ಕನ್ನಡಪ್ರಭ ವಾರ್ತೆ ಬೀದರ್
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದೇವನೂರ ಗ್ರಾಮದ ಅರ್ಜುನಪ್ಪಾ ಹಣಮಂತ ಮಡಿವಾಳ ಇವರನ್ನು ಅಪಹರಿಸಿ ಮನೆಯಲ್ಲಿ ಕೂಡಿ ಹಾಕಿ ಬೆತ್ತಲೆಗೊಳಿಸಿ ಕಟ್ಟಿಗೆಯಿಂದ ಮೈಯಲ್ಲಾ ಬರೆ ಬರುವಂತೆ ಹೊಡೆದು ವಿದ್ಯುತ್ ಹರಿಸುವ ಬ್ಯಾಟರಿಯಿಂದ ಗುಪ್ತಾಂಗಳಿಗೆ ವಿದ್ಯುತ್ ಹರಿಸಿ ಎರಡು ದಿನಗಳ ಕಾಲ ಪ್ರಾಣ ಹೋಗುವ ರೀತಿಯಲ್ಲಿ ಹಿಂಸೆ ಕೊಟ್ಟಿದ್ದಾರೆ. ಆಹಾರ ಮತ್ತು ನೀರನ್ನು ಕೊಡದೆ ಚಿತ್ರ ಹಿಂಸೆಯನ್ನು ನೀಡಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದನ್ನು ನೋಡಿದರೆ ಹೃದಯ ವಿದ್ರಾವಕ ಎನಿಸುತ್ತದೆ. ಇದೊಂದು ವಿಷಾದಕರ ಸಂಗತಿ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸಹ ತಲೆ ತಗ್ಗಿಸುವಂತಹ ವಿಷಯವಾಗಿದೆ. ಇದನ್ನು ಕಂಡು ಸಮಾಜದ ಜನರು ಭಯ ಭೀತರಾಗಿದ್ದಾರೆ. ನಿರ್ಭಿತಿಯಿಂದ ಯಾವುದೇ ವ್ಯವಹಾರಗಳಲ್ಲಿ ತೊಡಗಿಸಲು ಹೆದರಿಕೊಳ್ಳುತ್ತಿದ್ದಾರೆ.
ಈ ಕೃತ್ಯ ಮಾಡಿದವರನ್ನು ಕೂಡಲೇ ಬಂಧಿಸಿ ಅವರ ಮೇಲೆ ಕಾನೂನಿನ ಸೂಕ್ತ ಕ್ರಮ ಕೈಗೊಂಡು ಅರ್ಜುನ ಹಣಮಂತಪ್ಪಾ ಮಡಿವಾಳಗೆ ನ್ಯಾಯವನ್ನು ಒದಗಿಸಿಕೊಡಬೇಕು. ಅವರಿಗೆ ಜೀವ ಬೇದರಿಕೆ ಇರುವ ಕಾರಣ ಪೊಲೀಸ್ ಇಲಾಖೆ ರಕ್ಷಣೆ ವ್ಯವಸ್ಥೆ ಮಾಡಿಕೊಡಬೇಕೆಂದು ಎಂದು ಆಗ್ರಹಿಸಲಾಯಿತು.ನಗರದ ಮಡಿವಾಳ ವೃತ್ತದಿಂದ ಮೆರವಣಿಗೆಯ ಮೂಲಕ ಡಾ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆಯ ಮೂಲಕ ತೆರಳಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.