ಶುದ್ಧ ಗಾಳಿ, ನೀರಿಗೆ ಬೀದರ್‌ಗೆ ಆಗಮಿಸಿ ಪ್ರತಿಭಟನೆ

KannadaprabhaNewsNetwork |  
Published : Oct 06, 2026, 01:30 AM IST
ಚಿತ್ರ 5ಬಿಡಿಆರ್2ಹುಮನಾಬಾದ್‌ ಕೈಗಾರಿಕಾ ಪ್ರದೇಶವನ್ನು ಕೆಂಪು ವಲಯದ ಕೈಗಾರಿಕೆಗಳನ್ನು ಶಾಶ್ವತವಾಗಿ ಮುಚ್ಚಿ ಸ್ಥಳಾಂತರಿಸಲು ಆಗ್ರಹಿಸಿ  ಮಾಣಿಕನಗರದ ಆನಂದರಾಜ್‌ ಮಾಣಿಕಪ್ರಭು ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಹುಮನಾಬಾದ್‌ ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶಗಳಲ್ಲಿರುವ ಕಾರ್ಖಾನೆಗಳಿಂದ ಪರಿಸರ ಮಾಲಿನ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಗಡವಂತಿ, ಮಾಣಿಕನಗರ, ಮೊಳಕೇರಾ ಮತ್ತು ಬಸಂತಪುರ ಗ್ರಾಮಗಳಲ್ಲಿ ನೀರು ಮತ್ತು ಗಾಳಿ ಕಲುಷಿತಗೊಂಡು ಅನೇಕ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಆರೋಪಿಸಿ ಸೋಮವಾರ ಬೀದರ್‌ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಹುಮನಾಬಾದ್‌ ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶಗಳಲ್ಲಿರುವ ಕಾರ್ಖಾನೆಗಳಿಂದ ಪರಿಸರ ಮಾಲಿನ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಗಡವಂತಿ, ಮಾಣಿಕನಗರ, ಮೊಳಕೇರಾ ಮತ್ತು ಬಸಂತಪುರ ಗ್ರಾಮಗಳಲ್ಲಿ ನೀರು ಮತ್ತು ಗಾಳಿ ಕಲುಷಿತಗೊಂಡು ಅನೇಕ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಆರೋಪಿಸಿ ಸೋಮವಾರ ಬೀದರ್‌ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಶ್ರೀ ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ್‌ ಮಾಣಿಕಪ್ರಭು ನೇತೃತ್ವದಲ್ಲಿ ಹುಮನಾಬಾದ್‌ನಿಂದ ರೈಲಿನ ಮೂಲಕ ಬೀದರ್‌ಗೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಜನರು ಬೀದರ್‌ ರೈಲು ನಿಲ್ದಾಣದಿಂದ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಹುಮನಾಬಾದ್‌ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಕೆಂಪು ವಲಯದ ಕೈಗಾರಿಕೆಗಳನ್ನು ಶಾಶ್ವತವಾಗಿ ಮುಚ್ಚಿ, ಜನವಸತಿ ಹಾಗೂ ಜಲಮೂಲಗಳಿಂದ ದೂರದ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಹುಮನಾಬಾದ್‌ ಕೈಗಾರಿಕಾ ಪ್ರದೇಶದ ಮಾಲಿನ್ಯದಿಂದ ಈ ಭಾಗದ ಭೂಮಿ, ಗಾಳಿ ಹಾಗೂ ಜಲಮೂಲಗಳು ತೀವ್ರವಾಗಿ ಬಾಧಿತವಾಗಿವೆ, ಇದು ಹುಮನಾಬಾದ್‌ ತಾಲೂಕಿಗೆ ಮಾತ್ರ ಸೀಮಿತವಾಗಿರದೇ ಈ ಸಮಸ್ಯೆ, ಗುರುಗಂಗಾ ನದಿಯ ಮೂಲಕ ಕಾರಂಜಾ ಜಲಾಶಯಕ್ಕೂ ಪರಿಣಾಮ ಬೀರುತ್ತಿದ್ದು, ಇದರಿಂದ ಇಡೀ ಬೀದರ್‌ ಜಿಲ್ಲೆಯ ಜನಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ವಿವಿಧ ಅನಾರೋಗ್ಯ ಸಮಸ್ಯೆಗಳು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮಾಲಿನ್ಯ ಉಂಟು ಮಾಡುತ್ತಿರುವ ಕೆಲವು ಕೈಗಾರಿಕೆಗಳನ್ನು ಈಗಾಗಲೇ ಮುಚ್ಚಿರುವ ಕ್ರಮಕ್ಕೆ ಜಿಲ್ಲಾಡಳಿತದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿರುವ ಸಂಸ್ಥಾನ, ಮುಚ್ಚುವ ಆದೇಶದ ಬಳಿಕವೂ ಕೆಲವು ಘಟಕಗಳು ಮತ್ತೆ ಕಾರ್ಯಾರಂಭ ಮಾಡಿರುವುದು ಹಾಗೂ ಅವುಗಳ ಪುನರಾರಂಭಕ್ಕೆ ಅನುಮತಿ ನೀಡಿರುವುದು ಜನರಲ್ಲಿ ಮೂಡಿದ್ದ ನಿರಾಳತೆಯನ್ನು ಕುಂದಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಜನರು ಬಯಸುತ್ತಿರುವುದು ತಾತ್ಕಾಲಿಕ ಪರಿಹಾರವಲ್ಲ; ಈ ವಿಚಾರ ಅತ್ಯಂತ ಸೂಕ್ಷ್ಮವಾಗಿದ್ದು, ಜನರು ನಿರಂತರ ವಿಳಂಬದಿಂದ ಆತಂಕ ಹಾಗೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದು ಪ್ರತಿಭಟನಾಕಾರ ಮುಖಂಡರು ತಿಳಿಸಿದರು.

