ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್‌ಗೆ ಆಗ್ರಹಿಸಿ ಹೆಸ್ಕಾಂ ಕಚೇರಿಗೆ ಬೀಗ

KannadaprabhaNewsNetwork |  
Published : Nov 17, 2026, 02:15 AM IST
ಸವಣೂರು ಪಟ್ಟಣದ ಹೆಸ್ಕಾಂ ಇಲಾಖೆಯ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಸೋಮವಾರ ರೈತರು ಬೀಗ ಜಡಿದು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ಕೈಗೊಂಡ ಸಂದರ್ಭದಲ್ಲಿ ರೈತರು ಹಾಗೂ ಹೆಸ್ಕಾಂ ಇಲಾಖೆ ಅಧಿಕಾರಿಗಳ ಮಧ್ಯ ವಾಗ್ವಾದ ನಡೆಯಿತು. | Kannada Prabha

ಸಾರಾಂಶ

ಸರ್ಕಾರದ ಆದೇಶದಂತೆ ಕೃಷಿ ಪಂಪ್ ಸೆಂಟ್‌ಗಳಿಗೆ ನಿತ್ಯ 7 ತಾಸು ವಿದ್ಯುತ್ ನೀಡಬೇಕೆಂದು ಆಗ್ರಹಿಸಿ, ತಾಲೂಕಿನ ರೈತರು ಸೋಮವಾರ ಪಟ್ಟಣದ ಹೆಸ್ಕಾಂ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಸವಣೂರು: ಸರ್ಕಾರದ ಆದೇಶದಂತೆ ಕೃಷಿ ಪಂಪ್ ಸೆಂಟ್‌ಗಳಿಗೆ ನಿತ್ಯ 7 ತಾಸು ವಿದ್ಯುತ್ ನೀಡಬೇಕೆಂದು ಆಗ್ರಹಿಸಿ, ತಾಲೂಕಿನ ರೈತರು ಸೋಮವಾರ ಪಟ್ಟಣದ ಹೆಸ್ಕಾಂ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಬೇಡಿಕೆ ಈಡೇರಿಕೆಗೆ ಈ ಹಿಂದೆಯೇ ಮನವಿ ಸಲ್ಲಿಸಿ ಗಡುವು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ರೈತರು, ಕಚೇರಿ ಎದುರು ಜಮಾಯಿಸಿ ಘೋಷಣೆ ಕೂಗಿದರು.

ಸರ್ಕಾರದ ಆದೇಶದನ್ವಯ ನಿತ್ಯ 7 ತಾಸು ವಿದ್ಯುತ್ ಕೊಡಬೇಕು. ಆದರೆ ಒಂದು ತಾಸು ಕೂಡ ಸರಿಯಾಗಿ ಸಿಗುತ್ತಿಲ್ಲ. ಕೇಳಿದರೆ ಕಾರಣಗಳನ್ನು ಹೇಳುತ್ತಾರೆಯೇ ಹೊರತು ವಿದ್ಯುತ್ ನೀಡುತ್ತಿಲ್ಲ ಎಂದು ರೈತರು ದೂರಿದರು. ನೀರಾವರಿ ಪದ್ಧತಿಯಡಿ ಬಿತ್ತನೆ ಮಾಡಿರುವ ಬೆಳೆಗಳಿಗೆ ನೀರು ಹಾಯಿಸಲಾಗದೆ ಪರದಾಡುವಂತಾಗಿದೆ. ರಾತ್ರಿಯಿಡೀ ಹೊಲದಲ್ಲಿ ವಿದ್ಯುತ್‌ಗಾಗಿ ಕಾದು ಬಳಲಿ ಮನೆಗೆ ಮರಳುತ್ತಿದ್ದೇವೆ. ಬಿಸಿಲಿಗೆ ಬೆಳೆ ಒಣಗುತ್ತಿದ್ದು, ಬರಗಾಲದ ನಡುವೆ ಈ ಸ್ಥಿತಿ ರೈತರನ್ನು ಆತ್ಮಹತ್ಯೆಯ ಅಂಚಿಗೆ ತಳ್ಳುವಂತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೆಸ್ಕಾಂ ಅಧ್ಯಕ್ಷರು ಇದೇ ತವರು ಕ್ಷೇತ್ರದವರಾಗಿದ್ದರೂ ಸ್ಥಳೀಯ ರೈತರ ಸಮಸ್ಯೆಗೆ ಪರಿಹಾರ ಸಿಗದಿರುವುದು ವಿಷಾದನೀಯ ಎಂದೂ ರೈತರು ಬೇಸರ ವ್ಯಕ್ತಪಡಿಸಿದರು.

