ಅರಳಿಹಳ್ಳಿ ಬಾಲ್ಯ ವಿವಾಹ ಮುಕ್ತ ಗ್ರಾಪಂ ಆಗಿ ರೂಪಿಸಲು ಕ್ರಮ: ಶಿವಾಜಿ ಡಿಸಲೆ

KannadaprabhaNewsNetwork |  
Published : Oct 06, 2026, 01:30 AM IST
 ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ  ಭದ್ರಾವತಿ ಅರಳಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಆಶ್ರಿತ ಸಂಸ್ಥೆ ಸಹಯೋಗದೊಂದಿಗೆ ವಿಶೇಷ ಗ್ರಾಮ ಸಭೆ ಆಯೋಜಿಸಲಾಗಿತ್ತು.  | Kannada Prabha

ಸಾರಾಂಶ

ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಬಾಲ್ಯ ವಿವಾಹ ಮುಕ್ತ ಪಂಚಾಯಿತಿಯನ್ನಾಗಿ ರೂಪಿಸಲು ಈಗಾಗಲೇ ನಿರ್ಣಯಿಸಲಾಗಿದ್ದು, ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಬಂಧಪಟ್ಟ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಗ್ರಾಮಸ್ಥರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾಜಿ ಡಿಸಲೆ ಹೇಳಿದರು.

ಭದ್ರಾವತಿ: ತಾಲೂಕಿನ ಅರಳಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಬಾಲ್ಯ ವಿವಾಹ ಮುಕ್ತ ಪಂಚಾಯಿತಿಯನ್ನಾಗಿ ರೂಪಿಸಲು ಈಗಾಗಲೇ ನಿರ್ಣಯಿಸಲಾಗಿದ್ದು, ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಬಂಧಪಟ್ಟ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಗ್ರಾಮಸ್ಥರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾಜಿ ಡಿಸಲೆ ಹೇಳಿದರು.

ಅವರು ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಪಂಚಾಯಿತಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹಾತ್ಮ ಗಾಂಧೀಜಿಯವರ ಕಲ್ಪನೆಯಂತೆ ಗ್ರಾಮ ಸ್ವರಾಜ್ಯ ಎಂದರೆ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ, ಅದೊಂದು ಸಮಗ್ರ ವ್ಯಕ್ತಿ ಹಾಗೂ ಸಮಾಜದ ನೈತಿಕ, ಆರ್ಥಿಕ ಮತ್ತು ಸಾಮಾಜಿಕ ಸ್ವಾವಲಂಬನೆಯಾಗಿದೆ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದರು.

ಬಾಲ್ಯ ವಿವಾಹದಿಂದ ಉಂಟಾಗುವ ಸಾಮಾಜಿಕ, ಶೈಕ್ಷಣಿಕ ಹಾಗೂ ಕಾನೂನುಬದ್ಧ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.

ಈ ವಿಶೇಷ ಸಭೆಯ ಮೂಲಕ ಶಿವಮೊಗ್ಗ ಜಿಲ್ಲಾ ಆಶ್ರಿತ ಸಂಸ್ಥೆಯ ಸಹಯೋಗದಲ್ಲಿ, ಅರಳಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಬಾಲ್ಯ ವಿವಾಹ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಪ್ರತಿಜ್ಞಾ ನಿರ್ಣಯ ಕೈಗೊಳ್ಳಲಾಯಿತು.

ಆಶ್ರಿತ ಸಂಸ್ಥೆಯ ಜಿಲ್ಲಾ ಸಂಯೋಜಕ ಎಸ್. ಹನುಮಂತಪ್ಪ ಮಾತನಾಡಿ, ಬಾಲ್ಯ ವಿವಾಹಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ, ಮಕ್ಕಳಿಗೆ ಸೂಕ್ತ ಶಿಕ್ಷಣವನ್ನು ಕಲ್ಪಿಸುವುದು ಪೋಷಕರ ಪ್ರಾಥಮಿಕ ಜವಾಬ್ದಾರಿಯಾಗಿದೆ. ಪ್ರಸ್ತುತ ಸಾಮಾಜಿಕ ಮಾಧ್ಯಮಗಳ ಅತಿಯಾದ ಮತ್ತು ಮೇಲ್ವಿಚಾರಣೆಯಿಲ್ಲದ ಬಳಕೆಯಿಂದಾಗಿ ಮಕ್ಕಳು ಗ್ರೂಮಿಂಗ್ (Grooming), ಲೈಂಗಿಕ ದೌರ್ಜನ್ಯ ಹಾಗೂ ಮಾನವ ಕಳ್ಳಸಾಗಣಿಕೆಯಂತಹ ಗಂಭೀರ ಅಪಾಯಗಳಿಗೆ ಸಿಲುಕುವ ಸಾಧ್ಯತೆ ಇರುತ್ತದೆ. ಆದ್ದರಿಂದ ಡಿಜಿಟಲ್ ವೇದಿಕೆಗಳಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳು ಅಗತ್ಯವಾಗಿವೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಆಡಳಿತಾಧಿಕಾರಿಯಾದ ಮೆಸ್ಕಾಂ ಅಧಿಕಾರಿ ಎಸ್. ಪ್ರತಾಪ್ ಕುಮಾರ್ ಸಭೆಯಲ್ಲಿ ಸಾರ್ವಜನಿಕರ ಕುಂದುಕೊರತೆ ಮತ್ತು ಅಹವಾಲುಗಳನ್ನು ಸ್ವೀಕರಿಸಿದರು. ಅಲ್ಲದೆ ಗ್ರಾಮದ ಸ್ವಚ್ಛತೆ, ನೈರ್ಮಲ್ಯ ಹಾಗೂ ಮಕ್ಕಳ ಸುರಕ್ಷತೆಗೆ ಗ್ರಾಮಸ್ಥರು ಹೆಚ್ಚಿನ ಕಾಳಜಿ ವಹಿಸಬೇಕೆಂದು ಕರೆ ನೀಡಿದ ಆಶ್ರಿತ ಸಂಸ್ಥೆಯ ಜನಪರ ಹಾಗೂ ಸಾಮಾಜಿಕ ಕೆಲಸಗಳನ್ನು ಪ್ರಶಂಸಿಸಿದರು.

ಆಶ್ರಿತ ಸಂಸ್ಥೆಯ ತಾಲೂಕು ಸಮುದಾಯ ಸಾಮಾಜಿಕ ಕಾರ್ಯಕರ್ತ ಸಂಗಮೇಶರವರು ಬಾಲ್ಯ ವಿವಾಹ ಮುಕ್ತ ಗ್ರಾಮ ಪಂಚಾಯಿತಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸತೀಶ ಗೌಡ, ಪಂಚಾಯಿತಿ ಸಿಬ್ಬಂದಿವರ್ಗ, ಗ್ರಾಮಸ್ಥರು ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳ ಎಂಬಿಕೆ (MBK) ಒಕ್ಕೂಟದ ಸದಸ್ಯರು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲಿನಪುಡಿ ಕಲಬೆರಕೆ ಪ್ರಕರ: ಸಿಬಿಐಗೆ ವಹಿಸಲು ಆಗ್ರಹಿಸಿ ಪ್ರತಿಭಟನೆ
ಮನ್ಮುಲ್ ಅಕ್ರಮಗಳ ಕುರಿತು ತನಿಖೆಗೆ ಮಾಜಿ ಅಧ್ಯಕ್ಷ ಆಗ್ರಹ