ವಕ್ಫ್‌ ಕಾಯ್ದೆ ತಿದ್ದುಪಡಿ ಖಂಡಿಸಿ ಬೇಲೂರಲ್ಲಿ ಪ್ರತಿಭಟನೆ

KannadaprabhaNewsNetwork | Published : Apr 16, 2025 12:35 AM

ಸಾರಾಂಶ

ಕೇಂದ್ರ ಸರ್ಕಾರ ವಕ್ಛ್ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ ತಾಲೂಕಿನ ವಿವಿಧ ಮುಸ್ಲಿಂ ಮಸೀದಿಗಳ ಒಕ್ಕೂಟದಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ತಾಲೂಕಿನ ವಿವಿಧ ಮುಸ್ಲಿಂ ಮಸೀದಿಗಳ ಒಕ್ಕೂಟದಿಂದ ಬೃಹತ್‌ ಪ್ರತಿಭಟನೆ, ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಬೇಲೂರು

ಕೇಂದ್ರ ಸರ್ಕಾರ ವಕ್ಛ್ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ ತಾಲೂಕಿನ ವಿವಿಧ ಮುಸ್ಲಿಂ ಮಸೀದಿಗಳ ಒಕ್ಕೂಟದಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಹೊರಟು ಮುಖ್ಯರಸ್ತೆ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಎಂ. ಮಮತಾ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆ ಉದ್ದೇಶಿಸಿ ಪ್ರಗತಿಪರ ಸಂಘಟನೆಗಳ ಮುಖಂಡ ಅಬ್ದುಲ್ ಸಮದ್ ಮಾತನಾಡಿ, ಕೇಂದ್ರ ಸರ್ಕಾರ ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಿ ಸಾಮರಸ್ಯಕ್ಕೆ ಬೆಂಕಿ ಇಡುತ್ತಿದೆ. ನಮ್ಮನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮುಗಿಸುವ ಉದ್ದೇಶದಿಂದ ಹತ್ತಾರು ಮಸೂದೆಗಳನ್ನು ತರುತ್ತಿದೆ. ನಮ್ಮ ಪೂರ್ವಿಕರು ದಾನವಾಗಿ ನೀಡಿದ ಆಸ್ತಿಯ ಮೇಲೆ ವಕ್ಪ್ ತಿದ್ದುಪಡಿ ಮಸೂದೆಯನ್ನು ತನ್ನದೆ ಬಹುಮತವಿದೆ ಎಂಬ ದರ್ಪದಿಂದ ತಂದಿದೆ. ಜೆಪಿಗೆ ಬಹುಮತವಿದ್ದರೆ ನಮಗೆ ಹೋರಾಟ ನಡೆಸಲು ಹಲವು ದಾರಿಗಳಿವೆ. ಮಸೂದೆ ವಾಪಸು ಪಡೆಯುವ ತನಕ ನಿರಂತರ ಈ ಹೋರಾಟ ನಡೆಯಲಿದೆ ಎಂದು ಹೇಳಿದರು.

ಬೇಲೂರು-ಹಳೆಬೀಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್‌ ತೌಫೀಕ್ ಮಾತನಾಡಿ, ಕೇಂದ್ರ ಸರ್ಕಾರದ ಹೊಸ ಮಸೂದೆಯ ಪ್ರಕಾರ ಮುಸ್ಲಿಮೇತರರು ಕೂಡ ಸಮಿತಿಗೆ ಇರುತ್ತಾರೆ ಎಂಬ ಹತ್ತಾರು ಷರತ್ತುಗಳಿಂದ ಅನಾದಿಕಾಲದಿಂದ ಸಂರಕ್ಷಣೆ ಮಾಡಿದ ವಕ್ಫ್ ಆಸ್ತಿಗಳನ್ನು ಕಬಳಿಸುವ ಹುನ್ನಾರವನ್ನು ಕೇಂದ್ರ ಬಿಜೆಪಿ ಮಾಡುತ್ತಿದೆ. ಕೇಂದ್ರದಿಂದ ಹಣ ಪಡೆದು ಕೆಲ ಮುಸ್ಲಿಮರು ಮಸೂದೆ ಸ್ವಾಗತಿಸಿದ್ದೇವೆ‌ ಎಂದಿದ್ದಾರೆ. ಸುಳ್ಳು ಪ್ರಚಾರ ನಡೆಸುತ್ತಿರುವವರು ಮುಸ್ಲಿಮರಲ್ಲ ಡೋಂಗಿಗಳು ಎಂದು ಕಿಡಿಕಾರಿದರು.

ಪುರಸಭಾ ಸದಸ್ಯ ಜಮಾಲ್ಲುದ್ದಿನ ಮಾತನಾಡಿ, ವಕ್ಪ್ ಬಹುತೇಕ ಆಸ್ತಿಗಳಲ್ಲಿ ಸ್ಮಶಾನ ಇರುವ ಭಾವನಾತ್ಮಕ ಜಾಗವನ್ನು ನೀಡುವುದಿಲ್ಲ. ಕೇಂದ್ರ ಬಿಜೆಪಿ ಸರ್ಕಾರವು ಒಂದಲ್ಲ ಒಂದು ಮಸೂದೆ ತಂದು ಮುಸ್ಲಿಂ ಜನಾಂಗವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮ ಸಂಘಟನೆ ಬಲಿಷ್ಠವಾಗಿದ್ದು ಯಾವುದೇ ಕಾರಣಕ್ಕೂ ಬಗ್ಗುವ ಪ್ರಶ್ನೆಯೇ ಇಲ್ಲ ಎಂದರು.

ಸಂದರ್ಭದಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮುಸ್ಲಿಂ ಜನಾಂಗದವರು ಭಾಗವಹಿಸಿದ್ದು ವಿಶೇಷವಾಗಿತ್ತು. ಬೇಲೂರು ಪೊಲೀಸರು ಬಿಗಿ ಭದ್ರತೆ ನೀಡುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ನವೀದ್, ಅಕ್ರಮಪಾಷ, ಅಬ್ದುಲ್ ಖಾದರ್, ಅಬ್ರಹಾರ್, ನೂರ್ ಅಹಮದ್, ಅಬ್ದುಲ್ ಲತೀಫ್, ಸುಲೆಮಾನ್, ದಾವೂದ್, ಇಪ್ರಾನ್,ಜಾಕೀರ್‌ ಇನ್ನು ಮುಂತಾದವರು ಹಾಜರಿದ್ದರು.

Share this article