ವಾರದೊಳಗೆ ಶುದ್ಧ ನೀರಿನ ಘಟಕ ದುರಸ್ತಿಗೊಳಿಸದಿದ್ದರೆ ಹೋರಾಟ

KannadaprabhaNewsNetwork |  
Published : Apr 07, 2026, 01:30 AM IST
ಪೋಟೋ, 6ಎಚ್‌ಎಸ್‌ಡಿ3: ಪಟ್ಟಣದಲ್ಲಿ  ಸೋಮವಾರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕೆಟ್ಟು ಹೋಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಗೊಳಿಸಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು  ತಾಲೂಕು ಪಂಚಾಯಿತಿ ಕಚೇರಿ ಮುತ್ತಿಗೆ ಹಾಕಿ   ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ತಾಲೂಕು ಪಂಚಾಯಿತಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಜನರಿಂದ ಜಬರ್ದಸ್ತಾಗಿ ತೆರಿಗೆ ವಸೂಲಿ ಮಾಡುತ್ತೀರಿ. ಆದರೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲರಾಗಿದ್ದೀರಿ. ಇದೇ ಪರಿಸ್ಥಿತಿ ಮುಂದುವರಿದರೆ ಗ್ರಾಮಗಳಲ್ಲಿ ಡಂಗೂರ ಸಾರಿಸಿ ತೆರಿಗೆ ಪಾವತಿಸದಂತೆ ಜನರಿಗೆ ಕರೆ ನೀಡುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಎಚ್ಚರಿಸಿದರು.ಪಟ್ಟಣದಲ್ಲಿ ಸೋಮವಾರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕೆಟ್ಟು ಹೋಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ತಾಲೂಕು ಪಂಚಾಯಿತಿ ಕಚೇರಿ ಮುತ್ತಿಗೆ ಹಾಕಿ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಗೆ ಬಂದು ವರ್ಷಗಳೇ ಆಗಿವೆ, ಚರಂಡಿ ಸ್ವಚ್ಛತೆಯಿಲ್ಲ, ಬೀದಿ ದೀಪಗಳ ನಿರ್ವಹಣೆಯಿಲ್ಲ. ಗ್ರಾಮಗಳ ನೇರ್ಮಲ್ಯೀಕರಣಕ್ಕೆ ಯಾವುದೇ ಆದ್ಯತೆ ನೀಡದೆ ನಿಮಗೆ ತೆರಿಗೆ ವಸೂಲಾತಿಗೆ ನೈತಿಕತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕಾಗಿ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಸೂಕ್ತ ನಿರ್ವಹಣೆ ಇಲ್ಲದೆ ಅವಧಿಗೆ ಮುನ್ನವೇ ಸಂಪೂರ್ಣ ಹಾಳಾಗಿವೆ. ಘಟಕಗಳು ಹಾಳಾಗಲು ಕಾರಣರಾದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಮಸ್ಯೆಯ ಕುರಿತು ಹಾರಿಕೆಯ ಉತ್ತರ ಹಾಗೂ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಬಹುತೇಕ ಘಟಕಗಳು ಕೆಲಸ ಮಾಡದೆ ಅನೈತಿಕ ಚಟುವಟಿಕೆಯ ತಾಣಗಳಾಗಿವೆ ಎಂದು ಆರೋಪಿಸಿದರು.

ಕುಡಿಯುವ ನೀರು ಒದಗಿಸದ ಗ್ರಾಮ ಪಂಚಾಯಿತಿ ಆಡಳಿತಗಳು ಹಾಗೂ ಅದಿಕಾರಿಗಳು ತೆರಿಗೆ ವಸೂಲಿಗೆ ಮಾತ್ರ ಮುತುವರ್ಜಿ ವಹಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೇವೆ ಹಾಗೂ ಸೌಲಭ್ಯ ಒದಗಿಸದೆ ತೆರಿಗೆ ವಸೂಲಿ ಮಾಡುವುದು ವಂಚನೆಯ ಕ್ರಮವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿರುವ ಗ್ರಾಮಗಳಲ್ಲಿ ನೀರಿನ ಕಂದಾಯವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ವಸೂಲಿ ಮಾಡಿರುವ ತೆರಿಗೆಯನ್ನು ಹಿಂದಿರುಗಿಸಬೇಕು. ಮೂಲಭೂತ ಸೌಲಭ್ಯ ಒದಗಿಸದ ಅಧಿಕಾರಿಗಳು ಕರ್ತವ್ಯ ಪ್ರಜ್ಞೆ ಹಾಗೂ ಮಾನವೀಯತೆಯನ್ನು ಮರೆತು ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಟ್ಟು ಹೋಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಒಂದು ವಾರದೊಳಗೆ ಸರಿಪಡಿಸಿ ಗ್ರಾಮೀಣ ಜನರಿಗೆ ನೀರು ಒದಗಿಸಬೇಕು. ಇಲ್ಲವಾದರೆ ಜಿಲ್ಲಾ ಪಂಚಾಯಿತಿ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯಾಧ್ಯಕ್ಷ ಕೊರಟಿಕೆರೆ ಮಹೇಶ್ವರಪ್ಪ, ತಾಲೂಕ ಅಧ್ಯಕ್ಷ ಮಾಯಣ್ಣ, ಕಾರ್ಯದರ್ಶಿ ನಿರಂಜನಮೂರ್ತಿ, ರೈತ ಮುಖಂಡರಾದ ಕರಿಸಿದ್ದಯ್ಯ, ಚಿತ್ತಪ್ಪ, ರಘು, ವಿಜಯ್, ತೀರ್ಥಪ್ಪ, ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಕಸ್ಮಿಕ ಬೆಂಕಿ: 2 ರಾಗಿ ಮೆದೆ ಭಸ್ಮ
ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯ ಗಡಿ ಪರಿಷ್ಕರಿಸಿ