- ವಿಪ ಸದಸ್ಯ ಡಾ.ಎಂ.ಜಿ.ಮೂಳೆ ಸಲಹೆ । ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪತ್ತಿನ ಸಹಕಾರ ಸಂಘ ಉದ್ಘಾಟನೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ದೇಶದ ಇತಿಹಾಸದಲ್ಲಿ ಮರಾಠಿಗರಿಗೆ ವಿಶೇಷ ಸ್ಥಾನಮಾನಗಳಿದ್ದು, ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹೆಚ್ಚು ಅಭಿವೃದ್ಧಿ ಹೊಂದಬೇಕಾಗಿದೆ ಎಂದು ವಿಧಾನ ಪರಿಷತ್ತು ಸದಸ್ಯ ಡಾ. ಎಂ.ಜಿ. ಮೂಳೆ ಹೇಳಿದರು.ಹೊನ್ನಾಳಿ ಹಿರೇಕಲ್ಮಠದ ಸಮುದಾಯ ಭವನದಲ್ಲಿ ನಡೆದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ನೂತನ ಸಂಘಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಹಕಾರ ಸಂಘ ಯಶಸ್ವಿಯಾಗಿ ನಡೆಸಿಕೊಂಡು ಹೋಗುವುದು ತುಂಬಾ ಕಷ್ಟದ ಕೆಲಸವಾಗಿದೆ. ಸಹಕಾರ ಸಂಘ ಯಶಸ್ವಿ ಆಗಬೇಕಾದರೆ ಅದಕ್ಕೆ ನಿರ್ದೇಶಕರ ಎಲ್ಲ ರೀತಿಯ ಸಹಕಾರ ಅಗತ್ಯ. ಸಂಘದಿಂದ ಆರ್ಥಿಕ ಸಹಾಯ ಪಡೆದವರು ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು. ಇದರಿಂದ ಮಾತ್ರ ಸಂಘ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದರು.ದೇಶದ ಇತಿಹಾಸದಲ್ಲಿ ಮೊಗಲರ ವಿರುದ್ಧ ಹೋರಾಡಿದಮ ಹಿಂದುತ್ವದ ಉಳಿವಿಗೆ ವಿಶೇಷ ಕೊಡುಗೆ ನೀಡಿದ ಛತ್ರಪತಿ ಶಿವಾಜಿ ಅವರ ತಂದೆ ಷಹಾಜಿರಾಜ್ ಭೋಸ್ಲೆ ಸಮಾಧಿ ಚನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿದೆ. ಪ್ರವಾಸಿ ತಾಣವಾಗಿ ಗಮನ ಸೆಳೆಯಬೇಕಿದ್ದ ಈ ಸ್ಥಳವು ಪ್ರಸ್ತುತ ಅತ್ಯಂತ ದುಸ್ಥಿತಿಯಲ್ಲಿ ಇರುವುದು ನೋವಿನ ಸಂಗತಿ ಎಂದು ಹೇಳಿದರು.
ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹಾಗೂ ದಾವಣಗೆರೆ ಜಿಲ್ಲೆ ಶಾಸಕರು ಆತ್ಮೀಯ ಗೆಳೆಯರಾಗಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಮರಾಠ ಸಮಾಜ ಷಹಾಜಿರಾಜೇ ಭೋಸ್ಲೆ ಸಮಾಧಿ ಸ್ಥಳ ಜೀರ್ಣೋದ್ಧಾರ ಕೆಲಸಕ್ಕೆ ಮುಂದಾಗಬೇಕಿದೆ. ದಾವಣಗೆರೆ ಜಿಲ್ಲೆಯ ಎಲ್ಲ ಶಾಕರೂ ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ನೂತನ ಸಂಘದ ಅಧ್ಯಕ್ಷ ಎಚ್.ಜಿ. ದೇವರಾಜ್ ನೆಲಹೊನ್ನೆ ಅಧ್ಯಕ್ಷತೆ ವಹಿಸಿ, ಈ ಸಂಘದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅರ್ಥಿಕ ಸಹಾಯ ನೀಡುವ ಜೊತೆಗೆ ಮರಾಠ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿ, ಸಂಘಕ್ಕೆ ಶುಭ ಹಾರೈಸಿದರು. ಮರಾಠ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತೀ ಸ್ವಾಮಿಜಿ ಸಹಕಾರ ಸಂಘದ ಕಚೇರಿ ಉದ್ಘಾಟಿಸಿದರು.ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಬೆಂಗಳೂರಿನ ವೀರ ಶಿವಾಜಿ ಸೇನೆ ಅಧ್ಯಕ್ಷ ಕಮೇಲೇಶ್ ರಾವ್, ಹೊನ್ನಾಳಿ ತಾಲೂಕು ಮರಾಠ ಸಮಾಜ ಅಧ್ಯಕ್ಷ ಎ.ಆರ್. ಚಂದ್ರಶೇಖರಪ್ಪ, ದಾವಣಗೆರೆ ಜಿಲ್ಲೆ ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್, ಚನ್ನಗಿರಿ ಮರಾಠ ಸಮಾಜದ ಅಧ್ಯಕ್ಷ ಶಿವಾಜಿ ರಾವ್, ತಾಲೂಕು ಮರಾಠ ಸಮಾಜದ ಉಪಾಧ್ಯಕ್ಷ ಸುರೇಶ್ ಕೆ., ಪದಾಧಿಕಾರಿಗಳು, ಕವಿತ ಪುರಕ್ಕನವರ್, ಚನ್ನಗಿರಿ ವಕೀಲರಾದ ರಾಮಚಂದ್ರ ರಾವ್, ಶಿವಾಜಿ ರಾವ್ ಭೋಸ್ಲೆ ಭದ್ರಾವತಿ ಮಾತನಾಡಿದರು. ಮುಖಂಡರು, ಸಮಾಜ ಬಾಂಧವರು ಭಾಗವಹಿಸಿದ್ದರು.
ಕಾರ್ಯಕ್ರಮ ಅಂಗವಾಗಿ ಮರಾಠ ಸಮುದಾಯದಿಂದ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ವಿವಿಧ ವಾದ್ಯ ಮೇಳಗಳೊಂದಿಗೆ ಹಿರೇಕಲ್ಮಠದ ಸಮುದಾಯ ಭವನದವರೆಗೆ ಮೆರವಣಿಗೆ ನಡೆಯಿತು.- - -
-12ಎಚ್.ಎಲ್.ಐ1: ಶ್ರೀ ಛತ್ರಪತಿ ಶಿವಾಜಿ ಸಹಕಾರ ಸಂಘವನ್ನು ವಿಪ ಸದಸ್ಯ ಡಾ. ಎಂ.ಜಿ. ಮೂಳೆ ಉದ್ಘಾಟಿಸಿದರು.