ನಿತ್ಯ 7 ತಾಸು ವಿದ್ಯುತ್ ಪೂರೈಸುವ ಭರವಸೆ ಸಿಗುವವರೆಗೆ ಬೀಗ ತೆರೆಯುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.

ಅಧಿಕಾರಿಗಳ ಸಮಜಾಯಿಷಿ: ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಜೆಇ ಮುಜಾಮಿನ್ ಶಾಬಾಳ ಹಾಗೂ ಇತರ ಅಧಿಕಾರಿಗಳು, ರೈತರ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಸರಬರಾಜಿಗೆ ಸೂಕ್ತ ವ್ಯವಸ್ಥೆ ಮಾಡುವ ಕಾಮಗಾರಿ ಮುಂದಿನ ಒಂದು ವಾರದಲ್ಲಿ ನಡೆಯಲಿದೆ. ಇಂದಿನಿಂದ ಕಾಮಗಾರಿ ಮುಗಿಯುವವರೆಗೂ ನಿರಂತರ 7 ಗಂಟೆ ವಿದ್ಯುತ್ ನೀಡಲಾಗುವುದು ಎಂದು ಮನವೊಲಿಸಲು ಯತ್ನಿಸಿದರು.

ಇದರಿಂದ ಸಮಾಧಾನಗೊಳ್ಳದ ರೈತರು, ನಿರಂತರ 7 ತಾಸು ವಿದ್ಯುತ್ ನೀಡುವುದು ನಿಜವಾಗಿದ್ದರೆ, ಇಷ್ಟು ದಿನ ಬಡ ರೈತರನ್ನು ಏಕೆ ಸತಾಯಿಸಿದಿರಿ? ಎಂದು ತರಾಟೆಗೆ ತೆಗೆದುಕೊಂಡರು.

ಬಳಿಕ ಜೆಇ ಶಾಬಾಳ ಅವರು, ದಿನಕ್ಕೆ 7 ತಾಸು ವಿದ್ಯುತ್ ಪೂರೈಕೆಗೆ ಅಗತ್ಯ ವ್ಯವಸ್ಥೆ ಕೈಗೊಂಡು, ಈ ಕುರಿತು ರೈತರಿಗೆ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು. ಭರವಸೆ ಈಡೇರದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ ರೈತರು, ಪ್ರತಿಭಟನೆ ಹಿಂಪಡೆದು ಕಚೇರಿಯ ಬೀಗ ತೆರೆದರು.

ರೈತರಾದ ಸಿದ್ದಪ್ಪ ನಾರಾಯಣಪುರ, ವಿನಾಯಕ ಕುಲಕರ್ಣಿ, ಕಿರಣ್ ಗಾಣಿಗೇರ, ಪ್ರವೀಣ ಕಂಬಾಳಿಮಠ, ಬಸನಗೌಡ ಪಾಟೀಲ, ರವಿ ಕಳಕಪ್ಪನವರ, ಶರಣು ಕುಲಕರ್ಣಿ, ವೀರೇಶ ರಾಯನಾಳ, ವಿಷ್ಣು ಸಾರಥರಾಮ, ಬಸವರಾಜ ಮಟಿಗಾರ, ಸಂತೋಷ ಕಳಕಪ್ಪನವರ, ಮಂಜುನಾಥ ಹಾಗೂ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯವ ನೀರಿಗಾಗಿ ಇಳಕಲ್ಲ ಜನರ ಪರದಾಟ
ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