ನರೇಗಾ: ಟ್ರ್ಯಾಕ್ಟರ್ ಬಾಡಿಗೆ ಹಣ ಪಾವತಿಸಿ

KannadaprabhaNewsNetwork | Published : Apr 16, 2025 12:35 AM

ಸಾರಾಂಶ

೨೦೨೨-೨೩ ಹಾಗೂ ೨೦೨೩-೨೪ರಲ್ಲಿಯೇ ನರೇಗಾ ಕಾಮಗಾರಿಗೆ ಟ್ರ್ಯಾಕ್ಟರ್ ಬಾಡಿಗೆ ಪೂರೈಕೆ ಮಾಡಿದ್ದೇವೆ. ನರೇಗಾ ಕಾಮಗಾರಿಯ ಒಟ್ಟು ₹ ೬೨ ಲಕ್ಷ ಖೋಟಿ ಬಿಲ್ ಮಾಡಿ ಹಣ ಎತ್ತುವಳಿ ಮಾಡಿದ್ದಾರೆ. ಆದರೆ, ನಮ್ಮ ಪಾಲಿನ, ಕಾಮಗಾರಿಗೆ ಟ್ರ್ಯಾಕ್ಟರ್ ಪೂರೈಸಿದ ರೈತರಿಗೆ ₹ ೧೨ ಲಕ್ಷ ಬಾಕಿ ಉಳಿಸಿಕೊಂಡಿದ್ದಾರೆ.

ಕಾರಟಗಿ:

ನರೇಗಾ ಯೋಜನೆಯಡಿ ತಾಲೂಕಿನ ಗುಂಡೂರು ಗ್ರಾಮ ಪಂಚಾಯಿತಿಗೆ ಕಾಮಗಾರಿ ಮಾಡಲು ಟ್ರ್ಯಾಕ್ಟರ್ ಬಾಡಿಗೆ ನೀಡಿದ ರೈತರಿಗೆ ₹ 12 ಲಕ್ಷ ಪಾವತಿಸಬೇಕೆಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಎದುರು ರೈತರು ಅಡುಗೆ ಪಾತ್ರೆ ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

೨೦೨೨-೨೩ ಹಾಗೂ ೨೦೨೩-೨೪ರಲ್ಲಿಯೇ ನರೇಗಾ ಕಾಮಗಾರಿಗೆ ಟ್ರ್ಯಾಕ್ಟರ್ ಬಾಡಿಗೆ ಪೂರೈಕೆ ಮಾಡಿದ್ದೇವೆ. ನರೇಗಾ ಕಾಮಗಾರಿಯ ಒಟ್ಟು ₹ ೬೨ ಲಕ್ಷ ಖೋಟಿ ಬಿಲ್ ಮಾಡಿ ಹಣ ಎತ್ತುವಳಿ ಮಾಡಿದ್ದಾರೆ. ಆದರೆ, ನಮ್ಮ ಪಾಲಿನ, ಕಾಮಗಾರಿಗೆ ಟ್ರ್ಯಾಕ್ಟರ್ ಪೂರೈಸಿದ ರೈತರಿಗೆ ₹ ೧೨ ಲಕ್ಷ ಬಾಕಿ ಉಳಿಸಿಕೊಂಡಿದ್ದಾರೆ. ಇಬ್ಬರಿಂದ ಮೂವರು ಪಿಡಿಒ, ಇಬ್ಬರು ಇಒ ಬದಲಾದರೂ ಹಣ ಪಾವತಿಯಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬಾಕಿ ವೇತನ ನೀಡುವವ ವರೆಗೂ ಹೋರಾಟದಿಂದ ಹಿಂದೇ ಸರಿಯುವುದಿಲ್ಲ. ಇಲ್ಲಿಯೇ ಪಾತ್ರೆ ತಂದಿದ್ದೇವೆ. ಇಲ್ಲಿಯೇ ಇದ್ದು ಹಣ ಪಾವತಿಸುವ ವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ನೇತೃತ್ವ ವಹಿಸಿದ್ದ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಎ. ಹುಲುಗಪ್ಪ, ತಾಲೂಕಾಧ್ಯಕ್ಷ ಲಕ್ಷ್ಮಣ ನಾಯಕ ಸಿಂಗನಾಳ ಹಾಗೂ ಕಾರ್ಮಿಕ ಮುಖಂಡ ತಿಮ್ಮಣ್ಣ ಪಟ್ಟು ಹಿಡಿದರು.

ಇಒ ಲಕ್ಷ್ಮೀದೇವಿ ರಜೆ ಇದ್ದ ಕಾರಣ ತಾಪಂ ಎಡಿ ವೈ. ವನಜಾ, ಟ್ರ್ಯಾಕ್ಟರ್‌ ಕಾಮಗಾರಿಗಳ ಕಡತ ಪರಿಶೀಲಿಸಲಾಗುತ್ತದೆ. ಇಒ ರಜೆಯಲ್ಲಿದ್ದು ಶನಿವಾರ ಬರುತ್ತಾರೆ. ಅಲ್ಲಿನ ಪಿಡಿಒ, ಜೆಇ, ವೆಂಡರ್‌ಗಳನ್ನು ಕರೆಸಿ ಚರ್ಚಿಸಲಾಗುವುದು. ನಿಮ್ಮ ಬಾಕಿ ಇದ್ದರೆ ತಲುಪಿಸಲು ಶ್ರಮಿಸುತ್ತೇನೆ ಎಂದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ಭರವಸೆ ನೀಡಿ ನಮ್ಮನ್ನು ಸಾಗು ಹಾಕುತ್ತಿದ್ದೀರಿ. ಆದರೆ, ನರೇಗಾದಿಂದ ಬಂದ ಹಣವನ್ನು ಪಂಚಾಯಿತಿ ಅಧ್ಯಕ್ಷೆಯ ಪತಿ, ಪಿಡಿಒ, ಜೆಇ ಹಾಗೂ ವೆಂಡರ್‌ ಹಂಚಿಕೊಂಡು ತಿಂದಿದ್ದಾರೆ ಎಂದ ಪ್ರತಿಭಟನಾಕಾರರು, ಜಿಲ್ಲಾ ಪಂಚಾಯಿತಿ ಕಚೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಮ್ಮ ಬಗ್ಗೆ ನಿಮಗೆ ಕಾಳಜಿ ಇದ್ದರೆ ಬುಧವಾರವೇ ಎಲ್ಲರನ್ನು ಕರೆಸಿ ಹಣ ಪಾವತಿಸಿ. ಇಲ್ಲದಿದ್ದರೆ ಶನಿವಾರ ವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಪಟ್ಟು ಹಿಡಿದರು.

ಪ್ರತಿಭಟನೆಯಲ್ಲಿ ಲಕ್ಷ್ಮಣ ನಾಯಕ, ಕಾರ್ಯದರ್ಶಿ ಮಲ್ಲಯ್ಯ ಯರಡೋಣಾ, ಸದಸ್ಯರಾದ ಮಂಜುನಾಥ ಗುಂಡೂರು, ಯಮನಮ್ಮ ಗುಂಡೂರು, ಹೊಳೆಯಮ್ಮ ಗುಂಡೂರು, ಜಗನ್ನಾಥ್ ಸಿಂಗನಾಳ, ನಾಗರಾಜ್ ಗುಂಡೂರು, ವೀರೇಶ ಗುಂಡೂರು, ತಿಮ್ಮಣ್ಣ ಗುಂಡೂರು, ನಿರುಪಾದಿ ಗುಂಡೂರು, ಯಮನೂರಪ್ಪ ಸಿಂಗನಾಳ ಇದ್ದರು.

Share this article