ಆನಂದಪುರ: ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೇ 20ರ ಒಳಗೆ ತುರ್ತು ವಾಹನ ನೀಡದೇ ಇದ್ದರೆ ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಜಿಪಂ ಮಾಜಿ ಸದಸ್ಯ ರತ್ನಾಕರ ಹೋನಗೋಡ್ ಎಚ್ಚರಿಸಿದರು.
ಬೆಂಗಳೂರು ಹೊನ್ನಾವರ, ಬೈಂದೂರು ರಾಣಿಬೆನ್ನೂರು ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು ಅಪಘಾತದಲ್ಲಿ ತೀವ್ರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಕರೆದೊಯ್ಯಲು ತುರ್ತು ವಾಹನ ಇಲ್ಲದೆ ತೀವ್ರ ಗಾಯಗೊಂಡವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಅಪಘಾತ ಸಂಭವಿಸಿದಾಗ ಅಥವಾ ರೋಗಿಗಳು ತುರ್ತು ವಾಹನಕ್ಕೆ ಕರೆ ಮಾಡಿದರೆ ಜೋಗ, ಕಾರ್ಗಲ್, ತುಂಬ್ರಿ ಬ್ಯಾಕೋಡ್‌ನಿಂದ ವಾಹನವನ್ನು ಕಳಿಸುತ್ತೇವೆಂದು ಉಡಾಫೆಯ ಮಾತನಾಡುತ್ತಾ ಇದ್ದಾರೆ ಎಂದರು.
ಆನಂದಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದ ತುರ್ತು ವಾಹನವನ್ನು ಅಧಿಕಾರಿಗಳು ಬೇರೆಡೆಗೆ ವರ್ಗಾಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮೇ 20ರೊಳಗೆ ಆನಂದಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ವಾಹನದ ವ್ಯವಸ್ಥೆಯನ್ನು ಕಲ್ಪಿಸದೇ ಇದ್ದರೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯ ಮುಂದೆ ಸಾರ್ವಜನಿಕರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಚುನಾವಣೆಯಲ್ಲಿ ಮತದಾರರ ಮುಂದೆ ಕಣ್ಣೀರು ಹಾಕಿ ಭ್ರಷ್ಟಾಚಾರ ಮುಕ್ತವಾದ ಆಡಳಿತವನ್ನು ನಡೆಸುತ್ತೇನೆ ಎಂದು ಹೇಳುತ್ತಾ, ಜನರಿಂದಲೇ ಹಣ ಸಂಗ್ರಹಿಸಿ ಚುನಾವಣೆಯಲ್ಲಿ ಜಯಗಳಿಸಿದರು. ಎರಡು ವರ್ಷಗಳು ಪೂರ್ಣಗೊಳ್ಳುತ್ತಿದ್ದಂತೆ ಭ್ರಷ್ಟಾಚಾರ ಮಾಡುವುದಕ್ಕೆ ಅಧಿಕಾರಿಗಳಿಗೆ ಕುಮಕ್ಕು ನೀಡಿ, ಹಣ ವಸೂಲಿ ಮಾಡುವುದರ ಮೂಲಕ ಮಂಗಳೂರು, ಉಡುಪಿ ಹಾಗೂ ಸಾಗರ ಭಾಗದಲ್ಲಿ ಹತ್ತಾರು ಕೋಟಿ ರುಗಳ ಆಸ್ತಿ ಖರೀದಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.ಚುನಾವಣೆಯಲ್ಲಿ ಹಣವೇ ಇಲ್ಲವೆಂದು ಜನರ ಮುಂದೆ ಅಂಗಲಾಚಿದ ಶಾಸಕ, ಎರಡೇ ವರ್ಷದಲ್ಲಿ ಯಾವ ಐಟಿ ಬಿಟಿ ಕಂಪನಿಗಳನ್ನು ಪ್ರಾರಂಭ ಮಾಡಿ ಹಣ ಸಂಪಾದನೆ ಮಾಡಿ ಆಸ್ತಿ ಖರೀದಿ ಮಾಡುತ್ತಿದ್ದಾರೆ.
ಶಾಸಕರು ಭ್ರಷ್ಟಾಚಾರದ ಮೂಲಕ ಆಸ್ತಿ ಖರೀದಿ ಮಾಡುವುದನ್ನು ಬಿಟ್ಟು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಗಳ ಅಭಿವೃದ್ಧಿ ಹಾಗೂ ಆಸ್ಪತ್ರೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗಲಿ ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಕುಮಾರ್ ಗೌಡ, ಆನಂದಪುರ ಗ್ರಾಪಂ ಅಧ್ಯಕ್ಷಕೆ.ಗುರುರಾಜ, ದಲಿತ ಸಂಘದ ಮುಖಂಡ ರೇವಪ್ಪ ಹೊಸಕೊಪ್ಪ ಉಪಸ್ಥಿತರಿದ್ದರು.