ಕನ್ನಡಪ್ರಭ ವಾರ್ತೆ, ತರೀಕೆರೆ
ಸಂಘ ಪರಿವಾರದವರು ನಡೆಸುವ ದಾರ್ಮಿಕ ಕಾರ್ಯಗಳನ್ನು ನಾವು ವಿರೋಧಿಸುವುದಿಲ್ಲ. ಆದರೆ ಸಮ ಸಮಾಜದ ನಿರ್ಮಾಣದ ಕನಸ್ಸು ಹೊಂದಿರುವ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾವಣೆಗೆ ಮುಂದಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಲ್.ಎಸ್. ಶ್ರೀಕಾಂತ್ ಎಚ್ಚರಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಕೋಮುವಾದ ಧಿಕ್ಕರಿಸಿ-ಸಂವಿಧಾನ ರಕ್ಷಿಸಿ ದಲಿತರ ಅಭಿವೃದ್ಧಿಗೆ ಜನಕ್ರಾಂತಿ ಸಮಾವೇಶದ ಬೆಂಗಳೂರು ಚಲೋ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.ಸಂಘ ಪರಿವಾರದವರು ಇತ್ತೀಚೆಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಕೆಲವು ಮಠಾಧೀಶರು ಧಾರ್ಮಿಕ ಸಭೆಯಲ್ಲಿ ಹಿಂದೂ ರಾಷ್ಟ್ರಕ್ಕಾಗಿ 501 ಪುಟಗಳ ಸಂವಿಧಾನವನ್ನೇ ಸಿದ್ಧಪಡಿಸಿದೆ. ಅದನ್ನು ಶೀಘ್ರ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ. ಈ ಸಂವಿಧಾನ ನೋಡಿದರೆ ಮತ್ತೆ ವೈದಿಕ ಧರ್ಮ ಮರು ಸ್ಥಾಪಿಸುವ ಕುಯುಕ್ತಿ ನಡೆಯುತ್ತಿದೆ ಎಂದರು.ರಾಜ್ಯ ಸಮಿತಿ ಆಶ್ರಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಕೋಮುವಾದ ಧಿಕ್ಕರಿಸಿ, ಸಂವಿಧಾನ ರಕ್ಷಿಸಿ ಹಾಗೂ ದಲಿತರ ಅಭಿವೃದ್ಧಿಗೆ ಕೆಲವು ಹಕ್ಕೊತ್ತಾಯಗಳ ಪರಿಹಾರಕ್ಕಾಗಿ ಜನಕ್ರಾಂತಿ ಸಮಾವೇಶವನ್ನು ಏಪ್ರಿಲ್ 23ರ ಬುಧವಾರ 11 ಗಂಟೆಗೆ ಬೆಂಗಳೂರಿನ ಸುಮನಹಳ್ಳಿ (ಸಿಗ್ನಲ್), ಮಾಗಡಿ ರಸ್ತೆಯಲ್ಲಿರುವ ಬಾಬು ಜಗಜೀವನರಾಂ ಸಂಶೋಧನಾ ಕೇಂದ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದಸಂಸ ಪದಾಧಿಕಾರಿಗಳು, ಕಾರ್ಯಕರ್ತರು, ವಿದ್ಯಾರ್ಥಿ ಸಹೋದರರು, ಪ್ರಗತಿಪರ ಚಿಂತಕರು, ಅಲ್ಪಸಂಖ್ಯಾತ ಪ್ರಜ್ಞಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಸಭೆಯಲ್ಲಿ ಕೋರಿದರು.ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ರವಿಶಂಕರ್, ತಾಲೂಕು ಸಂಚಾಲಕ ಮಂಜಪ್ಪ ವೈ.ಎಸ್., ಸಂಘಟನಾ ಸಂಚಾಲಕರಾದ ಸುನೀಲ್ ಕುಮಾರ್ ವೈ.ಎಂ., ಶಂಕರನಾಯ್ಕ, ಟಿ. ರಘು, ನಗರ ಸಂಚಾಲಕ ಶಿವರಾಜ್ ಮುಖಂಡ ರಾದ ಕುಮಾರಣ್ಣ, ಎಲ್.ಜಿ. ಸುರೇಶ್, ಶಿವಮೂರ್ತಿ, ಜಿ.ಟಿ. ರಮೇಶ್, ಎಸ್.ಎನ್. ಸಿದ್ರಾಮಪ್ಪ ಮೊದಲಾದವರಿದ್ದರು. 15ಕೆಟಿಆರ್.ಕೆ.10ಃ
ತರೀಕೆರೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಕೋಮುವಾದ ಧಿಕ್ಕರಿಸಿ-ಸಂವಿಧಾನ ರಕ್ಷಿಸಿ ದಲಿತರ ಅಭಿವೃದ್ಧಿಗಾಗಿ ಜನಕ್ರಾಂತಿ ಸಮಾವೇಶದ ಬೆಂಗಳೂರು ಚಲೋ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಲಾಯಿತು.