ ವೆಚ್ಚ ಮಾಡಿ ಮೋಸ ಮಾಡಿದೆ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಕ್ಕಾಗಿ 6065 ಅರ್ಜಿ ಸಲ್ಲಿಕೆಯಾದರೂ ಒಂದು ಪೈಸೆ ಕೂಡ ಬಿಡುಗಡೆ ಮಾಡದೇ ಹಿಂದುಳಿದ ವರ್ಗಗಳ ಮಕ್ಕಳಿಗೆ ಮಾಡಿರುವ ಅನ್ಯಾಯವನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಬಲವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲೆಮರೆಕಾಯಿಯಂತೆ ಇರುವ ಅತ್ಯಂತ ಹಿಂದುಳಿದ ಸಮುದಾಯಗಳಾದ ಹೂಗಾರ, ಕುಂಬಾರ, ಕಂಬಾರ, ಗಾಣಿಗ,ಹಡಪದ, ಈಡಿಗ ಹಾಗೂ ಮಾಳಿ ಸಮುದಾಯಗಳು ಕೂಡಾ ಆರ್ಥಿಕ, ಶೈಕ್ಷಣಿಕವಾಗಿ ಮುಖ್ಯ ವಾಹಿನಿಗೆ ಬರಬೇಕೆಂದು ಪ್ರತ್ಯೇಕ ಅಭಿವೃದ್ಧಿ ನಿಗಮ ಬಿಜೆಪಿ ಸರ್ಕಾರ ಸ್ಥಾಪಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಇಂತಹ ಸಣ್ಣ ಸಣ್ಣ ಹಿಂದುಳಿದ ಸಮುದಾಯಗಳ ನಿಗಮಗಳಿಗೆ ಒಂದು ಪೈಸೆ ಹಣ ಬಿಡುಗಡೆ ಮಾಡದೆ ಅನ್ಯಾಯ ಮಾಡುತ್ತಿದೆ. ಈ ಕೂಡಲೇ ಈ ನಿಗಮಗಳಿಗೆ ಹಣ ಮಂಜೂರಾತಿ ಮಾಡಬೇಕು. ಮುಖಮಂತ್ರಿಗಳು ಹಿಂದುಳಿದ ವರ್ಗಗಳ ನಿಗಮಗಳಿಗೆ ತಾವು ಈ ಹಿಂದೆ ಬಜೆಟನಲ್ಲಿ ಘೋಷಣೆ ಮಾಡಿರುವಂತೆ ₹1600 ಕೋಟಿ ಕೂಡಲೇ ಬಿಡುಗಡೆ ಮಾಡಿ ಹಿಂದುಳಿದ ವರ್ಗಗಳ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಅನುಕೂಲ ಮಾಡಬೇಕೆಂದು ಆಗ್ರಹಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಸುಧೀರ್ ಕಾಟಗಾರ, ವಿನಾಯಕ ಹಬೀಬ, ಶಂಕರ ಬಾವಿ, ಅನಿಲ ಅಬ್ಬಿಗೇರಿ, ದೇವೇಂದ್ರಪ್ಪ ಹೂಗಾರ, ಸುರೇಶ.ಎಂ., ಅಶ್ವಿನಿ ಜಗತಾಪ, ಲಿಂಗರಾಜ ಪಾಟೀಲ, ರವಿ ವಗ್ಗನವರ, ರವಿ ಚವ್ಹಾಣ, ಸಂತೋಷ ಅಕ್ಕಿ, ರಾಮಣ್ಣ ಕಾಂಬಳೆ, ಜಗನ್ನಾಥಸಾ ಬಾಂಡಗೆ, ಬಸವರಾಜ ನೆಗಳೂರ ಸೇರಿದಂತೆ ಪ್ರಮುಖರು ಇದ್ದರು.