ನಾರಾಯಣ ಗುರು ವಸತಿ ಶಾಲೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸದಿದ್ದರೆ ಪ್ರತಿಭಟನೆ

KannadaprabhaNewsNetwork |  
Published : Jul 15, 2026, 02:30 AM IST
ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿದರು. | Kannada Prabha

ಸಾರಾಂಶ

ಆದಷ್ಟು ಬೇಗ ಶಾಸಕರು ನಾರಾಯಣ ಗುರು ವಸತಿ ಶಾಲೆಯ ಕಟ್ಟಡ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ.

ಮಾಜಿ ಶಾಸಕ ಸುನೀಲ ನಾಯ್ಕ ಎಚ್ಚರಿಕೆ: ಹೊಸ ಕಟ್ಟಡ, ಬಾಡಿಗೆ ಕಟ್ಟಡ ವೀಕ್ಷಿಸಿ ವಿದ್ಯಾರ್ಥಿಗಳ ಜತೆ ಸಮಾಲೋಚನೆ

ಕನ್ನಡಪ್ರಭ ವಾರ್ತೆ ಭಟ್ಕಳ

ನಾನು ಶಾಸಕನಾಗಿದ್ದ ಸಂದರ್ಭ ಶ್ರಮವಹಿಸಿ ಮಂಜೂರಿಸಿಕೊಂಡು ಬಂದಿದ್ದ ಶ್ರೀ ನಾರಾಯಣ ಗುರು ವಸತಿ ಶಾಲೆಯ ನೂತನ ಕಟ್ಟಡ ಪೂರ್ಣಗೊಂಡಿದ್ದರೂ ವಸತಿ ಶಾಲೆಯ ಬಾಡಿಗೆ ಕಟ್ಟಡದಲ್ಲೇ ಮುಂದುವರಿಯುತ್ತಿದ್ದು, ಆದಷ್ಟು ಬೇಗ ಶಾಸಕರು ನಾರಾಯಣ ಗುರು ವಸತಿ ಶಾಲೆಯ ಕಟ್ಟಡ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಎಚ್ಚರಿಸಿದ್ದಾರೆ.

ಜಾಲಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ನಾರಾಯಣ ಗುರು ವಸತಿ ಶಾಲೆಯ ಕಟ್ಟಡ ಮತ್ತು ಪುರವರ್ಗದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ನಾರಾಯಣ ಗುರು ವಸತಿ ಶಾಲೆ ವೀಕ್ಷಿಸಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಮಾತನಾಡಿದರು.

ನಾರಾಯಣ ಗುರು ವಸತಿ ಶಾಲೆಯ ಹೊಸ ಕಟ್ಟಡವನ್ನು ಪೂರ್ಣಗೊಳಿಸಿ 6 ತಿಂಗಳು ಕಳೆದರೂ ಸಹ ಇನ್ನೂ ತನಕ ಬಾಡಿಗೆ ಕಟ್ಟಡದಲ್ಲಿರುವ ಆ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿಲ್ಲ. ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ನಾರಾಯಣ ಗುರು ವಸತಿ ಶಾಲೆಯಲ್ಲಿ ಜಾಗದ ಕೊರತೆ ಹಾಗೂ ಮೂಲಭೂತ ಸೌಕರ್ಯಗಳ ಅಭಾವದಿಂದ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಒಂದೇ ಕೊಠಡಿಯಲ್ಲಿ ಸುಮಾರು 30 ವಿದ್ಯಾರ್ಥಿಗಳು ಮಲಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ಶಾಸಕನಾಗಿದ್ದ ಸಂದರ್ಭ ರಾಜ್ಯಕ್ಕೆ ಮಂಜೂರಾದ ನಾಲ್ಕು ವಸತಿ ಶಾಲೆಗಳ ಪೈಕಿ ಒಂದನ್ನು ಭಟ್ಕಳ ಕ್ಷೇತ್ರಕ್ಕೆ ತರಲು ವಿಶೇಷ ಪ್ರಯತ್ನ ಮಾಡಿದ್ದೆ. ಆರಂಭದಲ್ಲಿ ₹28 ಕೋಟಿ ವೆಚ್ಚದಲ್ಲಿ ಯೋಜನೆ ರೂಪಗೊಂಡಿದ್ದು, ನಂತರ ₹13 ಕೋಟಿ ಅನುದಾನ ಬಿಡುಗಡೆಯಾಗಿ ಕಟ್ಟಡ ಕಾಮಗಾರಿ ಆರು ತಿಂಗಳ ಹಿಂದೆಯೇ ಪೂರ್ಣಗೊಂಡಿದೆ. ಆದರೆ ಕಟ್ಟಡ ಉದ್ಘಾಟನೆ ಮಾಡಿದರೆ ನನಗೆ ಕೀರ್ತಿ ಸಿಗುತ್ತದೆ ಎಂಬ ಕಾರಣಕ್ಕೆ ಶಾಸಕ ಮಂಕಾಳ ವೈದ್ಯ ಉದ್ದೇಶಪೂರ್ವಕವಾಗಿ ಉದ್ಘಾಟನೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಲೆ ಮಂಜೂರಿಸಿದ ಕೀರ್ತಿ ನನಗೆ ಬರುತ್ತದೆ ಎಂಬ ಭಯ ಇದ್ದರೆ ನಾನು ಉದ್ಘಾಟನೆ ಕಾರ್ಯಕ್ರಮಕ್ಕೆ ಬರುವುದಿಲ್ಲ. ನನ್ನ ಹೆಸರಿನ ಬ್ಯಾನರ್‌ಗಳನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಕಬಾರದು ಎಂದು ನಾನು ನನ್ನ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ಕಾಂಪೌಂಡ್ ಕಾಮಗಾರಿ ಪೂರ್ಣವಾಗಿಲ್ಲ ಎಂಬ ನೆಪ ಹೇಳಲಾಗುತ್ತಿದೆ. ಅದಕ್ಕೆ ಸರ್ಕಾರದ ಬಳಿ ಹಣವಿಲ್ಲದಿದ್ದರೆ ನನ್ನ ಸ್ವಂತ ಖರ್ಚಿನಲ್ಲಿ ಕಾಂಪೌಂಡ್ ನಿರ್ಮಿಸಿಕೊಡಲು ಸಿದ್ಧನಿದ್ದೇನೆ. ಆದರೆ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ವಿಚಾರದಲ್ಲಿ ರಾಜಕೀಯ ಮಾಡಬಾರದು. ನಾರಾಯಣ ಗುರು ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕಿದೆ ಎಂದರು.

ಈ ಸಂದರ್ಭ ವಿದ್ಯಾರ್ಥಿಗಳ ಪಾಲಕರು, ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಪ್ರಮೋದ್ ಜೋಶಿ, ವಸಂತ ನಾಯ್ಕ, ರಾಮಚಂದ್ರ ನಾಯ್ಕ, ಮಾಸ್ತಿ ಗೊಂಡ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಗಾರು ಹಂಗಾಮಿನಲ್ಲೇ ಬರಿದಾದ ಚೆಕ್‌ ಡ್ಯಾಂಗಳು
15ನೇ ಹಣಕಾಸು ಅನುದಾನ ವಿಳಂಬ: ಸಂಕಷ್ಟದಲ್ಲಿ ಗ್ರಾಮ ಪಂಚಾಯಿತಿಗಳು