ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಚೆಟ್ಟಳ್ಳಿಯಲ್ಲಿ ನಿವೇಶನ ರಹಿತ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಚೆಟ್ಟಳ್ಳಿಯಲ್ಲಿ ನಿವೇಶನ ರಹಿತ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು. ಚೆಟ್ಟಳ್ಳಿ ಗ್ರಾ.ಪಂ ಮುಂಭಾಗದಲ್ಲಿ ಜಮಾಯಿಸಿದ ನಿವೇಶನ ರಹಿತರು ಹಾಗೂ ವಿವಿಧ ಸಂಘಟನೆಯ ಪ್ರಮುಖರು ಘೋಷಣೆಗಳನ್ನು ಕೂಗಿ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.ಈ ಸಂದರ್ಭ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಂತವಾಗಿ ವಾಸಿಸಲು ಮನೆಯಿಲ್ಲದ ಸುಮಾರು 700ಕ್ಕಿಂತಲೂ ಹೆಚ್ಚು ಕುಟುಂಬಗಳು ತೋಟದ ಲೈನ್‌ಮನೆಗಳಲ್ಲಿ, ಅಪಾಯಕಾರಿ ಪ್ರದೇಶಗಳಲ್ಲಿಯೂ ಬದುಕು ನಡೆಸುತ್ತಿದ್ದು, ಹುಟ್ಟಿನಿಂದಲೂ ಈ ರೀತಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಗಾಂಧೀಜಿಯವರ ರಾಮರಾಜ್ಯದ ಕನಸು ಈಡೇರಲಿಲ್ಲ. ಸಂವಿಧಾನ ಆಶಯಗಳು ಜಾರಿ ಮಾಡಲು ಸಾಧ್ಯವಾಗದ ಕಾರಣಕ್ಕಾಗಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆದಿವಾಸಿ, ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಇನ್ನೂ ಅನೇಕ ಸಮುದಾಯಗಳು ಬದುಕುವ ನೈಜ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಚೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವು ಒತ್ತುವರಿಯಾಗಿದ್ದು, ಉಳ್ಳವರ ಪಾಲಾಗಿದೆ ಎಂದು ಆರೋಪಿಸಿದ ಭರತ್, ಸರ್ಕಾರಿ ಜಾಗವನ್ನು ಒತ್ತುವರಿದಾರರಿಂದ ಬಿಡಿಸಿ ಬಡ ಕುಟುಂಬಕ್ಕೆ ನಿವೇಶನ ನೀಡಿ ಮನೆ ಕಟ್ಟಿಕೊಡಲು ಹತ್ತಾರು ವರ್ಷಗಳಿಂದ ಬೇಡಿಕೆ ಇಟ್ಟು ಗ್ರಾ.ಪಂ ಮುಂಭಾಗ ಹಲವು ಭಾರಿ ಹೋರಾಟ ರೂಪಿಸಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ಸ್ಪಂದನೆ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರುತಕ್ಷಣವೇ ಚೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಲೈನ್ ಮನೆ, ಬಾಡಿಗೆ ಮನೆ, ಸಂಬಂಧಿಕ ಆಶ್ರಯದಲ್ಲಿ ಹಾಗೂ ಅಪಾಯಕಾರಿ ಜಾಗದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡಬೇಕು, ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು ಬಿಡಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು, ಗ್ರಾ.ಪಂ ವ್ಯಾಪ್ತಿಯಲ್ಲಿ ನಿವೇಶನ ರಹಿತರ ಅರ್ಜಿ ಸ್ವೀಕಾರಕ್ಕೆ ಕೂಡಲೇ ದಿನಾಂಕ ನಿಗದಿಪಡಿಸಬೇಕು, ಬಕ್ಕ ಬ್ಯಾರಿಂಗ್ ಪೈಸಾರಿ ಜಾಗವನ್ನು ಸಮತಟ್ಟು ಮಾಡಿ ನಿವೇಶನ ಹಂಚಬೇಕು, ಕಂಡಕೆರೆಯಲ್ಲಿ ಗುರುತಿಸಿರುವ ನಿವೇಶನವನ್ನು ನೈಜ ಕುಟುಂಬಕ್ಕೆ ನೀಡಬೇಕು, ಕಸವಿಲೇವಾರಿ ಸಂದರ್ಭ ಅಲ್ಲಿನ ನಿವಾಸಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು, ಸರ್ಕಾರಿ ಭೂಮಿಯನ್ನು ಗುತ್ತಿಗೆ ನೀಡುವ ಸರ್ಕಾರಿ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಬೇಡಿಕೆಯ ಮನವಿ ಪತ್ರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.ಸಿಪಿಐಎಂ ಕಾರ್ಯದರ್ಶಿ ಎಚ್.ಪಿ.ರಮೇಶ್, ಹೋರಾಟ ಸಮಿತಿಯ ಸಂಚಾಲಕ ಜಯರಾಮ್, ಉಪ ಸಂಚಾಲಕರಾದ ಕಮಲ, ಅಂಥೋಣಿ, ವೀರಮಣಿ, ಯಶೋಧ, ಸರಸ್ವತಿ, ಶಾರದ, ಸುಜಾತ, ರಾಜೇಶ್ವರಿ ಸೇರಿದಂತೆ ನಿವೇಶನ ರಹಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.