ಮನವಿಯ ಪ್ರತಿಯನ್ನು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರಿಗೂ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಾಣಿಕಪ್ರಭು ಸಂಸ್ಥಾನಾದ ಆನಂದರಾಜ್‌ ಪ್ರಭು, ಚೈತನ್ಯರಾಜ ಪ್ರಭು, ಮಾಜಿ ಸಚಿವರಾದ ರಾಜಶೇಖರ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯರಾದ ಭೀಮರಾವ್‌ ಪಾಟೀಲ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ಮನ್ನಾನ ಸೇಠ್‌, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಅಭಿಷೇಕ ಪಾಟೀಲ್‌, ಹುಮನಾಬಾದ್‌ ಪುರಸಭೆ ಮಾಜಿ ಸದಸ್ಯ ಕಾಳಪ್ಪ ಪಾಟೀಲ್‌, ಪ್ರಫುಲ್ಲ ರಾವಬಾ, ಬಾಬುರಾವ್‌ ತುಂಬಾ, ಓಂಕಾರ ತುಂಬಾ, ಸಿದ್ದಣ್ಣ ಭೂಶೆಟ್ಟಿ, ಹುಮನಾಬಾದ್‌, ಗಡವಂತಿ, ಮಾಣಿಕನಗರ, ಮೊಳಕೆರಾ ಮತ್ತು ಬಸಂತಪುರ ಗ್ರಾಮಗಳ ಗ್ರಾಮಸ್ಥರರು ಪಾಲ್ಗೊಂಡಿದ್ದರು.

------

ಹುಮನಾಬಾದ್‌ ಕೈಗಾರಿಕಾ ಪ್ರದೇಶವನ್ನು ಕೆಂಪು ವಲಯದ ಕೈಗಾರಿಕೆಗಳನ್ನು ಶಾಶ್ವತವಾಗಿ ಮುಚ್ಚಿ ಸ್ಥಳಾಂತರಿಸಲು ಆಗ್ರಹಿಸಿ ಮಾಣಿಕನಗರದ ಆನಂದರಾಜ್‌ ಮಾಣಿಕಪ್ರಭು ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲಿನಪುಡಿ ಕಲಬೆರಕೆ ಪ್ರಕರ: ಸಿಬಿಐಗೆ ವಹಿಸಲು ಆಗ್ರಹಿಸಿ ಪ್ರತಿಭಟನೆ
ಮನ್ಮುಲ್ ಅಕ್ರಮಗಳ ಕುರಿತು ತನಿಖೆಗೆ ಮಾಜಿ ಅಧ್ಯಕ್ಷ ಆಗ್ರಹ